ಆಲೂ ಬಿಸ್ಕೆಟ್​ ಸ್ಪರ್ಧೆಗೆ ಇಳಿದ ಬ್ರಿಟಾನಿಯಾ ಹಾಗೂ ಐಟಿಸಿ; ಬಾಂಗ್ಲಾದೇಶೀ ಬ್ರ್ಯಾಂಡ್​ಗೆ ಭಾರತದ ಬ್ರ್ಯಾಂಡ್​ಗಳ ಫೈಟ್

ಆಲೂ ಬಿಸ್ಕೆಟ್​ ಸ್ಪರ್ಧೆಗೆ ಇಳಿದ ಬ್ರಿಟಾನಿಯಾ ಹಾಗೂ ಐಟಿಸಿ; ಬಾಂಗ್ಲಾದೇಶೀ ಬ್ರ್ಯಾಂಡ್​ಗೆ ಭಾರತದ ಬ್ರ್ಯಾಂಡ್​ಗಳ ಫೈಟ್
ಪ್ರಾಣ್ ಬಿಸ್ಕೆಟ್ಸ್​

ಭಾರತದ ಅತಿ ದೊಡ್ಡ ಬಿಸ್ಕೆಟ್ ತಯಾರಿಕೆ ಕಂಪೆನಿಯಲ್ಲಿ ಒಂದು ಬ್ರಿಟಾನಿಯಾ. ಇತ್ತೀಚೆಗೆ ಈ ಕಂಪೆನಿಯಿಂದ “5050 Potazos” ಹೆಸರಿನ ಬಿಸ್ಕೆಟ್ ಆರಂಭಿಸಲಾಗಿದೆ. ಇದು ತೆಳುವಾಗಿ, ಕ್ರಿಸ್ಪಿಯಾಗಿ ಹಾಗೂ ಆಲೂಗಡ್ಡೆ ಚಿಪ್ಸ್​ನ ಮಸಾಲೆಯ ಸ್ವಾದವನ್ನು ಒಳಗೊಂಡಿರುತ್ತದೆ. ಆದರೆ ಬಿಸ್ಕೆಟ್ ಸ್ವರೂಪದಲ್ಲಿ ಇರುತ್ತದೆ. 5050 ಬ್ರ್ಯಾಂಡ್ ಅಡಿಯಲ್ಲಿ ಈ ಬಿಸ್ಕೆಟ್ ಬಿಡುಗಡೆಯಾಗಿದೆ. ಬಿಸ್ಕೆಟ್ ತಯಾರಿಕೆ ವಲಯದಲ್ಲಿನ ಬದಲಾವಣೆಗೆ ಸಾಕ್ಷಿಯಾಗಿ ಈ ಬೆಳವಣಿಗೆ ಆಗಿದೆ. ಸಣ್ಣ ಪುಟ್ಟ ಕಂಪೆನಿಗಳು ಸಹ ಜನರ ಪಾಲಿನ ಆದ್ಯತೆಗಳಾಗುತ್ತಿವೆ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆ ತೀವ್ರ ಆಗುತ್ತಿರುವ ಹಿನ್ನೆಲೆಯಲ್ಲಿ ಎಫ್​ಎಂಸಿಜಿ ದೈತ್ಯ ಕಂಪೆನಿಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಸಹ ಈ ಕಡೆಗೆ ಆಕರ್ಷಿತವಾಗಿದೆ. ಹೊಸ ಟ್ರೆಂಡ್ಸ್​ಗೆ ಅನುಗುಣವಾಗಿ ತನ್ನ ಸಂಪರ್ಕ ಜಾಲವನ್ನು ಬೆಳೆಸಿಕೊಂಡು, ಗ್ರಾಹಕರ ಗಮನವನ್ನು ಸೆಳೆಯುವುದಕ್ಕೆ ಪ್ರಯತ್ನಿಸುತ್ತಿದೆ.

ಈ ತನಕ ಉತ್ಪನ್ನವನ್ನು ಈಶಾನ್ಯ ಹಾಗೂ ಅಸ್ಸಾಂನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬರುವ ತಿಂಗಳುಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಸಹ ಹೊಸ ಸ್ವಾದದ ಬಿಸ್ಕೆಟ್ ಬಿಡುಗಡೆ ಆಗಲಿದೆ. ಬ್ರಿಟಾನಿಯಾ ಇಂಡಸ್ಟ್ರೀಸ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ವಿನಯ್ ಸುಬ್ರಮಣ್ಯಂ ಮಾತನಾಡಿ, ಬ್ರಿಟಾನಿಯಾ 50-50 Potazos ನಮ್ಮ 50-50 ಬ್ರ್ಯಾಂಡ್​ಗೆ ಅದ್ಭುತವಾದ ಸೇರ್ಪಡೆ. ಇದು ಬಿಸ್ಕೆಟ್ಸ್ ಮಾರ್ಕೆಟ್ ಮತ್ತು ಉಪ್ಪುಯುಕ್ತ ತಿಂಡಿಯ ಮಾರ್ಕೆಟ್​ ಎರಡರಿಂದಲೂ ಗ್ರಾಹಕರನ್ನು ಪಡೆಯಬಹುದು ಎಂಬುದು ನಮ್ಮ ನಂಬಿಕೆ. ಇವೆರಡು ದೇಶದ ಅತಿದೊಡ್ಡ ಆಹಾರ ವಿಭಾಗ ಎಂದಿದ್ದಾರೆ.

ಅಮದಹಾಗೆ, ಈ ವಿಭಾಗದಲ್ಲಿ ಸ್ಪರ್ಧೆಗಿಳಿದಿರುವುದರಲ್ಲಿ ಬ್ರಿಟಾನಿಯಾ ಮಾತ್ರ ಇಲ್ಲ. ಜತೆಗೆ ಐಟಿಸಿ ಕೂಡ ಇದೆ. ಟ್ರೆಂಡ್​ಗೆ ತಕ್ಕಂತೆ ಸನ್​ಫೀಸ್ಟ್​ ಆಲ್​ರೌಂಡರ್ ತರುತ್ತಿದೆ. ಇವೆರಡು ಕಂಪೆನಿಗಳು ಹೀಗೆ ತಮ್ಮ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಕಾರಣ ಆಗಿರುವುದು ಬಾಂಗ್ಲಾದೇಶಿ ಪ್ರಾಣ್​ ಪೊಟಾಟ ಬಿಸ್ಕೆಟ್​ಗಳು ಭಾರತದಲ್ಲಿ ಪಡೆದಿರುವ ಜನಪ್ರಿಯತೆ. ಅದರಲ್ಲೂ ಭಾರತದ ಪೂರ್ವ ಭಾಗದಲ್ಲಿ ಸಿಕ್ಕಾಪಟ್ಟೆ ಹೆಸರಾಗಿದೆ. ಇದರ ಆಧಾರದ ಮೇಲೆ ಬ್ರಿಟಾನಿಯಾ ಹಾಗೂ ಐಟಿಸಿ ಕೂಡ ಗ್ರಾಹಕರನ್ನು ಸೆಳೆಯುವ ಯತ್ನದಲ್ಲಿವೆ.

ಐಟಿಸಿಯ ಸನ್​ಫೀಸ್ಟ್ ಆಲ್​ರೌಂಡರ್​ ಸದ್ಯಕ್ಕೆ ಪಶ್ಚಿಮ ಬಂಗಾಲ, ಈಶಾನ್ಯ ಹಾಗೂ ದಕ್ಷಿಣದ ರಾಜ್ಯಗಳ ಮಾರುಕಟ್ಟೆ ಮೇಲೆ ಗಮನ ಕೇಂದ್ರೀಕರಿಸಿದೆ. ಇನ್ನು ಬ್ರಿಟಾನಿಯಾದ 5050 Potazos ಬೆಲೆಯು ಪಶ್ಚಿಮ ಬಂಗಾಲ ಹಾಗೂ ಅಸ್ಸಾಂನಲ್ಲಿ ರೂ. 25 ಇದೆ. ಇತರ ಕಡೆಗಳಲ್ಲಿ ರೂ. 30 ಇದೆ. ಇನ್ನು ಬೆಲೆಯ ವಿಚಾರದಲ್ಲಿ ಐಟಿಸಿಯಿಂದ ಸ್ಪರ್ಧೆ ನೀಡುತ್ತಿದ್ದು, ರೂ. 10 ಹಾಗೂ ರೂ. 20ಕ್ಕೆ ನೀಡುತ್ತಿದೆ. ಮೊದಲೇ ಹೇಳಿದಂತೆ ಈಗಾಗಲೇ ಜನಪ್ರಿಯತೆ ಪಡೆದಿರುವ ಪ್ರಾಣ್​ ಪೊಟಾಟ ಬಿಸ್ಕೆಟ್ ದರ 25 ರೂಪಾಯಿ ನಿಗದಿ ಆಗಿದೆ.

ಪಾರ್ಲೆ ಉತ್ಪನ್ನಗಳೂ ಸೇರಿ ಬ್ರಿಟಾನಿಯಾ ಕಂಪೆನಿಯು ಶೇ 70ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. 20 ಲಕ್ಷ ಔಟ್​ಲೆಟ್​ನಲ್ಲಿ ಅಸ್ತಿತ್ವ ಹೊಂದಿದೆ. ಭಾರತದಲ್ಲಿ ಸಂಘಟಿತ ಬಿಸ್ಕೆಟ್ ಮಾರುಕಟ್ಟೆಯ ಮೌಲ್ಯ 37ರಿಂದ 40 ಸಾವಿರ ಕೋಟಿ ರೂಪಾಯಿ ಇದೆ. ಪಿಆರ್ ನ್ಯೂಸ್​ವೈರ್​ ಪ್ರಕಾರ, ಅಮೆರಿಕ ಹಾಗೂ ಚೀನಾ ನಂತರ ಭಾರತವು ಬಿಸ್ಕೆಟ್​ಗೆ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಮಾರುಕಟ್ಟೆ. ಭಾರತದ ಒಟ್ಟಾರೆ ಬಿಸ್ಕೆಟ್ ಮಾರುಕಟ್ಟೆ ಪೈಕಿ ಶೇ 70ಕ್ಕಿಂತ ಹೆಚ್ಚು ಸಂಘಟಿತವಾದದ್ದು. 2023ರ ಹೊತ್ತಿಗೆ ಈ ವಲಯದ ಆದಾಯವು 400 ಬಿಲಿಯನ್ ರೂಪಾಯಿ ದಾಟುವ ನಿರೀಕ್ಷೆ ಇದೆ.

ಇದನ್ನೂ ಓದಿ: Sunfeast Allrounder: ಬಾಂಗ್ಲಾದೇಶ್​ನ ಪ್ರಾಣ್​ ಆಲೂ ಬಿಸ್ಕೆಟ್​ಗೆ ಟಕ್ಕರ್ ನೀಡಲು ಐಟಿಸಿ ಸನ್​ಫೀಸ್ಟ್​ನ ಚಟ್​ಪಟ ಮಸಾಲ

(Potato Biscuit Competition Intensified Between Britannia And ITC)

Click on your DTH Provider to Add TV9 Kannada