Diwali Muhurat Trading: ಈ ಐದು ಷೇರುಗಳು ಒಂದು ವರ್ಷದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಲ್ಲವು!
ಸಂಜೆ 6.15ಕ್ಕೆ ಆರಂಭವಾಗಲಿರುವ ಮುಹೂರ್ತ ವಹಿವಾಟು 7.15ಕ್ಕೆ ಕೊನೆಗೊಳ್ಳಲಿದೆ. ಉತ್ತಮ ಗಳಿಕೆಯ ನಿರೀಕ್ಷೆಯೊಂದಿಗೆ ಮಾಡುವ ಹೂಡಿಕೆಗೆ ತಜ್ಞರು ಹಲವು ಶಿಫಾರಸುಗಳನ್ನು ಮಾಡಿದ್ದಾರೆ.
ನವದೆಹಲಿ: ದೀಪಾವಳಿ (Diwali) ಹಬ್ಬದ ಸಂಭ್ರಮದ ನಡುವೆ ಷೇರು ಮಾರುಕಟ್ಟೆ (stock market) ಹೂಡಿಕೆದಾರರು ಮುಹೂರ್ತ ಟ್ರೇಡಿಂಗ್ (Muhurat trading) ಅವಧಿಗಾಗಿ ಕಾಯುತ್ತಿದ್ದಾರೆ. ಸಂಜೆ 6.15ಕ್ಕೆ ಆರಂಭವಾಗಲಿರುವ ಮುಹೂರ್ತ ವಹಿವಾಟು 7.15ಕ್ಕೆ ಕೊನೆಗೊಳ್ಳಲಿದೆ. ಉತ್ತಮ ಗಳಿಕೆಯ ನಿರೀಕ್ಷೆಯೊಂದಿಗೆ ಮಾಡುವ ಹೂಡಿಕೆಗೆ ತಜ್ಞರು ಹಲವು ಶಿಫಾರಸುಗಳನ್ನು ಮಾಡಿದ್ದಾರೆ.
ಮುಹೂರ್ತ ವಹಿವಾಟು ಷೇರುಗಳು
ಹಲವು ಷೇರುಗಳು ಉತ್ತಮವಾದ ಫಲಿತಾಂಶಗಳನ್ನು ನೀಡಿದ್ದಲ್ಲದೆ ಧನಾತ್ಮಕ ತ್ರೈಮಾಸಿಕ ಸಂಖ್ಯೆಗಳನ್ನು ನೀಡುವುದನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ಐಐಎಫ್ಎಲ್ ಸೆಕ್ಯೂರಿಟೀಸ್ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿರುವುದಾಗಿ ‘ಲೈವ್ಮಿಂಟ್ ಡಾಟ್ಕಾಂ’ ವರದಿ ಮಾಡಿದೆ. ಜತೆಗೆ, ಐಐಎಫ್ಎಲ್ ಸೆಕ್ಯೂರಿಟೀಸ್ ತಜ್ಞರು ಶಿಫಾರಸು ಮಾಡಿರುವ 5 ಷೇರುಗಳನ್ನೂ ಉಲ್ಲೇಖಿಸಿದೆ. ಈ ಷೇರುಗಳು ಮುಂದಿನ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ದುಪ್ಪಟ್ಟು ಗಳಿಕೆ ಮಾಡಿಕೊಡಲಿವೆ ಎಂಬುದು ಅವರ ಅಭಿಪ್ರಾಯ. ಆ ಷೇರುಗಳು ಹೀಗಿವೆ; ಫೆಡರಲ್ ಬ್ಯಾಂಕ್, ರೇಣುಕಾ ಶುಗರ್ಸ್, ಕೋಲ್ ಇಂಡಿಯಾ, ಡಿಎಲ್ಎಫ್ ಹಾಗೂ ಇಂಡಿಯನ್ ಹೋಟೆಲ್ಸ್ ಕಂಪನಿ.
ಇದನ್ನೂ ಓದಿ: Stock Market Updates: ಸತತವಾಗಿ ಹೊರಹೋಗುತ್ತಿದೆ ವಿದೇಶಿ ಬಂಡವಾಳ, ಕಾರಣವೇನು?
ಈ ಷೇರುಗಳನ್ನೇ ಶಿಫಾರಸು ಮಾಡಲು ಕಾರಣವೇನು? ಇದು ಹೇಗೆ ನಿಮ್ಮ ಗಳಿಕೆಯನ್ನು ದ್ವಿಗುಣಗೊಳಿಸಲಿದೆ ಎಂಬ ವಿವರಣೆ ಇಲ್ಲಿದೆ;
ಫೆಡರಲ್ ಬ್ಯಾಂಕ್:
ಈ ಬ್ಯಾಂಕಿಂಗ್ ಷೇರು ಉತ್ತಮ ವಹಿವಾಟು ದಾಖಲಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ವರದಿಯಲ್ಲಿಯೂ ಉತ್ತಮ ಫಲಿತಾಂಶ ದಾಖಲಿಸಿದೆ. ಸ್ಥಾನಿಕ ಹೂಡಿಕೆದಾರರು ಮುಂದಿನ ದೀಪಾವಳಿಗೆ 230 ರೂ. ಗುರಿಯೊಂದಿಗೆ ಫೆಡರಲ್ ಬ್ಯಾಂಕ್ ಷೇರು ಖರೀದಿ ಮಾಡಬಹುದು. ಪ್ರಸ್ತುತ ಮಟ್ಟದಿಂದ ಪ್ರತಿ ದೊಡ್ಡ ಕುಸಿತದ ಸಂದರ್ಭದಲ್ಲಿಯೂ ಖರೀದಿ ಮುಂದುವರಿಸುವಂತೆ ಅನುಜ್ ಗುಪ್ತಾ ಹೂಡಿಕೆದಾರರಿಗೆ ಸಲಹೆ ನೀಡಿದರು.
ರೇಣುಕಾ ಶುಗರ್
ಎಥೆನಾಲ್ಗೆ ಬೇಡಿಕೆ ಮತ್ತು ಸಕ್ಕರೆ ರಫ್ತು ಹೆಚ್ಚುತ್ತಿರುವುದು ಸಕ್ಕರೆ ಅವಲಂಬಿತ ಷೇರುಗಳಿಗೆ ಪೂರಕವಾಗುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ರೇಣುಕಾ ಶುಗರ್ಸ್ ಉತ್ತಮ ವಹಿವಾಟು ದಾಖಲಿಸುತ್ತಿದೆ. ಹೀಗಾಗಿ ಒಂದು ವರ್ಷದ ಅವಧಿಗೆ 120 ರೂ. ಗುರಿಯೊಂದಿಗೆ ರೇಣುಕಾ ಶುಗರ್ಸ್ ಷೇರು ಖರೀಸಿದಬಹುದು ಎಂದು ಐಐಎಫ್ಎಲ್ ತಜ್ಞರು ಶಿಫಾರಸು ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋಲ್ ಇಂಡಿಯಾ ಲಿಮಿಟೆಡ್ ಅಥವಾ ಸಿಐಎಲ್
ಕೋಲ್ ಇಂಡಿಯಾ ಡಿವಿಡೆಂಟ್ (ಲಾಭಾಂಶ) ಪಾವತಿಸುವ ಷೇರು ಆಗಿದೆ. ಜತೆಗೆ ಸರ್ಕಾರಿ ಸ್ವಾಮ್ಯದ ಹಾಗೂ ಸಾಲ ಮುಕ್ತ ಕಂಪನಿಯಾಗಿದೆ. ಈ ಷೇರು ಬಲವಾದ ಗಳಿಕೆಯ ಮುನ್ಸೂಚನೆ ನೀಡಿದೆ. ಸದ್ಯ 238 ರೂ. ಮುಖಬೆಲೆ ಇರುವ ಈ ಷೇರು 500 ರೂ.ವರೆಗೆ ಗಳಿಕೆ ದಾಖಲಿಸುವ ನಿರೀಕ್ಷೆ ಇದೆ ಎಂದು ಅನುಜ್ ಗುಪ್ತಾ ಹೇಳಿದ್ದಾರೆ.
ಡಿಎಲ್ಎಫ್
ಈ ರಿಯಲ್ ಎಸ್ಟೇಟ್ ಕಂಪನಿ ಉತ್ತಮ ತ್ರೈಮಾಸಿಕ ಫಲಿತಾಂಶ ನೀಡಿದೆ. ಜತೆಗೆ, ಐಷಾರಾಮಿ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚುತ್ತಿರುವುದು ಈ ಕಂಪನಿಯ ಷೇರುಗಳ ಮೇಲೆ ಗಮನಹರಿಸುವಂತೆ ಮಾಡಿದೆ. ಒಂದು ವರ್ಷಕ್ಕೆ 600 ರೂ. ಗಳಿಕೆಯ ಗುರಿಯೊಂದಿಗೆ ಈ ಷೇರು ಖರೀದಿಸಬಹುದು ಎಂದು ಗುಪ್ತಾ ಶಿಫಾರಸು ಮಾಡಿದ್ದಾರೆ. ಸದ್ಯ ಈ ಷೇರಿನ ಮುಖಬೆಲೆ 265 ರೂ. ಆಗಿದೆ.
ಇಂಡಿಯನ್ ಹೋಟೆಲ್ಸ್ ಕಂಪನಿ
ಕೋವಿಡ್ ನಂತರ ಬೇಡಿಕೆ ಹೆಚ್ಚಿರುವುದರಿಂದ ಟಾಟಾ ಸಮೂಹದ ಹೋಟೆಲ್ ಉತ್ತಮ ಗಳಿಕೆ ನಿರೀಕ್ಷೆ ಮೂಡಿಸಿದೆ. ಇಂಡಿಯನ್ ಹೋಟೆಲ್ಸ್ ಕಂಪನಿ ಷೇರುಗಳು ಅತ್ಯುತ್ತಮ ವಹಿವಾಟು ದಾಖಲಿಸುವ ನಿರೀಕ್ಷೆ ಇದೆ. ಮುಂದಿನ ವರ್ಷಕ್ಕೆ 500 ರೂ. ಗುರಿಯೊಂದಿಗೆ ಮುಹೂರ್ತ ಟ್ರೇಡಿಂಗ್ ವೇಳೆ ಈ ಷೇರು ಖರೀದಿಸಬಹುದು ಎಂದು ಗುಪ್ತಾ ಹೇಳಿದ್ದಾರೆ. ಸದ್ಯ ಈ ಷೇರಿನ ಬೆಲೆ 255 ರೂ. ಆಗಿದೆ.
****
(ಇಲ್ಲಿ ಮಾಡಲಾಗಿರುವ ಶಿಫಾರಸು ತಜ್ಞರ ಅಭಿಪ್ರಾಯವನ್ನು ಆಧರಿಸಿದೆಯೇ ವಿನಃ ‘ಟಿವಿ9 ಕನ್ನಡ ಡಿಜಿಟಲ್’ನ ಅಭಿಮತವಲ್ಲ. ಹೂಡಿಕೆಗೆ ಪೂರಕ ಮಾಹಿತಿಯಾಗಿಯಷ್ಟೇ ಇದನ್ನು ಪರಿಗಣಿಸಬಹುದು. ಹೂಡಿಕೆ ಮಾಡುವ ಮುನ್ನ ನಿಮ್ಮ ಹೂಡಿಕೆ ತಜ್ಞರ ಜತೆ ಸಮಾಲೋಚಿಸುವುದು ಉತ್ತಮ.)
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ