ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆಗೆ ಸಂಪುಟ ಅನುಮೋದನೆ

|

Updated on: Oct 04, 2024 | 10:06 AM

Rs 2,029 crore bonus for Railway employees: ರೈಲ್ವೆ ಇಲಾಖೆಯಲ್ಲಿರುವ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ ದಸರಾ ಹಬ್ಬಕ್ಕೆ ಸರ್ಕಾರಿ ಭರ್ಜರಿ ಕೊಡುಗೆ ನೀಡಿದೆ. ರೈಲ್ವೆ ಉದ್ಯೋಗಿಗಳಿಗೆ ಉತ್ಪನ್ನಶೀಲತೆ ಆಧಾರವಾಗಿ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆ ಮಾಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 11.72 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಸಿಗಲಿದೆ. ಹಾಗೆಯೆ, ಬಂದರು ಪ್ರಾಧಿಕಾರಗಳ ಉದ್ಯೋಗಿಗಳಿಗೂ ಸರ್ಕಾರ ಬೋನಸ್ ಬಿಡುಗಡೆ ಮಾಡುತ್ತಿದೆ.

ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆಗೆ ಸಂಪುಟ ಅನುಮೋದನೆ
ರೈಲ್ವೆ
Follow us on

ನವದೆಹಲಿ, ಅಕ್ಟೋಬರ್ 4: ರೈಲ್ವೆ ಇಲಾಖೆಯ ಉದ್ಯೋಗಿಗಳಿಗೆ ಈ ವರ್ಷ ಭರ್ಜರಿ ಬೋನಸ್ ಸಿಗಲಿದೆ. ಉತ್ಪನ್ನಶೀಲತೆ ಆಧಾರಿತವಾಗಿ ಬೋನಸ್ (PLB- Productivity linked bonus) ಒದಗಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಗುರುವಾರ (ಅ. 3) ಅನುಮೋದನೆ ನೀಡಿದೆ. ಪ್ರಮುಖ ಬಂದರು ಪ್ರಾಧಿಕಾರಗಳಿಗೂ ಕೂಡ ಉತ್ಪನ್ನತೆ ಅಧಾರಿತವಾಗಿ ಭತ್ಯೆ ಕೊಡಲೂ ಸಹ ಒಪ್ಪಲಾಗಿದೆ. ಒಟ್ಟಾರೆ 12 ಲಕ್ಷದಷ್ಟು ಉದ್ಯೋಗಿಗಳಿಗೆ ದಸರಾ ಹಬ್ಬಕ್ಕೆ ಸರ್ಕಾರದ ವತಿಯಿಂದ ಉಡುಗೊರೆ ಸಿಕ್ಕಂತಾಗುತ್ತದೆ.

ರೈಲ್ವೆ ಇಲಾಖೆಯ ಕೆಳಸ್ತರದಲ್ಲಿರುವ 11.72 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಒಟ್ಟಾರೆ 2,029 ಕೋಟಿ ರೂ ಬೋನಸ್ ಸಿಗಲಿದೆ. ಅಂದಾಜಿನ ಪ್ರಕಾರ ಉದ್ಯೋಗಿಯ 78 ದಿನಗಳ ವೇತನಕ್ಕೆ ಸಮನಾದ ಮೊತ್ತವನ್ನು ಬೋನಸ್ ಆಗಿ ನೀಡಬಹುದು. ರೈಲ್ವೆ ಇಲಾಖೆಯಲ್ಲಿ ಸದ್ಯ ಒಟ್ಟು ಉದ್ಯೋಗಿಗಳ ಸಂಖ್ಯೆ 13,14,992 ಇದೆ. ಈ ಪೈಕಿ 1,19,952 ಉದ್ಯೋಗಿಗಳು 2023ರ ಏಪ್ರಿಲ್ ನಂತರ ನೇಮಕವಾಗಿದ್ದಾರೆ. ಒಟ್ಟಾರೆ 11,72,240 ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದಷ್ಟು ಬೋನಸ್ ಅನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಒಬ್ಬ ಉದ್ಯೋಗಿಗೆ ಗರಿಷ್ಠ 17,951 ರೂವರೆಗೂ ಬೋನಸ್ ಹಣ ಸಿಗಲಿದೆ.

ಇದನ್ನೂ ಓದಿ: Maruti Suzuki car: ಈ ಮಾರುತಿ ಕಾರಿನಲ್ಲಿ ಚಿನ್ನದಷ್ಟೇ ಬೆಲೆಬಾಳುವ ಭಾಗವಿದೆ, ಕಳ್ಳರು ಅದನ್ನು ಕದ್ದು ಶ್ರೀಮಂತರಾಗ್ತಿದಾರೆ!

ರೈಲ್ವೆ ಇಲಾಖೆಯಲ್ಲಿ ಕೆಳಸ್ತರದಲ್ಲಿರುವ (ನಾನ್ ಗೆಜೆಟೆಡ್ ಪೋಸ್ಟ್) ಬಹುತೇಕ ಎಲ್ಲಾ ವಿಭಾಗದ ಉದ್ಯೋಗಿಗಳಿಗೂ ವಿಶೇಷ ಭತ್ಯೆ ಸಿಗಲಿದೆ. ಟ್ರ್ಯಾಕ್ ಮೈಂಟೆನರ್ಸ್, ಲೋಕೋ ಪೈಲಟ್, ಟ್ರೈನ್ ಮ್ಯಾನೇಜರ್ (ಗಾರ್ಡ್), ಸ್ಟೇಷನ್ ಮಾಸ್ಟರ್, ಸೂಪರ್​ವೈಸರ್, ಟೆಕ್ನಿಶಿಯನ್, ಟೆಕ್ನಿಶಿಯನ್ ಹೆಲ್ಪರ್, ಪಾಯಿಂಟ್ಸ್​ಮನ್ ಹಾಗು ಇತರ ಗ್ರೂಪ್ ಎಕ್ಸ್​ಸಿ ಸಿಬ್ಬಂದಿ ಮೊದಲಾದವರು ಬೋನಸ್ ಪಡೆಯಲಿದ್ದಾರೆ.

ಅರ್ಹ ರೈಲ್ವೆ ಉದ್ಯೋಗಿಗಳಿಗೆ ಪ್ರತೀ ವರ್ಷ ದಸರಾ ರಜೆಗೆ ಮುನ್ನ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಅನ್ನು (ಪಿಎಲ್​ಬಿ) ನೀಡಲಾಗುತ್ತದೆ. ರೈಲ್ವೆ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯೋಗಿಗಳನ್ನು ಉತ್ತೇಜಿಸಲು ಈ ವಿಶೇಷ ಬೋನಸ್ ನೀಡಲಾಗುತ್ತದೆ.

ಇದನ್ನೂ ಓದಿ: ಕಂಪನಿಗಳು ಉದ್ಯೋಗಿಗಳ ಪಾಲಿಗೆ ಪ್ರೆಷರ್ ಕುಕ್ಕರ್​ಗಳಂತಾದ್ರೆ ಕಷ್ಟ: ಜೋಹೋ ಸಿಇಒ

2023-24ರ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಸಂಸ್ಥೆಯ ಸಾಧನೆ ಗಮನಾರ್ಹವೆನಿಸಿದೆ. ಒಂದು ವರ್ಷದಲ್ಲಿ 670 ಕೋಟಿ ಪ್ರಯಾಣಿಕರನ್ನು ಸಾಗಿಸಲಾಗಿದೆ. 1,588 ಮಿಲಿಯನ್ ಟನ್​ಗಳಷ್ಟು ಸರಕುಗಳನ್ನೂ ಸಾಗಣೆ ಮಾಡಲಾಗಿದೆ. ರೈಲ್ವೆ ಇಲಾಖೆಗೆ ಪ್ರಯಾಣಿಕರ ಸಾಗಣೆಗಿಂತ ಸರಕು ಸಾಗಣೆಯಿಂದ ಹೆಚ್ಚು ಆದಾಯ ಸಿಗುತ್ತದೆ. ಕಳೆದ ವರ್ಷದ ಈ ಉತ್ತಮ ಸಾಧನೆಗೆ ನಾನಾ ಕಾರಣಗಳನ್ನು ಪರಿಗಣಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಸರ್ಕಾರ ರೈಲ್ವೆ ಇಲಾಖೆಗೆ ಸಾಕಷ್ಟು ಬಂಡವಾಳ ವೆಚ್ಚ ಮಾಡಿದೆ. ರೈಲ್ವೆ ಮೂಲಸೌಕರ್ಯ ಉತ್ತಮಪಡಿಸಲು ಬಂಡವಾಳ ಬಳಕೆ ಆಗಿದೆ. ಇದರಿಂದ ರೈಲ್ವೆ ಸಾಧನೆ ಉತ್ತಮಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ