
ನವದೆಹಲಿ, ಡಿಸೆಂಬರ್ 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಿದೆ. ಈ ಮೂಲಕ ಬಡ್ಡಿದರ ಶೇ. 5.50ರಷ್ಟು ಇದ್ದದ್ದು ಶೇ. 5.25ಕ್ಕೆ ಇಳಿದಿದೆ. ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಶುಕ್ರವಾರ ಪ್ರಕಟಿಸಿದ್ದಾರೆ. ಎಂಪಿಸಿಯ ಆರೂ ಸದಸ್ಯರು ಸರ್ವಾನುಮತದಿಂದ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಹೊಸ ದರಗಳು ತತ್ಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದೂ ಹೇಳಿದ್ದಾರೆ.
ಅನಿಶ್ಚಿತ ಬಾಹ್ಯ ಪರಿಸ್ಥಿತಿ ನಡುವೆಯೂ ದೇಶದ ಆರ್ಥಿಕತೆಯ ಶಕ್ತಿ ಉತ್ತಮವಾಗಿದೆ ಎಂದು ಹೇಳಿದ ಆರ್ಬಿಐ ಗವರ್ನರ್, ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಬೇಡಿಕೆ ಉತ್ತಮವಾಗಿದೆ. ಖಾಸಗಿ ಹೂಡಿಕೆಯೂ ಚೆನ್ನಾಗಿ ಆಗುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್
ಭಾರತದ ಆರ್ಥಿಕತೆ ಈ ವರ್ಷ ಮೊದಲಾರ್ಧ ಶೇ. 8ರಷ್ಟು ಬೆಳೆದಿದೆ ಎಂದು ಹೇಳಿರುವ ಸಂಜಯ್ ಮಲ್ಹೋತ್ರಾ, ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದಾರೆ. ಈ ಹಿಂದಿನ ಎಂಪಿಸಿ ಸಭೆಯಲ್ಲಿ ಈ ವರ್ಷದ ಜಿಡಿಪಿ ಬೆಳವಣಿಗೆ ಶೇ. 6.3ರಷ್ಟು ಮಾತ್ರ ಇರಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಕಳೆದ ಎರಡು ಕ್ವಾರ್ಟರ್ಗಳಲ್ಲಿ ನಿರೀಕ್ಷೆಮೀರಿದಷ್ಟು ವೇಗದಲ್ಲಿ ಆರ್ಥಿಕತೆ ಬೆಳೆದಿರುವುದರಿಂದ ಆರ್ಬಿಐ ತನ್ನ ಅಂದಾಜನ್ನು ಪರಿಷ್ಕರಿಸಿದೆ.
ಆರ್ಬಿಐ ಗವರ್ನರ್ ಅವರು ಮುಂದಿನ ನಾಲ್ಕು ಕ್ವಾರ್ಟರ್ಗಳಿಗೂ ಅವರು ಅಂದಾಜು ಮಾಡಿದ್ದಾರೆ. ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಜಿಡಿಪಿ ಶೇ. 7, ಶೇ 6.5, ಶೇ. 6.7 ಮತ್ತು ಶೇ. 6.8ರಷ್ಟು ಬೆಳೆಯಬಹುದು ಎಂದಿದ್ದಾರೆ.
ದೇಶದಲ್ಲಿ ಹಣದುಬ್ಬರವು ಆರ್ಬಿಐ ನಿರೀಕ್ಷಿಸುದದಕ್ಕಿಂತಲೂ ಕಡಿಮೆ ಆಗಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ ಈ ವರ್ಷ ಹಣದುಬ್ಬರ ಶೇ 2ರಷ್ಟು ಮಾತ್ರವೇ ಇರುತ್ತದೆ ಎಂದು ನಿರೀಕ್ಷಿಸಿದ್ದಾರೆ. ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಿದ ಅಂದಾಜಿಗಿಂತಲೂ ಶೇ. 0.6ರಷ್ಟು ಕಡಿಮೆ ಹಣದುಬ್ಬರ ದಾಖಲಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಪಿಎಲ್ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000
ಮುಂದಿನ ನಾಲ್ಕು ಕ್ವಾರ್ಟರ್ಗಳಲ್ಲಿ ಹಣದುಬ್ಬರ ದರ ಕ್ರಮವಾಗಿ ಶೇ. 0.6, ಶೇ. 1, ಶೇ. 3.9 ಮತ್ತು ಶೇ. 4ರಷ್ಟು ಇರಬಹುದು ಎಂದು ಆರ್ಬಿಐನ ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Fri, 5 December 25