ಭಾರತದಲ್ಲಿ ಹಣ ಪಾವತಿ ಕ್ರಮದಲ್ಲಿ ದೊಡ್ಡ ಕ್ರಾಂತಿಯನ್ನೇ ತಂದಿರುವ ಯುಪಿಐ ತಂತ್ರಜ್ಞಾನ ಆಗಾಗ್ಗೆ ಅಪ್ಡೇಟ್ ಆಗುತ್ತಲೇ ಇರುತ್ತದೆ. ಹೊಸ ಅಗತ್ಯಗಳಿಗೆ ತಕ್ಕಂತೆ ಹೊಸ ಫೀಚರ್ಗಳನ್ನು ಅಳವಡಿಸಲಾಗುತ್ತಲೇ ಇದೆ. ಯುಪಿಐ ಬಂದ ಬಳಿಕ ಹಣ ಪಾವತಿಗೆ ಕ್ಯಾಷ್ ಬಳಕೆ ಗಣನೀಯವಾಗಿ ತಗ್ಗಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಇಬ್ಬರಿಗೂ ಹಣ ಪಾವತಿ ಕ್ರಿಯೆ ಸುಲಭವಾಗಿದೆ. ಜನರು ಎಷ್ಟು ಬೇಕಾದರೂ ಯುಪಿಐ ಆ್ಯಪ್ಗಳನ್ನು ಬಳಸಬಹುದು. ಎಷ್ಟು ಬೇಕಾದರೂ ಬ್ಯಾಂಕ್ ಅಕೌಂಟ್ಗಳನ್ನು ಜೋಡಿಸಿಕೊಳ್ಳಬಹುದು. ಯಾವ ಯುಪಿಐ ಆ್ಯಪ್ಗೆ ಹಣ ಬಂದರೆ ಅದು ಯಾವ ಬ್ಯಾಂಕ್ ಅಕೌಂಟ್ಗೆ ಸಂದಾಯವಾಗಬೇಕು ಎಂಬುದನ್ನು ನಿರ್ದಿಷ್ಟಪಡಿಸಬಹುದು. ಹೀಗೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ನಲ್ಲಿ ನಾನಾ ತರಹದ ಫೀಚರ್ಗಳಿವೆ. ಕೆಲ ತಿಂಗಳ ಹಿಂದೆ ಎನ್ಪಿಸಿಐ ಸಂಸ್ಥೆ ಯುಪಿಐ ಸರ್ಕಲ್ (UPI Circle) ಎನ್ನುವ ಹೊಸ ಫೀಚರ್ ಜಾರಿಗೆ ತಂದಿದೆ.
ಇದು ಒಬ್ಬ ವ್ಯಕ್ತಿಯ ಯುಪಿಐ ಅಕೌಂಟ್ ಬಳಸಿ ಬೇರೆಯವರು ಹಣ ಪಾವತಿಸಲು ಅವಕಾಶ ನೀಡುತ್ತದೆ. ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರ ಗುಂಪಿನ ಜೊತೆ ನಿಮ್ಮ ಹಣ ಹಂಚಿಕೊಳ್ಳಬಹುದು.
ಇಲ್ಲಿ ಪ್ರಾಥಮಿಕ ಬಳಕೆದಾರನಿಂದ ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್ನಲ್ಲಿ ಗರಿಷ್ಠ ಐದು ಮಂದಿಯನ್ನು ಜೋಡಿಸಬಹುದು. ಇವರು ಸೆಕೆಂಡರಿ ಯೂಸರ್ಗಳಾಗಿರುತ್ತಾರೆ. ಪ್ರಾಥಮಿಕ ಬಳಕೆದಾರನ ಯುಪಿಐ ಅಕೌಂಟ್ ಅನ್ನು ಐವರು ಮಂದಿ ಬಳಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್ಚೇಂಜ್ ಫೀಸ್ ಹೆಚ್ಚಳ
ಬ್ಯಾಂಕ್ ಅಕೌಂಟ್ ಮತ್ತು ಯುಪಿಐ ಅಕೌಂಟ್ ಹೊಂದಿರುವ ಪ್ರಾಥಮಿಕ ಬಳಕೆದಾರನು ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್ನಲ್ಲಿ ಯಾರನ್ನು ಜೋಡಿಸಬೇಕೋ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಿ ಸರ್ಕಲ್ಗೆ ಸೇರಿಸಬಹುದು. ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಮಾಡಿ ಸೇರಿಸಬಹುದು.
ಯುಪಿಐ ಸರ್ಕಲ್ ಫೀಚರ್ನಲ್ಲಿ ಎರಡು ಆಯ್ಕೆಗಳನ್ನು ಕಾಣಬಹುದು. ಈ ಸರ್ಕಲ್ಗೆ ಸೇರಿಸಲಾಗುವ ವ್ಯಕ್ತಿಗಳಿಗೆ ಹಣ ಪಾವತಿಸಲು ಪೂರ್ಣ ಹಕ್ಕು ನೀಡಬಹುದು. ಅಥವಾ ಪಾಕ್ಷಿಕ ಹಕ್ಕು ನೀಡಬಹುದು.
ಇಲ್ಲಿ ಪೂರ್ಣ ಹಕ್ಕು ನೀಡಲಾದ ವ್ಯಕ್ತಿಯು ನಿಗದಿತ ಮೊತ್ತದಷ್ಟು ಹಣ ಪಾವತಿಗಳನ್ನು ಮಾಡಲು ಯಾವುದೇ ಪಿನ್ ನೀಡಬೇಕಿಲ್ಲ. ಆ ವ್ಯಾಪ್ತಿ ಮೀರಿದಾಗ ಮಾತ್ರ ಪ್ರಾಥಮಿಕ ಬಳಕೆದಾರರ ಅನುಮತಿ ಪಡೆಯಬೇಕಾಗುತ್ತದೆ. ಎರಡನೇ ಆಯ್ಕೆಯಲ್ಲಿ, ಸೆಕೆಂಡರಿ ಯೂಸರ್ಗಳು ತಮ್ಮ ಪ್ರತಿಯೊಂದು ವಹಿವಾಟಿಗೂ ಪ್ರೈಮರಿ ಯೂಸರ್ನ ಅನುಮತಿ ಪಡೆಯಬೇಕಾಗುತ್ತದೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಒಂದೇ ಕ್ಲೇಮ್ಗೆ ಬಳಸಬಹುದಾ? ಇಲ್ಲಿದೆ ಮಾಹಿತಿ
ಯುಪಿಐ ಸರ್ಕಲ್ ಸದ್ಯ ಭೀಮ್ ಯುಪಿಐ ಆ್ಯಪ್ನಲ್ಲಿ ಮಾತ್ರ ಇರುವ ಫೀಚರ್. ಪ್ರಾಯೋಗಿಕವಾಗಿ ಅಲ್ಲಿ ಅಳವಡಿಸಲಾಗಿದೆ. ಈಗ ಬೇರೆ ಪ್ಲಾಟ್ಫಾರ್ಮ್ಗಳಲ್ಲಿ ಇದನ್ನು ಕಾಣಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ ಬೇರೆ ಬೇರೆ ಯುಪಿಐ ಆ್ಯಪ್ಗಳಲ್ಲಿ ಸರ್ಕಲ್ ಫೀಚರ್ ಅನ್ನು ಜಾರಿಗೆ ತರುವ ಸಾಧ್ಯತೆ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ