Narendra Modi: ರುಪೇ ಮತ್ತು ಯುಪಿಐ ಜಾಗತಿಕವಾಗಿ ಭಾರತದ ಗುರುತು ಎಂದ ಪ್ರಧಾನಿ ಮೋದಿ

|

Updated on: Mar 07, 2023 | 5:34 PM

PM Praises RuPay and UPI Tech: ಬಜೆಟ್ ನಂತರದ 10ನೇ ವೆಬಿನಾರ್ ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಅಭಿವೃದ್ಧಿಯಾದ ಪ್ಲಾಟ್​ಫಾರ್ಮ್​ಗಳು ಜಾಗತಿಕವಾಗಿ ಮಾದರಿಯಾಗುತ್ತಿವೆ. ರುಪೇ ಮತ್ತು ಯುಪಿಐ ತಂತ್ರಜ್ಞಾನಗಳು ಭಾರತದ ಹೆಗ್ಗುರುತೆನಿಸಿಕೊಂಡಿವೆ ಎಂದು ಹೇಳಿದ್ದಾರೆ.

Narendra Modi: ರುಪೇ ಮತ್ತು ಯುಪಿಐ ಜಾಗತಿಕವಾಗಿ ಭಾರತದ ಗುರುತು ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಪೂರಕವಾಗಿ ರೂಪುಗೊಂಡಿರುವ ಯುಪಿಐ ತಂತ್ರಜ್ಞಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೆ ಕೊಂಡಾಡಿದ್ದಾರೆ. ಅಭಿವೃದ್ಧಿ ಅವಕಾಶ ನಿರ್ಮಾಣಕ್ಕೆ ಹಣಕಾಸು ಸೇವೆಗಳ ಕ್ಷಮತೆ ಹೆಚ್ಚಿಸುವ ವಿಚಾರದ ಬಗ್ಗೆ ಪ್ರಧಾನಿಗಳು ಪೋಸ್ಟ್ ಬಜೆಟ್ ವೆಬಿನಾರ್​ನಲ್ಲಿ (Post Budget Webinar) ಮಾತನಾಡುತ್ತಾ, ರುಪೇ ಮತ್ತು ಯುಪಿಐ ತಂತ್ರಜ್ಞಾನಗಳು ಜಾಗತಿಕವಾಗಿ ಭಾರತದ ಗುರುತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2023ರ ಬಜೆಟ್ ಮಂಡನೆ ಬಳಿಕ ಪ್ರಧಾನಿಗಳು ನಡೆಸಿದ 10ನೇ ವೆಬಿನಾರ್ ಇದಾಗಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಪ್ಲಾಟ್​ಫಾರ್ಮ್​ಗಳು ಜಗತ್ತಿಗೆ ಮಾದರಿಯಾಗುತ್ತಿವೆ ಎಂದ ಅವರು, ರುಪೇ ಮತ್ತು ಯುಪಿಐ ಕೇವಲ ಕಡಿಮೆ ಬೆಲೆಯ ಮತ್ತು ಹೆಚ್ಚು ಸುಭದ್ರ ತಂತ್ರಜ್ಞಾನ (Secure Technology) ಮಾತ್ರವಲ್ಲ, ಅವು ನಮ್ಮ ದೇಶದ ಗುರುತು ಎನಿಸಿಕೊಂಡಿದೆ. ನಾವೀನ್ಯತೆಗೂ (Innovation) ಅವಕಾಶ ಇದೆ ಎಂದಿದ್ದಾರೆ.

ಇಡೀ ವಿಶ್ವದಲ್ಲಿ ಹಣಕಾಸು ಒಳಗೊಳ್ಳುವಿಕೆ (Financial Inclusion) ಮತ್ತು ಸಬಲೀಕರಣಕ್ಕೆ (Empowerment) ಯುಪಿಐ ಒಂದು ಸಾಧನವಾಗಬೇಕು. ನಾವು ಆ ನಿಟ್ಟಿನಲ್ಲಿ ಒಟ್ಟಿಗೆ ಕೆಲಸ ಮಾಡಬೇಕಿದೆ. ನಮ್ಮ ಹಣಕಾಸು ಸಂಸ್ಥೆಗಳು ಹಣಕಾಸು ತಂತ್ರಜ್ಞಾನದೊಂದಿಗೆ ಸಾಧ್ಯವಾದಷ್ಟೂ ಹೆಚ್ಚು ಸಹಭಾಗಿತ್ವ ಹೊಂದುವ ಮೂಲಕ ತಮ್ಮ ವ್ಯಾಪ್ತಿಯನ್ನು ಮತ್ತು ಸಾಮರ್ಥ್ಯವನ್ನು ವಿಸ್ತರಿಸಬೇಕಿದೆ ಎಂದು ಪ್ರಧಾನಿಗಳು ಹೇಳಿದರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿBIG Gifts: ನಿರುದ್ಯೋಗಿಗಳಿಗೆ ಭತ್ಯೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಏರಿಕೆ; ಈ ರಾಜ್ಯದವರಿಗೆ ಹೋಳಿ ಗಿಫ್ಟ್

ಹಣಕಾಸು ತಂತ್ರಜ್ಞಾನ ನಾವೀನ್ಯತೆಗೆ ಪೂರಕವಾದ ಇಕೋಸಿಸ್ಟಂ ಅಥವಾ ವ್ಯವಸ್ಥೆ ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವುದು ಹೌದು. ಭಾರತದ ಡಿಜಿಟಲ್ ಪೇಮೆಂಟ್ ಸೌಕರ್ಯವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದ ಯುಪಿಐ ಪ್ಲಾಟ್​ಫಾರ್ಮ್ ಬಗ್ಗೆ ಬಹಳ ದೇಶಗಳು ಆಸಕ್ತಿ ತೋರಿವೆ. ಯುಪಿಐ ಅಳವಡಿಕೆಗೆ ಭಾರತದ ನೆರವು ಯಾಚಿಸುತ್ತಿವೆ. ಕಳೆದ ತಿಂಗಳಷ್ಟೇ ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ವ್ಯವಸ್ಥೆಗಳನ್ನು ಜೋಡಿಸಿ ಎರಡೂ ದೇಶಗಳ ಜನರ ನಡುವೆ ವಿನೂತನವಾದ ಪೇಮೆಂಟ್ ವ್ಯವಸ್ಥೆ ಏರ್ಪಡಿಸಲಾಗಿದೆ.

ಒಂದು ದೇಶದಿಂದ ಜನರು ಮತ್ತೊಂದು ದೇಶಕ್ಕೆ ಹಣ ವರ್ಗಾವಣೆ ಮಾಡಬೇಕೆಂದರೆ ಸಾಕಷ್ಟು ಶುಲ್ಕ ತೆರಬೇಕಾಗುತ್ತದೆ. ವಹಿವಾಟು ರಿಯಲ್​ಟೈಮ್​ನಲ್ಲಿ ದಾಖಲಾಗುವುದಿಲ್ಲ. ಈಗ ಎರಡು ದೇಶಗಳ ಪೇಮೆಂಟ್ ವ್ಯವಸ್ಥೆಯನ್ನು ಜೋಡಿಸುವುದರಿಂದ ಬಹಳ ಸುಲಭವಾಗಿ ಮತ್ತು ರಿಯಲ್ ಟೈಮ್​ನಲ್ಲಿ ಹಣ ರವಾನೆ ಮಾಡಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಯುಪಿಐ ಮೂಲಕ ನಡೆಯುವ ವಹಿವಾಟಿನಷ್ಟೇ ಸರಳ ಮತ್ತು ಕ್ಷಿಪ್ರವಾಗಿರುತ್ತದೆ. ಶುಲ್ಕವೂ ಹೆಚ್ಚಿರುವುದಿಲ್ಲ.

ಇದನ್ನೂ ಓದಿG20 Meeting Calender: ಭಾರತದಲ್ಲಿ ಜಿ20 ಸಭೆಗಳು; ಇಲ್ಲಿದೆ ಪೂರ್ತಿ ಕ್ಯಾಲೆಂಡರ್

ಯುಎಇ, ಮಾರಿಷಸ್, ಇಂಡೋನೇಷ್ಯಾ ಮೊದಲಾದ ದೇಶಗಳೂ ಕೂಡ ಭಾರತದ ಯುಪಿಐ ಅನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಮುಂದಾಗಬಹುದು ಎನ್ನುವಂತಹ ಸುದ್ದಿಗಳಿವೆ. ಯುಪಿಐ ಅನ್ನು ಜಾಗತಿಕವಾಗಿ ಜನಪ್ರಿಯಗೊಳಿಸಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದಾಹರಣೆಗೆ, ಜಿ20 ಸಭೆಗಳಿಗೆ ಭಾರತಕ್ಕೆ ಬರುತ್ತಿರುವ ಪ್ರವಾಸಿಗರು ಇಲ್ಲಿ ಯುಪಿಐ ಲಿಂಕ್ ಆದ ವ್ಯಾಲಟ್ ಆ್ಯಪ್ ಬಳಸಿ ಅಂಗಡಿ, ಮಳಿಗೆಗಳಲ್ಲಿ ಪೇಮೆಂಟ್ ಮಾಡಬಹುದು. ಜಿ20 ಸಭೆಗೆ ಬರುವ ಪ್ರತಿನಿಧಿಗಳು ಅವರ ದೇಶಗಳಲ್ಲಿ ಪ್ರಭಾವಿ ಹಂತದಲ್ಲಿರುವ ಗಣ್ಯರಾಗಿರುವುದರಿಂದ ಯುಪಿಐ ವ್ಯವಸ್ಥೆಯನ್ನ ತಮ್ಮ ದೇಶಗಳಲ್ಲಿ ಜಾರಿಗೆ ತರುವ ಬಗ್ಗೆ ಅವರು ಅಸ್ಥೆ ವಹಿಸಬಹುದು. ಹೀಗಾಗಿ, ಸರ್ಕಾರ ಇಂಥ ಕೆಲ ಕ್ರಮಗಳ ಮೂಲಕ ಯುಪಿಐ ಅನ್ನು ಪ್ರಚುರಪಡಿಸುತ್ತಿದೆ.

ಭಾರತದಲ್ಲಿ ನೋಟ್ ಬ್ಯಾನ್ ಬಳಿಕ ಡಿಜಿಟಲ್ ಕ್ರಾಂತಿಯೇ ಆಗಿಹೋಗಿದೆ. ಯುಪಿಐ ಪೇಮೆಂಟ್ ವ್ಯವಸ್ಥೆಯು ನಿರೀಕ್ಷೆಮೀರಿ ದೇಶದ ಮೂಲೆಮೂಲೆಗೂ ವ್ಯಾಪಿಸಿದೆ. ಭೂತಾಯಿಯ ಸೇವೆ ಮಾಡುವ ಒಬ್ಬ ಸಣ್ಣ ಕೃಷಿಕನೂ ಇವತ್ತು ಯುಪಿಐ ಬಳಸುತ್ತಾನೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ