Cryptocurrency: ಬಿಟ್ಕಾಯಿನ್ ಮೌಲ್ಯ 24 ಗಂಟೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿ 40 ಸಾವಿರ ಯುಎಸ್ಡಿ ಸಮೀಪ ವಹಿವಾಟು
ಕಳೆದ 24 ಗಂಟೆಯಲ್ಲಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಶೇ 15ರಷ್ಟು ಏರಿಕೆಯನ್ನು ಕಂಡು, 40 ಸಾವಿರ ಯುಎಸ್ಡಿ ಸಮೀಪ ವಹಿವಾಟು ನಡೆಸುತ್ತಿದೆ. ಇಳಿಯುತ್ತಾ ಸಾಗಿದ್ದ ಕ್ರಿಪ್ಟೋಕರೆನ್ಸಿಗಳು ಮತ್ತೆ ಚೇತರಿಕೆ ಹಾದಿಗೆ ಮರಳಿವೆ.
ಆರ್ಕ್ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಎಲ್ಎಲ್ಸಿಯ ಕ್ಯಾಥಿ ವುಡ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿಕೆ ನಂತರ ಕ್ರಿಪ್ಟೋಕರೆನ್ಸಿಗಳು (Cryptocurrency) ಗಳಿಕೆ ಮುಂದುವರಿಸಿವೆ. ಅದರಲ್ಲೂ ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ (Bitcoin) 40,000 ಯುಎಸ್ಡಿ ಮಟ್ಟಕ್ಕೆ ಸಮೀಪದಲ್ಲಿದೆ. ಕಾಯಿನ್ಡೆಸ್ಕ್ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಬಿಟ್ಕಾಯಿನ್ ದರದಲ್ಲಿ ಶೇ 15ರಷ್ಟು ಹೆಚ್ಚಳವಾಗಿ 39,544 ಅಮೆರಿಕನ್ ಡಾಲರ್ ಮುಟ್ಟಿದೆ. 50 ದಿನಗಳ ಸರಾಸರಿ ದರವನ್ನು ವಾರಾಂತ್ಯದಲ್ಲಿ ಬಿಟ್ ಕಾಯಿನ್ ಮೀರಿದೆ. ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿಯಾದ ಈಥರ್ ಕೂಡ ಶೇ 7ರಷ್ಟು ಏರಿಕೆ ಕಂಡು 2,330 ಅಮೆರಿಕನ್ ಡಾಲರ್ ಆಗಿದೆ. Dogecoin ಶೇ 9ರಷ್ಟು ಮೇಲೇರಿ 0.20 ಡಾಲರ್ ಮಟ್ಟದಲ್ಲಿದೆ. ಇತರ ಡಿಜಿಟಲ್ ಕರೆನ್ಸಿಗಳಾದ XRP, ಕಾರ್ಡಾನೋ, ಯುನಿಸ್ವಾಪ್, ಲೈಟ್ಕಾಯಿನ್ ಕೂಡ ಕಳೆದ 24 ಗಂಟೆಯಲ್ಲಿ ಶೇ 8ಕ್ಕಿಂತ ಹೆಚ್ಚು ಏರಿಕೆ ಆಗಿವೆ.
ಕಳೆದ ವಾರ ಬಿಟ್ ಕಾಯಿನ್ 30,000 ಯುಎಸ್ಡಿಗಿಂತ ಕೆಳಗೆ ಬಿದ್ದಾಗ ಇನ್ನಷ್ಟು ಕುಸಿಯುವ ಆತಂಕ ಇತ್ತು. ಆ ಮಟ್ಟದಿಂದ ಕೆಳಗೆ ಜಾರಿದಲ್ಲಿ ಇನ್ನಷ್ಟು ಕುಸಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆದರೆ ಕಳೆದ ವಾರ “ದ ಬಿ ವರ್ಡ್” ಸಮಾವೇಶದಲ್ಲಿ ಎಲಾನ್ ಮಸ್ಕ್ ಮಾತನಾಡಿ, ಬಿಟ್ ಕಾಯಿನ್ ಯಶಸ್ವಿ ಆಗಬೇಕು ಮತ್ತು ತಮ್ಮ ಒಡೆತನದ ಸ್ಪೇಸ್ ಎಕ್ಸ್ ಕಂಪೆನಿ ಕೆಲವನ್ನು ಹೊಂದಿದೆ ಎಂದಿದ್ದರು. ಕ್ಯಾಥಿ ವುಡ್ ಮಾತನಾಡಿ, ಕಾರ್ಪೊರೇಷನ್ಗಳು ತಮ್ಮ ಬ್ಯಾಲೆನ್ಸ್ಶೀಟ್ಗಳಿಗೆ ಬಿಟ್ಕಾಯಿನ್ ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದರು. ಇನ್ನು ಸ್ಕ್ವೇರ್ ಇಂಕ್. ಸಿಇಒ ಜಾಕ್ ಡೋರ್ಸೆ ಮಾತನಾಡಿ, ಕಾಯಿನ್ಗೆ ಎಂಥ ಕ್ಲಿಷ್ಟ ಸನ್ನಿವೇಶದಲ್ಲೂ ತಡೆದುಕೊಳ್ಳುವ ಸಾಮರ್ಥ್ಯ ಇದೆ ಎಂದಿದ್ದರು.
ಬಿಟ್ಕಾಯಿನ್ ಬಳಸಿ ಖರೀದಿ ಮಾಡುವುದನ್ನು ಟೆಸ್ಲಾದಿಂದ ಮೇ ತಿಂಗಳಲ್ಲಿ ಅಮಾನತು ಮಾಡಿದೆ. ಮೈನಿಂಗ್ನಲ್ಲಿ ಫಾಸಿಲ್ ಫ್ಯೂಯೆಲ್ ಬಳಕೆ ಮಾಡುವ ಆತಂಕದಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಇದರಿಂದಾಗಿ ಡಿಜಿಟಲ್ ಕರೆನ್ಸಿ ಇಳಿಕೆಗೆ ಕಾರಣವಾಗಿದೆ. ಮೇ ತಿಂಗಳ ಮಧ್ಯಭಾಗದಿಂದ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ 1.3 ಲಕ್ಷ ಕೋಟಿ ಅಮೆರಿಕನ್ ಡಾಲರ್ ಕೊಚ್ಚಿ ಹೋಗಿತ್ತು. ಚೀನಾ, ಯುರೋಪ್ ಮತ್ತು ಯು.ಎಸ್.ನಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ನಿಯಂತ್ರಕ ಸಂಸ್ಥೆಗಳಿಂದ ಕೆಲವು ನಿರ್ಬಂಧಗಳನ್ನು ಹೆಚ್ಚು ಮಾಡಿರುವುದು ಮತ್ತಿತರ ಕಾರಣಗಳು ಪರಿಣಾಮ ಬೀರಿವೆ.
(Cryptocurrency Bitcoin Increased By 15 Percent In 24 Hours And Trading Near 40000 USD)
Published On - 11:23 am, Mon, 26 July 21