ಆರ್​ಬಿಐ ಎಂಪಿಸಿ ಸಭೆ ಹೈಲೈಟ್ಸ್; ರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ; ಜಿಡಿಪಿ, ಹಣದುಬ್ಬರ ಅಂದಾಜು ವಿವರ ಇಲ್ಲಿದೆ

|

Updated on: Oct 06, 2023 | 11:52 AM

Shaktikanta Das Press Conference: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರವನ್ನು ಶೇ. 6.5ರಲ್ಲೇ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ಅಕ್ಟೋಬರ್ 4ರಿಂದ ನಡೆದ ಎಂಪಿಸಿ ಸಭೆಯಲ್ಲಿ ತೆಗೆದುಕೊಂಡ ಹಲವು ಮಹತ್ವದ ನಿರ್ಧಾರಗಳಲ್ಲಿ ಇದೂ ಒಂದು. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಎಂಪಿಸಿ ಸಭೆಯ ನಿರ್ಧಾರಗಳು ಮತ್ತು ವಿಚಾರಗಳನ್ನು ಪ್ರಸ್ತುತಪಡಿಸಿದರು.

ಆರ್​ಬಿಐ ಎಂಪಿಸಿ ಸಭೆ ಹೈಲೈಟ್ಸ್; ರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ; ಜಿಡಿಪಿ, ಹಣದುಬ್ಬರ ಅಂದಾಜು ವಿವರ ಇಲ್ಲಿದೆ
ಭಾರತೀಯ ರಿಸರ್ವ್ ಬ್ಯಾಂಕ್
Follow us on

ನವದೆಹಲಿ, ಅಕ್ಟೋಬರ್ 6: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರವನ್ನು ಶೇ. 6.5ರಲ್ಲೇ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ಅಕ್ಟೋಬರ್ 4ರಿಂದ ನಡೆದ ಎಂಪಿಸಿ ಸಭೆಯಲ್ಲಿ ತೆಗೆದುಕೊಂಡ ಹಲವು ಮಹತ್ವದ ನಿರ್ಧಾರಗಳಲ್ಲಿ ಇದೂ ಒಂದು. ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಎಂಪಿಸಿ ಸಭೆಯ ನಿರ್ಧಾರಗಳು ಮತ್ತು ವಿಚಾರಗಳನ್ನು ಪ್ರಸ್ತುತಪಡಿಸಿದರು. ಈ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ, ಹಣದುಬ್ಬರ ಇತ್ಯಾದಿ ಬಗ್ಗೆ ಆರ್​ಬಿಐ ಅಭಿಪ್ರಾಯಗಳನ್ನು ತಿಳಿಸಿದರು.

ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ತಮ್ಮ ಗುರಿಯ ಈಡೇರಿಕೆಗೆ ಪೂರಕವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಶಕ್ತಿಕಾಂತದಾಸ್ ತಿಳಿಸಿದ್ದಾರೆ. ರೆಪೋ ದರ ಶೇ. 6.5ರಲ್ಲಿ ಮುಂದುವರಿಸುವ ನಿರ್ಧಾರ ಮಾತ್ರವಲ್ಲದೇ, ಎಸ್​ಡಿಎಫ್ ದರವನ್ನು ಶೇ. 6.25ರಲ್ಲೂ ಮತ್ತು ಎಂಎಸ್​ಎಫ್ ಹಾಗು ಬ್ಯಾಂಕ್ ದರಗಳನ್ನು ಶೇ. 6.75ರಲ್ಲೂ ಮುಂದುವರಿಸಲು ಆರ್​ಬಿಐನ ಈ ಸಮಿತಿ ನಿರ್ಧಾರ ಮಾಡಿರುವುದನ್ನು ದಾಸ್ ಹೇಳಿದರು. ಎಸ್​ಡಿಎಫ್ ಮತ್ತು ಎಂಎಸ್​ಎಫ್ ಎಂಬುದು ಬಡ್ಡಿದರದ ಕೆಳಗಿನ ಮತ್ತು ಮೇಲಿನ ಮಿತಿ ಆಗಿವೆ.

ಇದನ್ನೂ ಓದಿ: ಇವರೇನು ಸೆಬಿಯನ್ನು ಮೂರ್ಖ ಅಂದುಕೊಂಡಿದ್ದಾರಾ?: ಸೋಷಿಯಲ್ ಮೀಡಿಯಾ ಸ್ಟಾರ್ಸ್, ಆಲ್ಗೋ ಟ್ರೇಡರ್​ಗಳನ್ನು ತರಾಟೆಗೆ ತೆಗೆದುಕೊಂಡ ಸೆಬಿ ಅಧ್ಯಕ್ಷೆ

ರೆಪೋ ದರ ಎಂದರೇನು?

ರೆಪೋ ದರ ಎಂಬುದು ಆರ್​ಬಿಐನ ಸಾಲಕ್ಕೆ ಬಡ್ಡಿದರವಾಗಿದೆ. ವಾಣಿಜ್ಯ ಬ್ಯಾಂಕುಗಳು ಆರ್​ಬಿಐ ಬಳಿ ಪಡೆಯುವ ಸಾಲಕ್ಕೆ ತೆರಬೇಕಾದ ಬಡ್ಡಿದರ ಅದು. ರಿವರ್ಸ್ ರೆಪೋ ದರ ಎಂದರೆ ಬ್ಯಾಂಕುಗಳು ಆರ್​ಬಿಐ ಬಳಿ ಇರಿಸುವ ಠೇವಣಿಗೆ ಸಿಗುವ ಬಡ್ಡಿದರವಾಗಿದೆ.

ಇನ್ನು, ಹಣಕಾಸು ಹರಿವು ಹಿಂಪಡೆಯುವ (Withdrawal of Accommodation ವಿಚಾರದಲ್ಲೂ ಆರ್​ಬಿಐ ನಿಲುವು ಮುಂದುವರಿದಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಹಣದುಬ್ಬರಕ್ಕೆ ಕಡಿವಾಣ ಹಾಕಲು ಹಣಕಾಸು ಹರಿವನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು. ಆಗ ಎಲ್ಲಾ ಎಂಪಿಸಿ ಸದಸ್ಯರು ಒಮ್ಮತದಿಂದ ಅದನ್ನು ಬೆಂಬಲಿಸಿದ್ದರು. ಈ ಬಾರಿ ಆ ನಿಲುವಿಗೆ 5:1ರ ಬೆಂಬಲ ಸಿಕ್ಕಿದೆ.

ಇದನ್ನೂ ಓದಿ: ಮೂರನೇ ತ್ರೈಮಾಸಿಕ ಅವಧಿಗೆ ಪಿಎಫ್ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹತ್ತು ವಿವಿಧ ಪಿಎಫ್ ನಿಧಿಗಳಿಗೆ ಸರ್ಕಾರ ಎಷ್ಟು ಬಡ್ಡಿ ನೀಡುತ್ತೆ?

ಹಣದುಬ್ಬರ ಅಂದಾಜು

ಮುಂಬರುವ ದಿನಗಳಲ್ಲಿ ಹಣದುಬ್ಬರ ಎಷ್ಟಿರಬಹುದು ಎಂದು ಆರ್​ಬಿಐ ಅವಲೋಕಿಸಿದ್ದು, ಹಿಂದಿನ ಅಭಿಪ್ರಾಯಗಳನ್ನೇ ಪುನರುಚ್ಚರಿಸಿದೆ. ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.4ರಷ್ಟಿರಬಹುದು ಎಂದು ಹೇಳಿದೆ. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ ಸೇರಿದಂತೆ 4 ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಎಷ್ಟಿರಬಹುದು ಎಂದು ಆರ್​ಬಿಐ ಮಾಡಿದ ಅಂದಾಜು ಹೀಗಿದೆ:

  • 2ನೇ ಕ್ವಾರ್ಟರ್ (2023ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿ): ಶೇ. 6.4
  • 3ನೇ ಕ್ವಾರ್ಟರ್: ಶೇ. 5.6
  • 4ನೇ ಕ್ವಾರ್ಟರ್ (2025ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿ: ಶೇ. 5.2
  • 2025ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್: ಶೇ. 5.2

ಇನ್ನು, ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5 ರಷ್ಟು ಬೆಳೆಯಬಹುದು ಎನ್ನುವ ತನ್ನ ಲೆಕ್ಕಾಚಾರಕ್ಕೆ ಆರ್​ಬಿಐ ಬದ್ಧವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Fri, 6 October 23