ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ನಿಯಂತ್ರಿಸಲು ವಿಫಲವಾಗುತ್ತಿರುವುದಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನವೆಂಬರ್ 3ರಂದು ಹಣಕಾಸು ನೀತಿ ಸಮಿತಿಯ (MPC) ವಿಶೇಷ ಸಭೆ ಕರೆದಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಚಿಲ್ಲರೆ ಹಣದುಬ್ಬರ ಏರಿಕೆ (Inflation) ಮಧ್ಯೆಯೇ ಆರ್‌ಬಿಐ ಎಂಪಿಸಿ ವಿಶೇಷ ಸಭೆ ಕರೆದಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾಯ್ದುಕೊಳ್ಳುವಲ್ಲಿ ಆರ್‌ಬಿಐ ವಿಫಲವಾಗಿದೆ. ಹೀಗಾಗಿ ತನ್ನ ವೈಫಲ್ಯಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸುವ ಸಲುವಾಗಿ ಹಣಕಾಸು ನೀತಿ ಸಮಿತಿಯ ಸಭೆ ಕರೆದಿದೆ.
‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 45 ಝಡ್ಎನ್ ಅಡಿಯಲ್ಲಿ ಹಣಕಾಸು ನೀತಿ ಸಮಿತಿಯ ಹೆಚ್ಚುವರಿ ಸಭೆ ಕರೆಯಲಾಗಿದೆ’ ಎಂದು ಗುರುವಾರ ಸಂಜೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಆರ್‌ಬಿಐ ತಿಳಿಸಿದೆ.
ಆರ್‌ಬಿಐ ಕಾಯ್ದೆ ಹೇಳುವುದೇನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ ‘45 ಝಡ್ಎನ್’ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಹಣದುಬ್ಬರ ಪ್ರಮಾಣವು ಕಳೆದ ಮೂರು ತ್ರೈಮಾಸಿಕಗಳಲ್ಲಿ ಸಹನೆಯ ಮಟ್ಟವಾದ ಶೇಕಡಾ 6ಕ್ಕಿಂತಲೂ ಹೆಚ್ಚಿದೆ. ಸತತ ಮೂರು ತ್ರೈಮಾಸಿಕಗಳವರೆಗೆ ಹಣದುಬ್ಬರವನ್ನು ಮಿತಿಯೊಳಗೆ ಇರಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ಏನು ಎಂಬುದನ್ನು ಆರ್‌ಬಿಐ ಕೇಂದ್ರಕ್ಕೆ ತಿಳಿಸಬೇಕು ಎಂದು ಈ ಸೆಕ್ಷನ್ ಹೇಳುತ್ತದೆ.
ಇದನ್ನೂ ಓದಿ: RBI Monetary Policy: ಮತ್ತೆ ರೆಪೊ ದರ ಹೆಚ್ಚಿಸಲಿದೆಯೇ ಆರ್‌ಬಿಐ?
ಇದರ ಪ್ರಕಾರ, ಬೆಲೆ ಏರಿಕೆ ನಿಯಂತ್ರಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಲಿಖಿತವಾಗಿ ಉತ್ತರ ನೀಡಬೇಕಾಗುತ್ತದೆ. ಜತೆಗೆ ಭವಿಷ್ಯದಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದನ್ನೂ ವಿವರವಾಗಿ ತಿಳಿಸಬೇಕಾಗುತ್ತದೆ. 2016ರ ನಂತರ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಈ ರೀತಿ ವರದಿ ನೀಡಬೇಕಾಗಿ ಬಂದಿರುವುದು ಇದೇ ಮೊದಲಾಗಿದೆ.
ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಕೈಗೊಂಡ ಕ್ರಮಗಳು:
ಸತತ 9 ತಿಂಗಳುಗಳಿಂದ ಏರಿಕೆಯ ಹಾದಿಯಲ್ಲಿರುವ ಚಿಲ್ಲರೆ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 7.4ಕ್ಕೆ ಹೆಚ್ಚಿತ್ತು. ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಆರ್‌ಬಿಐ ಅನೇಕ ಕ್ರಮಗಳನ್ನೂ ಕೈಗೊಂಡಿತ್ತು. ಸತತವಾಗಿ ನಾಲ್ಕು ಬಾರಿ ರೆಪೊ ದರ ಹೆಚ್ಚಿಸಿದ್ದೂ ಅವುಗಳಲ್ಲೊಂದು. ಸೆಪ್ಟೆಂಬರ್ 30ರಂದು ಪ್ರಕಟಿಸಿದ ಹಣಕಾಸು ನೀತಿಯಲ್ಲಿ ಆರ್‌ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು. ಇದರೊಂದಿಗೆ ಮೇ ತಿಂಗಳ ನಂತರ ಈವರೆಗೆ ಆರ್‌ಬಿಐ ಒಟ್ಟಾರೆಯಾಗಿ 190 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿತ್ತು.
ಮುಂದಿನ ಹಣಕಾಸು ನೀತಿಯಲ್ಲಿ ಆರ್‌ಬಿಐ ಮತ್ತೆ ರೆಪೊ ದರ ಹೆಚ್ಚಿಸುವ ಸಾಧ್ಯತೆಗಳಿವೆ ಎಂದೂ ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಜಾಗತಿಕ ಆರ್ಥಿಕ ತಲ್ಲಣದ ಪರಿಣಾಮ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಬಾರದಿರುವ ಕಾರಣ ಹಣಕಾಸು ನೀತಿ ಸಮಿತಿಯು ಮತ್ತೆ 35ರಿಂದ 50 ಮೂಲಾಂಶಗಳ ವರೆಗೆ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Thu, 27 October 22