Petrol: ಲಕ್ಷದ್ವೀಪದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಲೀಟರ್​ಗೆ ಬರೋಬ್ಬರಿ 15 ರೂವರೆಗೆ ಕುಸಿತ; ಭಾರತದಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಇಳಿಕೆ

|

Updated on: Mar 17, 2024 | 10:44 AM

Lakshadweep Islands petrol and Diesel Rates: ಪ್ರವಾಸೋದ್ಯಮ ಸ್ಥಳವಾಗಿ ಗುರುತಿಸಿಕೊಂಡಿರುವ ಲಕ್ಷದ್ವೀಪದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು 15.30 ರೂವರೆಗೆ ಇಳಿಸಲಾಗಿದೆ. ಅಲ್ಲಿ ಕೆಲ ಇನ್​ಫ್ರಾ ಯೋಜನೆಗಳಿಗೆ ವೆಚ್ಚ ಭರಿಸಲು ವಿಧಿಸಲಾಗಿದ್ದ ಹೆಚ್ಚುವರಿ ತೆರಿಗೆಯನ್ನು ನಿಲ್ಲಿಸಿದ ಪರಿಣಾಮವಾಗಿ ಪೆಟ್ರೋಲ್ ಬೆಲೆ ಕಡಿಮೆ ಆಗಿದೆ. ಲಕ್ಷದ್ವೀಪದ ಎಲ್ಲೆಡೆ ಈಗ ಪೆಟ್ರೋಲ್ ಬೆಲೆ ಲೀಟರ್​ಗೆ 100.75 ರೂ ಹಾಗೂ ಡೀಸಲ್ ಬೆಲೆ ಲೀಟರ್​ಗೆ 95.71 ರೂಗೆ ಇಳಿದಿದೆ.

Petrol: ಲಕ್ಷದ್ವೀಪದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಲೀಟರ್​ಗೆ ಬರೋಬ್ಬರಿ 15 ರೂವರೆಗೆ ಕುಸಿತ; ಭಾರತದಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಇಳಿಕೆ
ಪೆಟ್ರೋಲ್ ಬಂಕ್
Follow us on

ನವದೆಹಲಿ, ಮಾರ್ಚ್ 17: ಎರಡು ತಿಂಗಳಿಂದ ದೇಶದ ಗಮನ ಸೆಳೆದಿರುವ ಲಕ್ಷದ್ವೀಪದಲ್ಲಿ ಪೆಟ್ರೋಲ್ ಬೆಲೆಯಲ್ಲಿ (Petrol and Diesel Prices) ಭಾರೀ ಇಳಿಕೆ ಆಗಿದೆ. ವರದಿ ಪ್ರಕಾರ 15.30 ರೂವರೆಗೂ ಬೆಲೆಯನ್ನು ತಗ್ಗಿಸಲಾಗಿದೆ. ಭಾರತದ ಇತಿಹಾಸದಲ್ಲೇ ಒಮ್ಮೆಗೇ ಇಷ್ಟು ಪ್ರಮಾಣದಲ್ಲಿ ಬೆಲೆ ಇಳಿಸಲಾಗಿರುವುದು ಇದೇ ಮೊದಲು. ಬೆಲೆ ಇಳಿಕೆ ಬಳಿಕವೂ ಲಕ್ಷದ್ವೀಪದಲ್ಲಿ ಪೆಟ್ರೋಲ್ ಬೆಲೆ ದೇಶದ ಇತರ ಹಲವು ಸ್ಥಳಗಿಂತ ಹೆಚ್ಚೇ ಇದೆ. ಆದರೆ ಅಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲು ಇನ್​ಫ್ರಾ ಟ್ಯಾಕ್ಸ್ ಅನ್ನು ತಗ್ಗಿಸಿರುವುದು ಕಾರಣವಾಗಿದೆ. ಲಕ್ಷದ್ವೀಪದ ಕೆಲವಡೆ ಪೆಟ್ರೋಲ್ ಬೆಲೆ 15.30 ರೂನಷ್ಟು ಇಳಿಕೆಯಾದರೆ, ಇನ್ನೂ ಕೆಲವೆಡೆ 5.2 ರೂನಷ್ಟು ಕಡಿಮೆ ಆಗಿದೆ. ಈ ಇಳಿಕೆಯೊಂದಿಗೆ ಅಲ್ಲಿ ಪೆಟ್ರೋಲ್ ಬೆಲೆ 100.75 ರೂ ಆಗಿದೆ. ಡೀಸಲ್ ಬೆಲೆ 95.71 ರೂ ಆಗಿದೆ.

ಪ್ರವಾಸೋದ್ಯಮ ಸ್ಥಳವಾಗಿರುವ ಲಕ್ಷದ್ವೀಪದಲ್ಲಿ ಪೆಟ್ರೋಲ್ ವಿತರಣೆಯ ಸೌಕರ್ಯ (Infrastructure) ಅಭಿವೃದ್ಧಿಪಡಿಸಲು ಆಗುವ ವೆಚ್ಚವನ್ನು ಭರಿಸಲು ಇಂಡಿಯನ್ ಆಯಿಲ್ ಕಳೆದ ಮೂರು ವರ್ಷಗಳಿಂದ ಲೀಟರ್​ಗೆ 6.9 ರೂ ಹೆಚ್ಚುವರಿ ತೆರಿಗೆ ವಿಧಿಸಿತ್ತು. ಕವರತ್ತಿ ಮತ್ತು ಮಿನಿಕೋಯ್​ನಿಂದ ಬೇರೆ ಬೇರೆ ಕಡೆ ಇಂಧನ ಸಾಗಿಸಲು ಮತ್ತು ವಿತರಿಸಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ದಿಗೆ ಆದ ವೆಚ್ಚವನ್ನು ಭರಿಸಲು ಈ ತೆರಿಗೆ ಹಾಕಲಾಗಿತ್ತು. ಈಗ ಈ ವೆಚ್ಚವನ್ನು ಪೂರ್ಣವಾಗಿ ಭರಿಸಲಾಗಿರುವುದರಿಂದ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯಲಾಗಿದೆ. ಈಗ ಲಕ್ಷದ್ವೀಪದ ಎಲ್ಲಾ ದ್ವೀಪ ಪ್ರದೇಶಗಳಿಗೂ ಸಮಾನವಾಗಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇದೆ.

ಇದನ್ನೂ ಓದಿ: ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು; ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

ಆಂಡ್ರಾಟ್ ಮತ್ತು ಕಲ್ಪೇನಿ ದ್ವೀಪಗಳಲ್ಲಿ 15.30 ರೂನಷ್ಟು ಪೆಟ್ರೋಲ್ ಬೆಲೆ ಇಳಿಕೆಯಾಗಿದೆ. ಈ ಮುಂಚೆ ಇಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 116.13 ರೂ ಇತ್ತು. ಡೀಸಲ್ ಬೆಲೆ 111.04 ರೂ ಇತ್ತು. ಕರವತ್ತಿ ಮತ್ತು ಮಿನಿಕೋಯ್​ನಲ್ಲಿ 5.2 ರೂನಷ್ಟು ತಗ್ಗಿದೆ. ಇಲ್ಲಿ ಪೆಟ್ರೋಲ್ ಬೆಲೆ ಈ ಮೊದಲು ಇಲ್ಲಿ 105.94 ರೂ ಇತ್ತು. ಡೀಸಲ್ ಬೆಲೆ 110.91 ರೂ ಇತ್ತು.

ಲಕ್ಷದ್ವೀಪದಲ್ಲಿ ಪ್ರಸಕ್ತ ಇರುವ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು

ಆಂಡ್ರಾಟ್ ಮತ್ತು ಕಲ್ಪೇನಿ ದ್ವೀಪಗಳು:

  • ಪೆಟ್ರೋಲ್ ಬೆಲೆ: 100.75 ರೂ (ಹಿಂದಿನ ಬೆಲೆ 116.13 ರೂ)
  • ಡೀಸಲ್ ಬೆಲೆ: 95.71 ರೂ (ಹಿಂದಿನ ಬೆಲೆ 111.04 ರೂ)

ಕರವತ್ತಿ ಮತ್ತು ಮಿನಿಕೋಯ್ ದ್ವೀಪಗಳು:

  • ಪೆಟ್ರೋಲ್ ಬೆಲೆ: 100.75 ರೂ (ಹಿಂದಿನ ಬೆಲೆ 105.94 ರೂ)
  • ಡೀಸಲ್ ಬೆಲೆ: 95.71 ರೂ (ಹಿಂದಿನ ಬೆಲೆ 111.04 ರೂ).

ಇದನ್ನೂ ಓದಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಅಗ್ಗ, ಎಲ್ಲೆಲ್ಲಿ ಎಷ್ಟೆಷ್ಟು ದರ ಇದೆ?

ದೇಶದ ಇತರ ಕೆಲವೆಡೆ ಇರುವ ಪೆಟ್ರೋಲ್ ಬೆಲೆ

ಭಾರತದ ವಿವಿಧೆಡೆ ಎರಡು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಎರಡು ರೂನಷ್ಟು ಇಳಿಸಲಾಗಿತ್ತು. ಅದರಂತೆ ಪೆಟ್ರೋಲ್ ಬೆಲೆ ಲೀಟರ್​ಗೆ 94 ರೂನಿಂದ 108 ರೂವರೆಗೂ ಇದೆ. ಬೆಂಗಳೂರಿನಲ್ಲಿ 99.84 ರೂ ಇದೆ.

ಡೀಸಲ್ ಬೆಲೆ 82 ರೂನಿಂದ 97 ರೂವರೆಗೂ ಇದೆ. ಬೆಂಗಳೂರಿನಲ್ಲಿ ಡೀಸಲ್ ಬೆಲೆ ಲೀಟರ್​ಗೆ 85.93 ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ