IndusInd Bank: ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹಿಸಲು ಇಂಡಸ್ಇಂಡ್ ಬ್ಯಾಂಕ್ಗೆ ಆರ್‌ಬಿಐನಿಂದ ಅನುಮತಿ
ಇಂಡಸ್ಇಂಡ್ ಬ್ಯಾಂಕ್ ಅನ್ನು ತೆರಿಗೆ ಸಂಗ್ರಹ ಏಜೆನ್ಸಿ ಆಗಿ ನೇಮಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅನುಮತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಪರವಾಗಿ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ನಿಂದ ಇಂಡಸ್‌ಇಂಡ್ ಬ್ಯಾಂಕ್ ಅನುಮತಿ ಪಡೆದಿದೆ ಎಂದು ಮಂಗಳವಾರ ಘೋಷಿಸಿದೆ. “ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಹಾಗೂ ಹಣಕಾಸು ಸಚಿವಾಲಯದ ಶಿಫಾರಸಿನ ಆಧಾರದ ಮೇಲೆ ಈ ಅಧಿಕಾರವನ್ನು ನೀಡಲಾಗಿದೆ ಮತ್ತು ಸರ್ಕಾರಿ ವ್ಯವಹಾರವನ್ನು ನಡೆಸಲು ಬ್ಯಾಂಕ್ ಅನ್ನು ಆರ್ಬಿಐನ ‘ಏಜೆನ್ಸಿ ಬ್ಯಾಂಕ್’ ಆಗಿ ನೇಮಿಸಲಾಗಿದೆ,” ಎಂದು ಇಂಡಸ್ಇಂಡ್ ಬ್ಯಾಂಕ್ ಫೈಲಿಂಗ್‌ನಲ್ಲಿ ಹೇಳಿದೆ.
ಈ ಅನುಮೋದನೆಯೊಂದಿಗೆ, ಇಂಡಸ್ಇಂಡ್ ಬ್ಯಾಂಕ್ ಗ್ರಾಹಕರು ಬ್ಯಾಂಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ‘ಇಂಡಸ್ನೆಟ್’ – ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮತ್ತು ‘ಇಂಡಸ್‌ಮೊಬೈಲ್’ – ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ನೇರ ಮತ್ತು ಪರೋಕ್ಷ ತೆರಿಗೆಗಳನ್ನು ಪಾವತಿಸಬಹುದು. ಇದರ ಜತೆಗೆ, ಗ್ರಾಹಕರು ಈ ಸೇವೆಯನ್ನು ಪಡೆಯಲು ತಮ್ಮ ಹತ್ತಿರದ ಶಾಖೆಗೆ ತೆರಳಬಹುದು. “ಸರ್ಕಾರದ ಪರವಾಗಿ ನೇರ ಮತ್ತು ಪರೋಕ್ಷ ತೆರಿಗೆಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಆರ್‌ಬಿಐನಿಂದ ಅಧಿಕಾರ ಪಡೆದಿದ್ದಕ್ಕೆ ನಮಗೆ ಸಂತೋಷವಾಗಿದೆ. ಜವಾಬ್ದಾರಿಯುತ ಹಣಕಾಸು ಸಂಸ್ಥೆಯಾಗಿ ಗ್ರಾಹಕರಿಗೆ ತಮ್ಮ ತೆರಿಗೆಗಳನ್ನು ಅನುಕೂಲಕರ ಮತ್ತು ತಡೆರಹಿತ ರೀತಿಯಲ್ಲಿ ಪಾವತಿಸಲು ಸಮಗ್ರ ವೇದಿಕೆಯನ್ನು ನೀಡಲು ಇದು ನಮಗೆ ಅಧಿಕಾರ ನೀಡುತ್ತದೆ,” ಎಂದು ಇಂಡಸ್ಇಂಡ್ ಬ್ಯಾಂಕ್ ಗ್ರಾಹಕ ಕಾರ್ಯಾಚರಣೆಗಳ ಮುಖ್ಯಸ್ಥ ಸೌಮಿತ್ರ ಸೇನ್ ಹೇಳಿದ್ದಾರೆ.
“ನಮ್ಮ ಅತ್ಯುನ್ನತ ದರ್ಜೆಯ ತಂತ್ರಜ್ಞಾನ ಚಾನೆಲ್‌ಗಳ ಬಲದಿಂದ ಎಲ್ಲ ಪಾಲುದಾರರಿಗೆ ತೆರಿಗೆ ಸಂಗ್ರಹ ಜಾಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅಮೋಘವಾದ ಮೌಲ್ಯವನ್ನು ತರಲು ನಾವು ಎದುರು ನೋಡುತ್ತಿದ್ದೇವೆ” ಎಂದು ಸೇನ್ ಹೇಳಿದ್ದಾರೆ. ಮಂಗಳವಾರದಂದು ಇಂಡಸ್‌ಇಂಡ್ ಬ್ಯಾಂಕ್‌ನ ಷೇರು ಶೇ 0.49ರಷ್ಟು ಏರಿಕೆಯಾಗಿದ್ದು, NSEಯಲ್ಲಿ 1,179.05 ರೂಪಾಯಿಗೆ ವಹಿವಾಟು ಕೊನೆಗೊಳಿಸಿದೆ.
ಇದನ್ನೂ ಓದಿ: GST Filing: ಜಿಎಸ್ಟಿ ಮರುಪಾವತಿಗೆ ಕ್ಲೇಮ್ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ