ನಿವೃತ್ತಿ ಜೀವನಕ್ಕೆ ನಿಶ್ಚಿತವಾದ ಆದಾಯ ಇರಬೇಕು. ಇಲ್ಲದಿದ್ದರೆ ಅವಮಾನ ಎದುರಿಸಬೇಕಾಗುತ್ತದೆ, ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅದಕ್ಕಾಗಿಯೇ ಕೆಲವು ಸರ್ಕಾರದ ಯೋಜನೆಗಳಿವೆ. ಮುಂಚಿತವಾಗಿಯೇ ಆಲೋಚನೆ ಮಾಡಿಟ್ಟುಕೊಂಡಿದ್ದಲ್ಲಿ ಗೌರವ ಹಾಗೂ ನೆಮ್ಮದಿಯುತವಾದ ನಿವೃತ್ತಿ ಜೀವನ ಕಳೆಯಬಹುದು. ಈಗ ಈ ಲೇಖನದಲ್ಲಿ ತಿಳಿಸಲು ಹೊರಟಿರುವುದು ಅಂಥದ್ದೇ ಒಂದು ಯೋಜನೆ ಬಗ್ಗೆ. 60 ವರ್ಷ ಮೇಲ್ಪಟ್ಟವರು ಈ “ಪಿಎಂ ವಯ ವಂದನಾ ಯೋಜನಾ” (PM Vaya Vandana Scheme) ಅಡಿಯಲ್ಲಿ ವರ್ಷಕ್ಕೆ 1,11,000 ರೂಪಾಯಿ ಪಡೆಯಬಹುದು. ಅಂದರೆ ಒಂದು ತಿಂಗಳಿಗೆ 9,250 ರೂಪಾಯಿ ಆಯಿತು. ತಮ್ಮ ಜೀವನದ ಅತಿ ಮುಖ್ಯ ಘಟ್ಟದಲ್ಲಿ ಹಿರಿಯ ಜೀವಗಳು ಸ್ವಾವಲಂಬಿಗಳಾಗಿ ಬದುಕಲು ಬೇಕಾದ ಆರ್ಥಿಕ ಬೆಂಬಲ ದೊರೆಯಲಿ ಎಂಬ ಕಾರಣಕ್ಕೆ ಈ ಯೋಜನೆ ಆರಂಭಿಸಲಾಗಿದೆ. ಮೊದಲಿಗೆ ಇದರ ಅವಧಿಗೆ 2020ರ ಮಾರ್ಚ್ 31ರ ತನಕ ಇತ್ತು. ಅದನ್ನು ಈಗ 2023ರ ಮಾರ್ಚ್ ತನಕ ವಿಸ್ತರಿಸಲಾಗಿದೆ.
PM-VVY ಯಾರಿಗೆ ಅನುಕೂಲಕರ?
ಈ ಯೋಜನೆಗೆ ಸೇರ್ಪಡೆ ಆಗುವುದಕ್ಕೆ ಕನಿಷ್ಠ ವಯಸ್ಸು 60 ವರ್ಷ. ಅಂದರೆ 60 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟವರು ಹೂಡಿಕೆ ಮಾಡಬಹುದು. ಅಂದಹಾಗೆ ಗರಿಷ್ಠ ವಯೋಮಾನದ ಮಿತಿ ಏನೂ ಇಲ್ಲ.
ಗರಿಷ್ಠ ಹೂಡಿಕೆ 15 ಲಕ್ಷ ರೂಪಾಯಿ
ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 15 ಲಕ್ಷ ಹೂಡಬಹುದು. ಈ ಯೋಜನೆಯ ಕಾರ್ಯ ನಿರ್ವಹಣೆ ಜವಾಬ್ದಾರಿಯಲ್ಲಿ ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್ಐಸಿ) ವಹಿಸಲಾಗಿದೆ. ಅಂದಹಾಗೆ ಪಿಎಂ ವಯ ವಂದನ ಯೋಜನಾ ಅಡಿಯಲ್ಲಿ ಪೆನ್ಷನ್ ಸಿಗಬೇಕು ಎಂದಾದಲ್ಲಿ ಇಡಿಗಂಟು (Lump Sum) ಮೊತ್ತವನ್ನು ಹೂಡಿಕೆ ಮಾಡಬೇಕು. ಆ ನಂತರ ಪೆನ್ಷನ್ ಅನ್ನು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಡೆಯಬಹುದು.
ವಾರ್ಷಿಕ ಪೆನ್ಷನ್ ಎಷ್ಟು?
ಪಿಎಂ ವಯ ವಂದನ ಯೋಜನೆ ಅಡಿಯಲ್ಲಿ ತಿಂಗಳಿಗೆ 1000 ರೂಪಾಯಿ ಪೆನ್ಷನ್ ಬರಬೇಕು ಅಂದರೆ, 1,62,612 ರೂಪಾಯಿ ಹೂಡಿಕೆ ಮಾಡಬೇಕು. ಈ ಯೋಜನೆ ಅಡಿಯಲ್ಲಿ ಗರಿಷ್ಠ ಪೆನ್ಷನ್ ತಿಂಗಳಿಗೆ 9,250 ರೂ., ಮೂರು ತಿಂಗಳಿಗಾದರೆ 27,750 ರೂ., ಆರು ತಿಂಗಳಿಗೆ ಒಮ್ಮೆಯಾದಲ್ಲಿ ರೂ. 55,500 ಹಾಗೂ ವರ್ಷಕ್ಕೆ ಒಮ್ಮೆಯಾದಲ್ಲಿ 1,11,000 ರೂಪಾಯಿ ಬರುತ್ತದೆ.
ಪಿಎಂ ವಯ ವಂದನ ಯೋಜನಾದಲ್ಲಿ ಹೂಡಿಕೆ ಮಾಡೋದು ಹೇಗೆ?
ಪಿಎಂವಿವಿವೈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದಲ್ಲಿ 022-67819281 ಅಥವಾ 022-67819290 ಕರೆ ಮಾಡಬಹುದು. ಅಥವಾ ಟೋಲ್ ಫ್ರೀ ಸಂಖ್ಯೆ 1800-227-717 ಕರೆ ಮಾಡಬಹುದು.
ಸೇವಾ ತೆರಿಗೆ ವಿನಾಯಿತಿ
ಈ ಯೋಜನೆಯು ಸೇವಾ ತೆರಿಗೆ ಹಾಗೂ ಜಿಎಸ್ಟಿಯಿಂದ ವಿನಾಯಿತಿ ಪಡೆದಿದೆ. ಬಹು ಮುಖ್ಯ ಸಂಗತಿ ಏನೆಂದರೆ, ತೀರಾ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಅವಧಿಗೆ ಪೂರ್ವವಾಗಿಯೇ ವಿಥ್ ಡ್ರಾ ಮಾಡಬಹುದು.
ಅಗತ್ಯ ದಾಖಲಾತಿಗಳು ಯಾವುವು ಬೇಲಾಗುತ್ತವೆ?
PAN ಕಾರ್ಡ್, ವಿಳಾಸ ದೃಢೀಕರಣದ ನಕಲು, ಬ್ಯಾಂಕ್ ಪಾಸ್ಬುಕ್ ಮೊದಲ ಪುಟದ ನಕಲು ಇವಿಷ್ಟು ಸಹ ಯೋಜನೆಯಲ್ಲಿ ಹಣ ಹೂಡುವ ಸಂದರ್ಭಕ್ಕೆ ಬೇಕಾಗುತ್ತವೆ.
ಸಾಲ ಸೌಲಭ್ಯ
ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಕೂಡ ದೊರೆಯುತ್ತದೆ. ಪಾಲಿಸಿ ಖರೀದಿಸಿದ 3 ವರ್ಷಗಳ ನಂತರ ಸಾಲ ಪಡೆಯಬಹುದು. ಈ ಸ್ಕೀಮ್ನಡಿ ಪಾಲಿಸಿ ಖರೀದಿಸಿರುವ ಮೊತ್ತದ ಶೇ 75ರಷ್ಟನ್ನು ತೆಗೆದುಕೊಳ್ಳಬಹುದು. ಸರ್ಕಾರದ ಇತರ ಪೆನ್ಷನ್ ಸ್ಕೀಮ್ಗಳಂತೆ ಇದರಲ್ಲಿ ತೆರಿಗೆ ಅನುಕೂಲಗಳಿಲ್ಲ.
ಇದನ್ನೂ ಓದಿ: Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ