ನವದೆಹಲಿ: ಇಂದು ಏಪ್ರಿಲ್ 8, ಪ್ರಧಾನ ಮಂತ್ರಿ ಮುದ್ರಾ ಯೋಜನೆಯ 8ನೇ ವಾರ್ಷಿಕೋತ್ಸವ. ದೇಶಾದ್ಯಂತ ಕಿರು ಉದ್ಯಮಗಳಿಗೆ ಪುಷ್ಟಿ ನೀಡಲೆಂದು 2015ರಲ್ಲಿ ಆರಂಭವಾದ ಪಿಎಂ ಮುದ್ರಾ ಯೋಜನೆ (PMMY- Pradhan Mantri Mudra Yojana) ಬಹಳ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಪಿಎಂ ಮುದ್ರಾ ಯೋಜನೆ ಅಡಿ 40.82 ಕೋಟಿ ಸಾಲಗಳು ವಿತರಣೆ ಆಗಿವೆ. ಅಂದರೆ ಸುಮಾರು 41 ಕೋಟಿ ಮಂದಿ ಈ ಸಾಲವನ್ನು ಪಡೆದಿದ್ದಾರೆ. ಒಟ್ಟು 23 ಲಕ್ಷ ಕೋಟಿ ರೂ ಮೊತ್ತದ ಸಾಲವನ್ನು ನೀಡಲಾಗಿದೆ. ಇದರಲ್ಲಿ ಶೇ. 21ರಷ್ಟು ಸಾಲ ಹೊಸ ಉದ್ದಿಮೆದಾರರಿಗೆ ಕೊಡಲಾಗಿರುವುದು ವಿಶೇಷ. ಪಿಎಂ ಮುದ್ರಾ ಯೋಜನೆ ಅಡಿ ಸಾಲ ಪಡೆದವರಲ್ಲಿ ಶೇ. 70ರಷ್ಟು ಮಹಿಳೆಯರೇ ಆಗಿದ್ದಾರೆ. ಶೇ. 51ರಷ್ಟು ಸಾಲಗಳು ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗಗಳ ಜನರಿಗೆ ಸಿಕ್ಕಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆಯ ಪರಿಣಾಮಗಳ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ ತಳಮಟ್ಟದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಸಹಾಯವಾಗಿದೆ. ಇದರಿಂದ ಭಾರತದ ಆರ್ಥಿಕತೆಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಮುದ್ರಾ ಯೋಜನೆ ಒಂದು ರೀತಿಯಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಂಎಸ್ಎಂಇಗಳ ಅಭಿವೃದ್ಧಿಯಾಗಿರುವುದು ಮೇಕ್ ಇನ್ ಇಂಡಿಯಾ ಯೋಜನೆಗೂ ಸಹಾಯಕವಾಗಿದೆ. ಬಲಿಷ್ಠ ಎಂಎಸ್ಎಂಇಗಳು ದೇಶೀಯ ಮಾರುಕಟ್ಟೆಗಳಿಗೆ ಮಾತ್ರವಲ್ಲದೇ ರಫ್ತುಗಳಿಗೂ ಅನುಕೂಲ ಮಾಡಿಕೊಡುತ್ತವೆ. ಮುದ್ರಾ ಸಾಲ ಯೋಜನೆಯಿಂದ ಎಂಎಸ್ಎಂಇ ವಲಯದ ಬಲ ಹೆಚ್ಚಿದ್ದು, ಉತ್ಪಾದನೆ ಕೂಡ ಹೆಚ್ಚಿದೆ. ಇದು ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವೆ ಅಭಿಪ್ರಾಯಪಟ್ಟಿದ್ದಾರೆ.
ಪಿಎಂ ಮುದ್ರಾ ಯೋಜನೆ ಅಡಿ 8 ವರ್ಷದಲ್ಲಿ ಒಟ್ಟು ವಿತರಣೆ ಆಗಿರುವ ಸಾಲದ ಮೊತ್ತ 23 ಲಕ್ಷ ಕೋಟಿ ರುಪಾಯಿ. ಇದು ಬಹುತೇಕ ಪಾಕಿಸ್ತಾನದ ಜಿಡಿಪಿಗೆ ಸಮೀಪವಿದೆ. ಪಾಕಿಸ್ತಾನದ ಜಿಡಿಪಿ ಸುಮಾರು 28 ಲಕ್ಷ ಕೋಟಿ ರುಪಾಯಿಯಷ್ಟು (34,826 ಕೋಟಿ ಡಾಲರ್) ಇದೆ. ಸುಮ್ಮನೆ ಕುತೂಹಲಕ್ಕೆ ನೋಡುವುದಾದರೆ ಶ್ರೀಲಂಕಾ ಜಿಡಿಪಿ 7.28 ಲಕ್ಷ ಕೋಟಿ ರುಪಾಯಿ ಇದೆ. ಬಾಂಗ್ಲಾದೇಶ ಜಿಡಿಪಿ 34 ಲಕ್ಷ ಕೋಟಿ ರುಪಾಯಿ ಇದೆ. ಇದು ಪಿಎಂ ಮುದ್ರಾ ಯೋಜನೆ ಅಡಿ 23 ಲಕ್ಷ ಕೋಟಿ ರೂ ಸಾಲ ವಿತರಣೆ ಆಗಿರುವುದು ಸಣ್ಣ ಸಂಗತಿ ಅಲ್ಲ ಎಂದು ತೋರಿಸಲು ಈ ಹೋಲಿಕೆ ಅಷ್ಟೇ.
Watch the video and witness the magic of financial inclusion and the power of #PMMudraYojana! #8YearsOfMudraYojana@PMOIndia @nsitharamanoffc @nsitharaman @MeNarayanRane @minmsme @bpsvermabjp pic.twitter.com/con7KDPQb8
— MyGovIndia (@mygovindia) April 8, 2023
ಕಾರ್ಪೊರೇಟೇತರ ಮತ್ತು ಕೃಷಿಯೇತರ ಕಿರು ಉದ್ಯಮ ವಲಯಕ್ಕೆ ಪುಷ್ಟಿ ನೀಡಲು ಈ ಪಿಎಂ ಮುದ್ರಾ ಯೋಜನೆ ಅಡಿ ಪ್ರತಿ ಅರ್ಹ ವ್ಯಕ್ತಿಗೂ 10 ಲಕ್ಷ ರೂವರೆಗೂ ಅಡಮಾನರಹಿತ ಸಾಲ (Collateral-free Loan) ನೀಡಲಾಗುತ್ತದೆ. ಇದರಲ್ಲಿ 41 ಕೋಟಿ ಸಣ್ಣ ಉದ್ದಿಮೆದಾರರು (Micro Units) ಈವರೆಗೂ ಸಾಲ ಪಡೆದಿದ್ದಾರೆ. ಈ ಪೈಕಿ 8 ಕೋಟಿ ಮಂದಿ ಇದೇ ಮೊದಲ ಬಾರಿಗೆ ಮುದ್ರಾ ಸಾಲದ ದೆಶೆಯಿಂದ ಉದ್ದಿಮೆದಾರರಾಗಿದ್ದಾರೆ.
2015 ಏಪ್ರಿಲ್ 8ರಂದು ಶುರುವಾದ ಪಿಎಂ ಮುದ್ರಾ ಯೋಜನೆಯಲ್ಲಿ ಎಂಎಸ್ಎಂಇಗಳಿಗೆ 10 ಲಕ್ಷ ರೂವರೆಗೂ ಸುಲಭವಾಗಿ ಕಿರು ಸಾಲಗಳನ್ನು ನೀಡಲಾಗುತ್ತದೆ. ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ನಂತೆ ಮುದ್ರಾ ಸಾಲಗಳಿಗೂ ಯಾವುದೇ ಅಡಮಾನ ಬೇಕಾಗುವುದಿಲ್ಲ. ಸರ್ಕಾರ ನೇರವಾಗಿ ಈ ಸಾಲ ನೀಡುವುದಿಲ್ಲ. ಅದಕ್ಕಾಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ), ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್ಐ) ಹಾಗೂ ಇತರ ಹಣಕಾಸು ಮಧ್ಯವರ್ತಿಗಳು ಪಿಎಂ ಮುದ್ರಾ ಯೋಜನೆ ಅಡಿ ಸಾಲ ಒದಗಿಸುತ್ತವೆ. ಸಾಲಕ್ಕೆ ಬಡ್ಡಿ ಎಷ್ಟು ವಿಧಿಸಬೇಕು ಎಂಬುದನ್ನು ಆರ್ಬಿಐ ಮಾರ್ಗಸೂಚಿ ಆಧಾರದಲ್ಲಿ ಬ್ಯಾಂಕು ಅಥವಾ ಇತರ ಹಣಕಾಸು ಸಂಸ್ಥೆಗಳು ನಿರ್ಧರಿಸುತ್ತವೆ.
ಇದನ್ನೂ ಓದಿ: Loan: ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದಿರಿ
ಪಿಎಂ ಮುದ್ರಾ ಯೋಜನೆಯಲ್ಲಿ 3 ವಿಭಾಗಗಳಿವೆ. ಶಿಶು ಸಾಲ, ಕಿಶೋರ ಸಾಲ ಮತ್ತು ತರುಣ ಸಾಲ ಎಂದು ವಿಭಜಿಸಬಹುದು. 50 ಸಾವಿರ ರೂ ಒಳಗಿನದ್ದು ಶಿಶು ಸಾಲ; 50 ಸಾವಿರದಿಂದ 5 ಲಕ್ಷ ರೂ ವರೆಗಿನ ಸಾಲ ಕಿಶೋರ ಸಾಲ; 5 ಲಕ್ಷದಿಂದ 10 ಲಕ್ಷ ರೂವರೆಗಿನ ಸಾಲ ತರುಣ ಸಾಲ.
ಪಿಎಂ ಮುದ್ರಾ ಯೋಜನೆ ಅಡಿ ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದನ್ನು ಉತ್ತೇಜಿಸಲು ಸರ್ಕಾರ 2020 ಮೇ 14ರಂದು ಬಡ್ಡಿ ಸಬ್ಸಿಡಿ ಸೌಲಭ್ಯ ಘೋಷಿಸಿತು. ಸರಿಯಾಗಿ ಸಾಲದ ಮರುಪಾವತಿ ಮಾಡುತ್ತಿರುವವರಿಗೆ ಬಡ್ಡಿ ಹಣದಲ್ಲಿ ಶೇ. 2ರಷ್ಟು ಸಬ್ಸಿಡಿ ಕೊಡಲಾಯಿತು. ಈ ಸಬ್ಸಿಡಿ ಸ್ಕೀಮ್ 2021 ಆಗಸ್ಟ್ 31ರವರೆಗೂ ಇತ್ತು. ಒಟ್ಟು 636 ಕೋಟಿ ರೂನಷ್ಟು ಸಬ್ಸಿಡಿಯನ್ನು ಸಣ್ಣ ಉದ್ದಿಮೆದಾರರಿಗೆ ಕೊಡಲಾಯಿತು.
ಇದನ್ನೂ ಓದಿ: IPL- ಐಪಿಎಲ್ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ
ಪಿಎಂ ಮುದ್ರಾ ಸೇರಿದಂತೆ ಸರ್ಕಾರದ ಸಾಲ ಯೋಜನೆಗಳು ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ 2016 ಜನವರಿಯಲ್ಲಿ ಸಾಲ ಖಾತ್ರಿ ನಿಧಿ (ಕ್ರೆಡಿಟ್ ಗ್ಯಾರಂಟಿ ಫಂಡ್ ಫಾರ್ ಮೈಕ್ರೋ ಯೂನಿಟ್ಸ್) ಸ್ಥಾಪಿಸಿತು.
ಇದು ಪಿಎಂ ಮುದ್ರಾ ಯೋಜನೆ ಅಡಿ ಸರಿಯಾದ ರೀತಿಯಲ್ಲಿ ಸಾಲ ವಿತರಣೆ ಆಗುತ್ತಿವೆಯಾ ಎಂದು ನಿಗಾ ವಹಿಸುತ್ತದೆ. ಹಅಗೆಯೇ, ಪಿಎಂ ಜನ್ ಧನ್ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಸಾಲ ವಿತರಣೆ; ಸ್ವಸಹಾಯ ಗುಂಪು (ಸೆಲ್ಫ್ ಹೆಲ್ಪ್ ಗ್ರೂಪ್) 20 ಲಕ್ಷ ರೂವರೆಗೆ ಸಾಲ ವಿತರಣೆ ಆಗುತ್ತಿರುವುದನ್ನು ಸಿಜಿಎಫ್ಎಂಯು ಖಾತ್ರಿಪಡಿಸಿಕೊಳ್ಳುವ ಕೆಲಸ ಮಾಡುತ್ತಿದೆ.
Published On - 11:17 am, Sat, 8 April 23