RBI: ವಂಚಕ ಲೋನ್ ಆ್ಯಪ್ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ
RBI digita to prevent illegal loan lending apps: ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್ಗಳಿಂದ ಸಾರ್ವಜನಿಕರು ದೂರವಾಗಲು ಆರ್ಬಿಐ ಹೊಸ ಯೋಜನೆ ಹಾಕಿದೆ. ಲೋನ್ ಆ್ಯಪ್ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್ಬಿಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.
ನವದೆಹಲಿ, ಏಪ್ರಿಲ್ 1: ದಾಖಲೆ ಇಲ್ಲದೇ ಸಾಲ ನೀಡುತ್ತೇವೆಂದು ನಂಬಿಸಿ ವಂಚಿಸುವ ಮತ್ತು ಸಾಲ ನೀಡಿ ಮನಬಂದಂತೆ ಬಡ್ಡಿ ಪಡೆಯುವ ಲೋನ್ ಆ್ಯಪ್ಗಳ ಬಗ್ಗೆ ಸಾಕಷ್ಟು ವರದಿಗಳು ಬರುತ್ತಲೇ ಇವೆ. ತುರ್ತು ಅಗತ್ಯಕ್ಕೆಂದೋ, ಅಥವಾ ಬಡ್ಡಿ ಇಲ್ಲದೇ ಸಾಲ ಸಿಗುತ್ತದೆ ಎಂಬ ಆಸೆಯಿಂದಲೋ ಬಹಳಷ್ಟು ಜನರು ಇಂಥ ವಂಚಕ ಆ್ಯಪ್ಗಳ (illegal loan apps) ಬಲೆಗೆ ಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಆರ್ಬಿಐ ಅಕ್ರಮ ಲೋನ್ ಆ್ಯಪ್ಗಳಿಗೆ ಕಡಿವಾಣ ಹಾಕಲು ವಿಶೇಷ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿದೆ. ವರದಿ ಪ್ರಕಾರ ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ (DIGITA- ಡಿಜಿಟಾ) ಅನ್ನು ಆರ್ಬಿಐ ಸದ್ಯದಲ್ಲೇ ಅಖಾಡಕ್ಕೆ ಇಳಿಸುವ ಯೋಜನೆಯಲ್ಲಿದೆ.
ಡಿಜಿಟಾ ಒಂದು ರೀತಿಯಲ್ಲಿ ಲೋನ್ ಆ್ಯಪ್ಗಳ ಕಣ್ಗಾವಲಿಗೆ ಸೃಷ್ಟಿಯಾಗಿರುವ ಏಜೆನ್ಸಿಯಾಗಿರುತ್ತದೆ. ಆನ್ಲೈನ್ನಲ್ಲಿ ಸಾಲ ನೀಡವ ಆ್ಯಪ್ಗಳ ವೆರಿಫಿಕೇಶನ್ ಕಾರ್ಯವನ್ನು ಇದು ಮಾಡುತ್ತದೆ. ಹಾಗೆಯೇ ಈ ರೀತಿ ವೆರಿಫೈ ಆಗಿರುವ ಆ್ಯಪ್ಗಳ ರಿಜಿಸ್ಟರ್ ಮೈಂಟೇನ್ ಮಾಡುತ್ತದೆ. ಎಲ್ಲಾ ಡಿಜಿಟಲ್ ಲೋನ್ ಆ್ಯಪ್ಗಳು ಡಿಜಿಟಾದಿಂದ ವೆರಿಫೈ ಆಗಬೇಕು. ಇಲ್ಲದಿದ್ದರೆ ಅಂಥ ಲೋನ್ ಆ್ಯಪ್ ಅನ್ನು ಅನಧಿಕೃತವೆಂದು ಪರಿಗಣಿಸಲಾಗತ್ತದೆ. ಈ ಮೂಲಕ ಅಕ್ರಮ ಲೋನ್ ಆ್ಯಪ್ ಮತ್ತು ವಂಚಕ ಲೋನ್ ಆ್ಯಪ್ಗಳಿಗೆ ಕಡಿವಾಣ ಹಾಕಬಹುದು ಎಂಬುದು ಆರ್ಬಿಐನ ಲೆಕ್ಕಾಚಾರ.
ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ
ಡಿಜಿಟಾ ಏಜೆನ್ಸಿಯದ್ದು ಲೋನ್ ಆ್ಯಪ್ಗಳ ಅಧಿಕೃತತೆ ಪರಿಶೀಲಿಸುವುದು ಮಾತ್ರವಲ್ಲ, ಇವುಗಳ ತನಿಖೆಯನ್ನೂ ನಡೆಸುವ ಹೊಣೆ ಹೊಂದಿರುತ್ತದೆ. ಡಿಜಿಟಾ ರಚನೆ ಆದ ಬಳಿಕ ಜನಸಾಮಾನ್ಯರು ವೆರಿಫೈ ಆಗದ ಲೋನ್ ಆ್ಯಪ್ಗಳನ್ನು ಗುರುತಿಸಿ, ಅವುಗಳಿಂದ ದೂರ ಉಳಿಯಬಹುದು.
ವರದಿ ಪ್ರಕಾರ, ಆರ್ಬಿಐ 442 ಡಿಜಿಟಲ್ ಲೋನ್ ಆ್ಯಪ್ಗಳ ಪಟ್ಟಿಯನ್ನು ಐಟಿ ಸಚಿವಾಲಯಕ್ಕೆ ಕೊಟ್ಟಿದೆ. ಗೂಗಲ್ನಲ್ಲಿ ಇರಲು ಇವು ವಿಶ್ವಾಸಾರ್ಹವಾಗಿವೆಯಾ ಎಂಬುದನ್ನು ಪರಿಶೀಲಿಸುವಂತೆ ಕೋರಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ
ಇತ್ತೀಚೆಗೆ ಗೂಗಲ್ ಸಂಸ್ಥೆ ತನ್ನ ಆ್ಯಪ್ ಸ್ಟೋರ್ನಿಂದ 2022ರ ಸೆಪ್ಟಂಬರ್ನಿಂದ 12 ತಿಂಗಳ ಅವಧಿಯಲ್ಲಿ 2,200 ಲೋನ್ ಆ್ಯಪ್ಗಳನ್ನು ತೆಗೆದುಹಾಕಿತ್ತು. ಹಾಗೆಯೇ, ಆರ್ಬಿಐ ನಿಯಂತ್ರಿತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಜೊತೆ ಸಹಭಾಗಿತ್ವ ಇರುವ ಆ್ಯಪ್ಗಳಿಗೆ ಮಾತ್ರ ಗೂಗಲ್ ಪ್ಲೇಸ್ಟೋರ್ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ