ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?

PM Kisan Samman Nidhi Yojana: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀಡಲಾಗುತ್ತಿರುವ ಕಂತಿನ ಹಣ ಎರಡು ಪಟ್ಟು ಹೆಚ್ಚಿಸಬಹುದು ಎಂದು ರೈತರು ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ಸ್ಕೀಮ್ ಅಡಿ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ನೀಡಲಾಗುತ್ತಿದೆ. ಒಂದು ಕಂತಿನಲ್ಲಿ ನೀಡಲಾಗುವ 2,000 ರೂ ಅನ್ನು 4,000 ರೂಗೆ ಹೆಚ್ಚಿಸಬಹುದಾ?

ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?
ರೈತ

Updated on: Jan 22, 2026 | 1:06 PM

ನವದೆಹಲಿ, ಜನವರಿ 22: ಮುಂಬರುವ ಬಜೆಟ್​ನಲ್ಲಿ (Union Budget) ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಉತ್ತೇಜನಕಾರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ನಿರೀಕ್ಷೆ ಇದೆ. ಕಳೆದ ಕೆಲ ವರ್ಷಗಳಿಂದ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಹಣ ಕ್ರಮೇಣವಾಗಿ ಹೆಚ್ಚುತ್ತಾ ಬಂದಿದೆ. 2013-14ರಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂ ನೀಡಲಾಗಿತ್ತು. 2025-26ರ ಬಜೆಟ್​ನಲ್ಲಿ 1.27 ಲಕ್ಷ ಕೋಟಿ ರೂಗಿಂತ ಹೆಚ್ಚಿನ ಮೊತ್ತವನ್ನು ಕೃಷಿಗೆ ವಿನಿಯೋಗಿಸಲಾಗಿದೆ. 2026-27ರ ಬಜೆಟ್​ನಲ್ಲಿ ಇದು 1.50 ಲಕ್ಷ ಕೋಟಿ ರೂ ಮುಟ್ಟುವ ನಿರೀಕ್ಷೆ ಇದೆ.

ಪಿಎಂ ಕಿಸಾನ್ ಯೋಜನೆಯ ಹಣ ಡಬಲ್ ಆಗುತ್ತಾ?

ಈ ಬಾರಿಯ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು. ಪಿಎಂ ಕಿಸಾನ್, ಫಸಲ್ ಬಿಮಾ ಯೋಜನೆ, ಕೃಷಿ ಸಂಚಯಿ ಯೋಜನೆ ಇತ್ಯಾದಿ ಸ್ಕೀಮ್​ಗಳಿಗೆ ಹೆಚ್ಚಿನ ಫಂಡಿಂಗ್ ಬರುವ ಅಪೇಕ್ಷೆಗಳಿವೆ.

ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು…

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಸರ್ಕಾರ ಪ್ರತೀ ವರ್ಷ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ರೈತರಿಗೆ ನೀಡುತ್ತದೆ. ಸುಮಾರು 9-10 ಕೋಟಿ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸರ್ಕಾರ ಪ್ರತೀ ಕಂತಿನ ಹಣಕ್ಕೆ ಸುಮಾರು 20,000 ಕೋಟಿ ರೂ ವ್ಯಯಿಸುತ್ತಿದೆ.

ಈಗ ಪಿಎಂ ಕಿಸಾನ್ ಹಣವನ್ನು ಡಬಲ್ ಮಾಡಿದರೆ ಸರ್ಕಾರಕ್ಕೆ ವರ್ಷಕ್ಕೆ 60,000 ಕೋಟಿ ರೂ ಹೆಚ್ಚುವರಿ ಹೊರೆ ಬೀಳುತ್ತದೆ. ಕೆಲ ವರದಿಗಳ ಪ್ರಕಾರ ಸ್ಕೀಮ್ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಕಡಿಮೆ. ಕಂತಿನ ಹಣ ಹೆಚ್ಚಿಸುವ ಯಾವ ಪ್ರಸ್ತಾಪವೂ ಇಲ್ಲ ಎಂದು ಈ ಹಿಂದೆ ಸರ್ಕಾರವೂ ಹೇಳಿದ್ದಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಈ ವರ್ಷ ಯೋಜನೆಯಲ್ಲಿ ಒಂದು ಕಂತು ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ?

ಬಜೆಟ್​ಗೆ ಮುಂಚೆ ಸಿಗುತ್ತಾ ಪಿಎಂ ಕಿಸಾನ್ ಹಣ?

2019ರಲ್ಲಿ ಶುರುವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 21 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 21ನೇ ಕಂತಿನ ಹಣ ನವೆಂಬರ್​ನಲ್ಲಿ ಬಿಡುಗಡೆ ಆಗಿದ್ದರೂ, 22ನೇ ಕಂತಿನ ಹಣ ಈ ತಿಂಗಳೇ ಸಿಗಬಹುದು ಎನ್ನಲಾಗುತ್ತಿದೆ. ಬಜೆಟ್​ಗೆ ಮುಂಚೆ ಸರ್ಕಾರ ಹಣ ಬಿಡುಗಡೆ ಮಾಡಬಹುದು ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Thu, 22 January 26