Philips Job Cut: ಮೈಕ್ರೋಸಾಫ್ಟ್ ಬೆನ್ನಲ್ಲೇ ಫಿಲಿಪ್ಸ್​ನಿಂದಲೂ 4,000 ಉದ್ಯೋಗ ಕಡಿತ

| Updated By: ಗಣಪತಿ ಶರ್ಮ

Updated on: Oct 24, 2022 | 3:06 PM

4,000 ಉದ್ಯೋಗ ಕಡಿತ ಮಾಡುವುದಾಗಿ ಜಾಗತಿಕ ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ ಘೋಷಿಸಿದೆ.

Philips Job Cut: ಮೈಕ್ರೋಸಾಫ್ಟ್ ಬೆನ್ನಲ್ಲೇ ಫಿಲಿಪ್ಸ್​ನಿಂದಲೂ 4,000 ಉದ್ಯೋಗ ಕಡಿತ
ಸಾಂದರ್ಭಿಕ ಚಿತ್ರ
Image Credit source: Reuters
Follow us on

ನವದೆಹಲಿ: ಮೈಕ್ರೋಸಾಫ್ಟ್ (Microsoft) ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಘೋಷಿಸಿದ ಕೆಲವೇ ದಿನಗಳಲ್ಲಿ ಇದೀಗ ಜಾಗತಿಕ ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ (Philips) ಕೂಡ ಅದೇ ಹೆಜ್ಜೆ ಇಟ್ಟಿದೆ. ಉತ್ಪಾದಕತೆ ಮತ್ತು ಚುರುಕುತನ ಹೆಚ್ಚಿಸುವ ಸಲುವಾಗಿ 4,000 ಉದ್ಯೋಗ ಕಡಿತ (Job Cut) ಮಾಡುವುದಾಗಿ ಕಂಪನಿ ಸೋಮವಾರ ಘೋಷಿಸಿದೆ. ಕಾರ್ಯಾಚರಣೆ ಮತ್ತು ಪೂರೈಕೆ ಸವಾಲುಗಳಿಂದಾಗಿ ಮೂರನೇ ತ್ರೈಮಾಸಿಕದಲ್ಲಿ ಮಾರಾಟಕ್ಕೆ ತೊಂದರೆಯಾಗಿದೆ ಎಂದು ಕಂಪನಿ ಹೇಳಿದೆ.

ಅಕ್ಟೋಬರ್​ 12ರ ಲೆಕ್ಕಾಚಾರದ ಪ್ರಕಾರ ಮಾರಾಟವು 4.3 ಬಿಲಿಯನ್ ಯುರೋ ಆಗಿದ್ದು, ಶೇಕಡಾ 5ರಷ್ಟು ಇಳಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿಯ ಉತ್ಪಾದಕತೆ ಮತ್ತು ಚುರುಕುತನ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಇದೊಂದು ಬಹಳ ಕಷ್ಟದ ಮತ್ತು ಅನಿವಾರ್ಯವಾದ ನಿರ್ಧಾರ. ತಕ್ಷಣವೇ ಜಾಗತಿಕವಾಗಿ 4,000 ಉದ್ಯೋಗ ಕಡಿತ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಇದನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಫಿಲಿಪ್ಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ರಾಯ್ ಜೇಕೋಬ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ
Share Market Predictions: ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ ರಜೆ, ತ್ರೈಮಾಸಿಕ ಫಲಿತಾಂಶ, ಮಾಸಾಂತ್ಯ…
ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
Dhanteras 2022: ದೀಪಾವಳಿಯ ಎರಡು ದಿನ 40 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ; ಸಿಎಐಟಿ

ಇದನ್ನೂ ಓದಿ: Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್

ಹಣದುಬ್ಬರ ಒತ್ತಡ, ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹಾಗೂ ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮ ಪ್ರಸಕ್ತ ತ್ರೈಮಾಸಿಕದಲ್ಲಿ ಫಿಲಿಪ್ಸ್ ಪೂರೈಕೆ ಸವಾಲನ್ನು ಎದುರಿಸುತ್ತಿದೆ. ಇದು ಕಂಪನಿಯ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ.

ಹೆಚ್ಚಿದ ದಾಸ್ತಾನು ಮತ್ತು ನಿಬಂಧನೆಗಳಿಂದಾಗಿ ಕಂಪನಿಯ ನಗದು ಗಳಿಕೆಯಲ್ಲಿಯೂ ಇಳಿಕೆಯಾಗಿದೆ. ಇದರಿಂದಾಗಿ ನಗದು ಹರಿವು 180 ದಶಲಕ್ಷ ಯುರೋಗಳಿಗೆ ಇಳಿಕೆಯಾಗಿದೆ. 2021ರ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 47ರಷ್ಟಿದ್ದ ಆರ್ಡರ್ ಸ್ವೀಕಾರದಲ್ಲಿ ಈ ಬಾರಿ ಶೇಕಡಾ 6ರಷ್ಟು ಇಳಿಕೆಯಾಗಿದೆ ಎಂದು ಫಿಲಿಪ್ಸ್ ತಿಳಿಸಿದೆ.

ಜಾಗತಿಕ ಆರ್ಥಿಕ ಹಿನ್ನಡೆಯಿಂದ ಸಂಕಷ್ಟಕ್ಕೀಡಾಗಿರುವ ಮೈಕ್ರೋಸಾಫ್ಟ್ 1,000 ಮಂದಿ ಉದ್ಯೋಗಿಗಳನ್ನು ವಜಾ ಮಾಡಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಎಕ್ಸ್​ಬಾಕ್ಸ್, ಎಡ್ಜ್​ ಸೇರಿದಂತೆ ಅನೇಕ ತಂಡಗಳಿಂದ, ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ವಜಾ ಮಾಡಿತ್ತು. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 1ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿತ್ತು. ಇಷ್ಟೇ ಅಲ್ಲದೆ, ಅಮೆರಿಕದ ಹಲವು ಟೆಕ್ ಕಂಪನಿಗಳು ಕೂಡ ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ