IndusInd Bank: ಇಂಡಸ್​ಇಂಡ್​ ಬ್ಯಾಂಕ್ ಮೂರನೇ ತ್ರೈಮಾಸಿಕ ನಿವ್ವಳ ಲಾಭ ಶೇ 50ರಷ್ಟು ಏರಿಕೆ

| Updated By: Srinivas Mata

Updated on: Jan 29, 2022 | 7:01 PM

ಖಾಸಗಿ ಬ್ಯಾಂಕ್ ಆದ ಇಂಡಸ್​ಇಂಡ್ ಬ್ಯಾಂಕ್ ನಿವ್ವಳ ಲಾಭವು ಹಣಕಾಸು ವರ್ಷ 2022-23ರ ಮೂರನೇ ತ್ರೈಮಾಸಿಕದಲ್ಲಿ ಶೇ 50ರಷ್ಟು ಹೆಚ್ಚಾಗಿದೆ.

IndusInd Bank: ಇಂಡಸ್​ಇಂಡ್​ ಬ್ಯಾಂಕ್ ಮೂರನೇ ತ್ರೈಮಾಸಿಕ ನಿವ್ವಳ ಲಾಭ ಶೇ 50ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
Follow us on

2021-22ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅಕ್ಟೋಬರ್​ನಿಂದ ಡಿಸೆಂಬರ್​ನಲ್ಲಿ​ ಖಾಸಗಿ ವಲಯದ ಬ್ಯಾಂಕ್ ಆದ ಇಂಡಸ್​ಇಂಡ್ ಬ್ಯಾಂಕ್​ನ (IndusInd Bank) ಕ್ರೋಡೀಕೃತ ನಿವ್ವಳ ಲಾಭವು ಶೇ 50ರಷ್ಟು ಹೆಚ್ಚಳವಾಗಿ, 1242 ಕೋಟಿ ರೂಪಾಯಿ ಮುಟ್ಟಿದೆ. ಆರೋಗ್ಯಕರವಾದ ನಿವ್ವಳ ಬಡ್ಡಿ ಆದಾಯ ಹಾಗೂ ಕಡಿಮೆ ಪ್ರಾವಿಷನ್​ಗಳ ಕಾರಣಕ್ಕೆ ಇಂಥದ್ದೊಂದು ಬೆಳವಣಿಗೆ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 830 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕ್​ನ ಏಕೀಕೃತ ನಿವ್ವಳ ಲಾಭ ಶೇ 36ರಷ್ಟು ಹೆಚ್ಚಳವಾಗಿ, 1161 ಕೋಟಿ ರೂಪಾಯಿ ಮುಟ್ಟಿದೆ. ಇಂಡಸ್​ಇಂಡ್ ಬ್ಯಾಂಕ್​ನ ನಿವ್ವಳ ಬಡ್ಡಿ ಆದಾಯವು (ಬಡ್ಡಿ ಗಳಿಕೆಯಲ್ಲಿ ಬಡ್ಡಿಯ ವೆಚ್ಚವನ್ನು ಕಳೆದ ಮೇಲೆ ಬಾಕಿ ಉಳಿದದ್ದು) ಶೇ 11ರಷ್ಟು ಹೆಚ್ಚಳವಾಗಿ 3794 ಕೋಟಿ ರೂಪಾಯಿ ಆಗಿದೆ. ಬಡ್ಡಿಯ ಮಾರ್ಜಿನ್ 3 ಬೇಸಿಸ್ ಪಾಯಿಂಟ್​ ಅನುಕ್ರಮವಾಗಿ ಹೆಚ್ಚಾಗಿ, ಶೇ 4.10ರಲ್ಲಿದೆ.

ಇತರ ಆದಾಯವು ಶೇ 14ರಷ್ಟು ಮೇಲೇರಿ ಮೂರನೇ ತ್ರೈಮಾಸಿಕದಲ್ಲಿ 1877 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 1646 ಇತ್ತು. ಇನ್ನು ಕೋರ್ ಶುಲ್ಕದ ಆದಾಯ ಶೇ 9ರಷ್ಟು ಹೆಚ್ಚಳವಾಗಿ ವರ್ಷದಿಂದ ವರ್ಷಕ್ಕೆ 1509 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 1389 ಕೋಟಿ ರೂಪಾಯಿ ಆಗಿತ್ತು. ಪ್ರಾವಿಷನ್ಸ್ ಮತ್ತು ಕಂಟಿಂಜೆನ್ಸಿಸ್ (ಅನಿರೀಕ್ಷಿತವಾಗಿ ಉದ್ಭವಿಸಬಹುದಾದ ವೆಚ್ಚ ಅಥವಾ ಜವಾಬ್ದಾರಿಗಳಿಗೆ ಮೀಸಲು ನಿಧಿ) ಶೇ 11ರಷ್ಟು ಇಳಿಕೆಯಾಗಿ 1654 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1853.52 ಕೋಟಿ ರೂಪಾಯಿ ಆಗಿತ್ತು. ಈ ಹಿಂದಿನ ತ್ರೈಮಾಸಿಕದಲ್ಲಿ ಇಂಡಸ್​ಇಂಡ್ ಬ್ಯಾಂಕ್​ ಪ್ರಾವಿಷನ್ಸ್ 1703.36 ಕೋಟಿ ರೂಪಾಯಿ ಇತ್ತು.

ಇಂಡಸ್​ಇಂಡ್ ಬ್ಯಾಂಕ್ ಆಸ್ತಿ ಗುಣಮಟ್ಟ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 29 ಬೇಸಿಸ್ ಪಾಯಿಂಟ್ಸ್​ ಸುಧಾರಿಸಿದ್ದು, ಗ್ರಾಸ್ ಎನ್​ಪಿಎ ಅನುಪಾತವು ಡಿಸೆಂಬರ್ ತಿಂಗಳ ಶೇ 2.48 ಇದೆ. ಸೆಪ್ಟೆಂಬರ್ ತ್ರೈಮಾಸಿಕದ ಕೊನೆಗೆ ಶೇ 2.77 ಇತ್ತು. ಅದೇ ರೀತಿ ನಿವ್ವಳ ಎನ್​ಪಿಎ ಅನುಪಾತ ಈ ಹಿಂದೆ ಶೇ 0.8ರಷ್ಟು ಇದ್ದ ಶೇ 0.71 ಆಗಿದೆ. ಕೊವಿಡ್-19ರ ‘ಮೂರನೇ ಅಲೆ’ಯು ಡಿಸೆಂಬರ್ ಅಂತ್ಯದಲ್ಲಿ ಸ್ಫೋಟಿಸಿತು. ಇದು ಬ್ಯಾಂಕ್‌ಗಳ ಕಾರ್ಯಾಚರಣೆಗಳ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಿದೆ ಮತ್ತು ಸದ್ಯಕ್ಕೆ ಅನಿಶ್ಚಿತತೆ ಮಟ್ಟವು ಕಡಿಮೆಯಾಗುತ್ತಿದೆ. ಈ ದೃಷ್ಟಿಯಿಂದ ಬ್ಯಾಂಕ್ ನಿಯಂತ್ರಕ, ಫ್ಲೋಟಿಂಗ್, ಕೌಂಟರ್ ಸೈಕ್ಲಿಕಲ್ ಮತ್ತು/ಅಥವಾ ಕಂಟಿಂಜೆಂಟ್ ಪ್ರಾವಿಷನ್ಸ್​ಗಳನ್ನು ಮಾಡಿದೆ. ಅಂತಹ ಪ್ರಾವಿಷನ್ಸ್​ಗಳ ಒಟ್ಟು ಮೊತ್ತವು ಡಿಸೆಂಬರ್ 31, 2021ರಂತೆ ರೂ. 3,740 ಕೋಟಿಗಳಿಗೆ ಮುಟ್ಟಿದೆ. ಇದರಲ್ಲಿ ರೂ 1,365 ಕೋಟಿ ಸಾಲಗಾರರ ಮೊತ್ತವೂ ಸೇರಿದೆ. ಕೊವಿಡ್-19 ಸಂಬಂಧಿತ ಒತ್ತಡಕ್ಕಾಗಿ ರೆಸಲ್ಯೂಶನ್ ಫ್ರೇಮ್‌ವರ್ಕ್‌ಗೆ ಅನುಗುಣವಾಗಿ ಸಾಲಗಾರ ಖಾತೆಗಳನ್ನು ಪುನರ್ ರಚಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡನೇ ಕೊವಿಡ್ ಮರು ಹೊಂದಾಣಿಕೆ ಪ್ಯಾಕೇಜ್ ಅಡಿಯಲ್ಲಿ ಬ್ಯಾಂಕ್ ರೂ. 2,873 ಕೋಟಿ ಮೌಲ್ಯದ ಸಾಲಗಳನ್ನು ಮರು ಹೊಂದಿಸಿದೆ. ಸಾಲದಾತರ ಮುಂಗಡಗಳು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 10ರಷ್ಟು ಬೆಳೆದಿದ್ದು, ಡಿಸೆಂಬರ್ ತ್ರೈಮಾಸಿಕದ ಅಂತ್ಯದಲ್ಲಿ ಶೇಕಡಾ 4ರ ಬೆಳೆದು, ಅನುಕ್ರಮವಾಗಿ 2.28 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ಹಿಂದಿನ ವರ್ಷದ ಈ ಅವಧಿಯಲ್ಲಿ 2.07 ಲಕ್ಷ ಕೋಟಿ ಆಗಿತ್ತು. ಮತ್ತೊಂದೆಡೆ, ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಏರಿಕೆಯಾಗಿ, 2.84 ಲಕ್ಷ ಕೋಟಿಗೆ ಏರಿತು. ಕಡಿಮೆ ವೆಚ್ಚದ ಠೇವಣಿಗಳು ಒಟ್ಟು ಠೇವಣಿಗಳ ಶೇ 42ರಷ್ಟನ್ನು ಒಳಗೊಂಡಿವೆ.

ಇದನ್ನೂ ಓದಿ: LIC: ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಷೇರಿನ ಪ್ರಮಾಣ ಹೆಚ್ಚಿಸಲು ಎಲ್​ಐಸಿಗೆ ಅನುಮತಿಸಿದ ಆರ್​ಬಿಐ