ಏಪ್ರಿಲ್ 3ಕ್ಕೆ ಆರ್​ಬಿಐನ ಎಂಪಿಸಿ ಸಭೆ ಶುರು; ಬಡ್ಡಿದರ ಈ ಬಾರಿಯೂ ಹೆಚ್ಚಳ ಇಲ್ಲವಾ? ಸಭೆಯಿಂದ ನಿರೀಕ್ಷೆಗಳಿವು

|

Updated on: Apr 01, 2024 | 6:26 PM

RBI MPC Meet from Arpil 3rd: ಆರ್​ಬಿಐನ ಎಂಪಿಸಿ ಸಭೆ ಏಪ್ರಿಲ್ 3ರಂದು ಆರಂಭವಾಗಲಿದೆ. ಏಪ್ರಿಲ್ 5ರಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಭೆಯ ನಿರ್ಧಾರಗಳನ್ನು ತಿಳಿಸಲಿದ್ದಾರೆ. ಗವರ್ನರ್ ದಾಸ್ ಅವರೂ ಸೇರಿ ಆರು ಮಂದಿ ಸದಸ್ಯರಿರುವ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಮಹತ್ವದ ರೆಪೋ ರೇಟ್ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಏಪ್ರಿಲ್ 3ಕ್ಕೆ ಆರ್​ಬಿಐನ ಎಂಪಿಸಿ ಸಭೆ ಶುರು; ಬಡ್ಡಿದರ ಈ ಬಾರಿಯೂ ಹೆಚ್ಚಳ ಇಲ್ಲವಾ? ಸಭೆಯಿಂದ ನಿರೀಕ್ಷೆಗಳಿವು
ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್
Follow us on

ನವದೆಹಲಿ, ಏಪ್ರಿಲ್ 1: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ (RBI MPC) ಈ ಆರ್ಥಿಕ ವರ್ಷದ ಮೊದಲ ಸಭೆ ಏಪ್ರಿಲ್ 3ರಂದು ಆರಂಭಿಸಲಿದೆ. ಆರ್ಥಿಕತೆ ಸಕಾರಾತ್ಮಕವಾಗಿದ್ದರೂ ಹಣದುಬ್ಬರ ತೀರಾ ಆಶಾದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಎಲ್ಲರ ಕುತೂಹಲ ಇದೆ. ಏಪ್ರಿಲ್ 3ರಿಂದ 5ರವರೆಗೆ ನಡೆಯಲಿರವ ಎಂಪಿಸಿ ಸಭೆಯಲ್ಲಿ ಆರ್​ಬಿಐನ ಪ್ರಮುಖ ಪಾಲಿಸಿಗಳನ್ನು ಮುಂದುವರಿಸಲು ನಿರ್ಧರಿಸುವ ಸಾಧ್ಯತೆ ಇದೆ. ಸಾಲ ಮತ್ತು ಠೇವಣಿಯ ಬಡ್ಡಿದರ (Repo and Reverse Repo Rates), ಹಣದ ಹರಿವು ಸಂಕುಚಿತಗೊಳಿಸುವುದು (Withdrawal of Accommodation) ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಎಂಪಿಸಿ ಸಭೆ ನಿರ್ಧರಿಸಬಹುದು ಎನ್ನಲಾಗಿದೆ.

ಹಣದುಬ್ಬರ ಆರ್​ಬಿಐನ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ. ಅದು ನಿಗದಿ ಮಾಡಿರುವ ತಾಳಿಕೆ ಮಿತಿಯಾದ ಶೇ. 6ರ ಒಳಗೆ ಇದೆಯಾದರೂ ಹಣದುಬ್ಬರವನ್ನು ಶೇ. 4ರ ಸಮೀಪಕ್ಕೆ ತರುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ. ಹಣದುಬ್ಬರ ನಿಯಂತ್ರಣಕ್ಕೆ ಆರ್​​ಬಿಐ ಬಳಿ ಇರುವ ಪ್ರಮುಖ ಅಸ್ತ್ರಗಳಲ್ಲಿ ರೆಪೋ ದರ ಏರಿಕೆ ಮಾಡುವುದು ಮತ್ತು ಹಣದ ಹರಿವು ಕಡಿಮೆ ಮಾಡುವುದು ಪ್ರಮುಖವಾದುವು.

ಇದನ್ನೂ ಓದಿ: ವಂಚಕ ಲೋನ್ ಆ್ಯಪ್​ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ

ರೆಪೋ ದರ ಏರಿಸಿದರೆ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ದರ ಇಳಿಸಿದರೆ ಹಣದುಬ್ಬರ ಹೆಚ್ಚುತ್ತದೆ. ಹೀಗಾಗಿ, ಆರ್​ಬಿಐ ವಿತ್​ಡ್ರಾಯಲ್ ಆಫ್ ಅಕಾಮೊಡೇಶನ್ ನೀತಿಯನ್ನು ಮುಂದುವರಿಸಿಕೊಂಡು ಹೋಗಬಹುದು. ವೇರಿಯಬಲ್ ರೇಟ್ ರಿವರ್ಸ್ ರೆಪೋ (ವಿಆರ್​ಆರ್​ಆರ್) ಹರಾಜುಗಳನ್ನು ಬಳಸಿ ಆರ್​ಬಿಐ ಹಣದ ಸರಬರಾಜನ್ನು ಕಡಿಮೆಗೊಳಿಸುತ್ತದೆ. ಈ ನೀತಿಯಲ್ಲಿ ಬ್ಯಾಂಕುಗಳಿಂದ ಆರ್​ಬಿಐ ಕಿರು ಅವಧಿ ಸಾಲ ಪಡೆಯುತ್ತದೆ. ಬ್ಯಾಂಕುಗಳ ಬಳಿ ಸಾರ್ವಜನಿಕರಿಗೆ ನೀಡಲು ಹೆಚ್ಚು ಫಂಡ್ ಇಲ್ಲದಂತೆ ಮಾಡುವುದು ಆರ್​ಬಿಐ ಗುರಿ. ಇದು ತಾತ್ಕಾಲಿಕ ಮಾತ್ರ. ಹಣದುಬ್ಬರ ನಿಯಂತ್ರಣಕ್ಕೆ ಬಂದ ಬಳಿಕ ಈ ನೀತಿಯನ್ನು ಸಡಿಲಗೊಳಿಸಲಾಗುತ್ತದೆ.

ಸದ್ಯ ಎಂಪಿಸಿ ಸಭೆಯಲ್ಲಿ ರೆಪೋ ದರ ಮತ್ತು ವಿತ್​ಡ್ರಾಯಲ್ ಆಫ್ ಅಕಾಮಡೇಶನ್ ಈ ಎರಡು ನೀತಿಯನ್ನು ಮುಂದುವರಿಸಬಹುದು. ಇವಲ್ಲದೇ ಎಂಪಿಸಿ ಸಭೆಯಲ್ಲಿ ಆರ್ಥಿಕತೆ ಬಗ್ಗೆ ಆರ್​ಬಿಐನ ನಿರೀಕ್ಷೆ, ಅಂದಾಜು, ಒಟ್ಟಾರೆ ನೋಟ ಇವೆಲ್ಲವೂ ಚರ್ಚೆಗೆ ಬರಲಿವೆ. 2023-24ರ ಹಣಕಾಸು ವರ್ಷದ ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಜಿಡಿಪಿ ನಿರೀಕ್ಷೆಮೀರಿ ಉತ್ತಮವಾಗಿದೆ. ಕೊನೆಯ ಕ್ವಾರ್ಟರ್​ನ ಅಂಕಿ ಅಂಶ ಬರಬೇಕಿದೆ. ಈ ಹಣಕಾಸು ವರ್ಷ ಮತ್ತು ಮುಂಬರುವ ಹಣಕಾಸು ವರ್ಷಕ್ಕೆ ಜಿಡಿಪಿ ಎಷ್ಟು ಬೆಳೆಯಬಹುದು ಎಂದು ಆರ್​ಬಿಐ ಅಂದಾಜು ಮಾಡಬಹುದು.

ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ

ಏಪ್ರಿಲ್ 3, ಬುಧವಾರ ಆರಂಭವಾಗಿ ಎಪ್ರಿಲ್ 5, ಶುಕ್ರವಾರದವರೆಗೂ ಎಂಪಿಸಿ ಸಭೆ ನಡೆಯಲಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಬಹಿರಂಗಪಡಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ