UPI: ಫೋನ್ ಪೆ, ಗೂಗಲ್​ ಪೆ, ಭೀಮ್ ವಹಿವಾಟು ಆಗಬಹುದು ದುಬಾರಿ; ಯುಪಿಐ ಆಧರಿತ ವಹಿವಾಟಿಗೆ ಶುಲ್ಕ ವಿಧಿಸಲು ಆರ್​​ಬಿಐ ಚಿಂತನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 18, 2022 | 2:59 PM

ಒಂದು ವೇಳೆ ಆರ್​ಬಿಐನ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಫೋನ್ ಪೆ, ಗೂಗಲ್ ಪೆ, ಭೀಮ್ ಸೇರಿದಂತೆ ಆ್ಯಪ್​ಗಳ ಮೂಲಕ ನಡೆಯುವ ಯುಪಿಐ ಆಧರಿತ ಪೇಮೆಂಟ್ ವ್ಯವಸ್ಥೆಗೆ ಶುಲ್ಕ ವಿಧಿಸಲಾಗುತ್ತದೆ.

UPI: ಫೋನ್ ಪೆ, ಗೂಗಲ್​ ಪೆ, ಭೀಮ್ ವಹಿವಾಟು ಆಗಬಹುದು ದುಬಾರಿ; ಯುಪಿಐ ಆಧರಿತ ವಹಿವಾಟಿಗೆ ಶುಲ್ಕ ವಿಧಿಸಲು ಆರ್​​ಬಿಐ ಚಿಂತನೆ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಡಿಬಿಟ್ ಕಾರ್ಡ್​ ಆಧರಿತ ನಗದು ವರ್ಗಾವಣೆ ಮತ್ತು ಯುಪಿಐ (Unified Payments Interface – UPI) ಆಧರಿತ ಹಣಕಾಸಿನ ವಹಿವಾಟಿಗೆ ಆಗುತ್ತಿರುವ ವೆಚ್ಚವನ್ನು ಭರ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಅಲ್ಪ ಪ್ರಮಾಣದ ಶುಲ್ಕ ವಿಧಿಸುವ ಸಾಧ್ಯತೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಪರಿಶೀಲಿಸುತ್ತಿದೆ. ಪ್ರತಿ ವಹಿವಾಟಿಗೆ ಇಂತಿಷ್ಟು ಮೊತ್ತ ಎಂದು ನಿಗದಿಪಡಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ‘ಪಾವತಿ ವ್ಯವಸ್ಥೆಗೆ ಶುಲ್ಕಗಳು’ ಹೆಸರಿನ ಕರಡು ಪ್ರಸ್ತಾವ ಪ್ರಕಟಿಸಿರುವ ಆರ್​ಬಿಐ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಒಂದು ವೇಳೆ ಆರ್​ಬಿಐನ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಫೋನ್ ಪೆ, ಗೂಗಲ್ ಪೆ, ಭೀಮ್ ಸೇರಿದಂತೆ ಆ್ಯಪ್​ಗಳ ಮೂಲಕ ನಡೆಯುವ ಯುಪಿಐ ಆಧರಿತ ಪೇಮೆಂಟ್ ವ್ಯವಸ್ಥೆಗೆ ಶುಲ್ಕ ವಿಧಿಸಲಾಗುತ್ತದೆ.

ಸಾರ್ವಜನಿಕರು ನಡೆಸುವ ದೊಡ್ಡಮಟ್ಟದ ವಹಿವಾಟು ಅಥವಾ ಹೂಡಿಕೆ ಸಂದರ್ಭದಲ್ಲಿ ಆರ್​ಬಿಐ ಒಂದಿಷ್ಟು ಕಾರ್ಯಾಚರಣೆ ವೆಚ್ಚ ಭರಿಸಬೇಕಾಗುತ್ತದೆ. ಪ್ರಸ್ತುತ ಆರ್​ಟಿಜಿಎಸ್​ಗೆ (Real Time Gross Settlement – RTGS) ಲಾಭ ಗಳಿಕೆ ಉದ್ದೇಶದಿಂದ ಶುಲ್ಕ ವಿಧಿಸುತ್ತಿಲ್ಲ ಎಂದು ಆರ್​ಬಿಐ ಹೇಳಿದೆ. ದೊಡ್ಡಮಟ್ಟದ ನಗದು ವರ್ಗಾವಣೆ ಸಂದರ್ಭದಲ್ಲಿ ಆರ್​ಟಿಜಿಎಸ್ ಬಳಕೆಯಾಗುತ್ತಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ನಡೆಸುವ ಇಂಥ ವಹಿವಾಟು ಉಚಿತವಾಗಿ ಇರಬೇಕೆ ಎಂಬ ಬಗ್ಗೆಯೂ ಆರ್​ಬಿಐ ಸಾರ್ವಜನಿಕರ ಸಲಹೆ ಕೋರಿದೆ.

ನೆಫ್ಟ್​ (National Electronic Funds Transfer – NEFT) ವಹಿವಾಟು ಸುರಕ್ಷಿತವಾಗಿ ನಡೆಸಲೆಂದೂ ಆರ್​ಬಿಐ ಸಾಕಷ್ಟು ಹೂಡಿಕೆ ಮಾಡಿದೆ. ಕಾರ್ಯಾಚರಣೆ ವೆಚ್ಚವೂ ಸಾಕಷ್ಟು ಬರುತ್ತಿದೆ. ಲಾಭ ಗಳಿಕೆಯ ಉದ್ದೇಶದಿಂದ ಅಲ್ಲವಾದರೂ, ಕಾರ್ಯಾಚರಣೆ ಶುಲ್ಕ ಸಂಗ್ರಹದ ದೃಷ್ಟಿಯಿಂದ ಸೂಕ್ತ ವೆಚ್ಚ ವಿಧಿಸಬಹುದೇ ಎಂದು ಆರ್​ಬಿಐ ಸಾರ್ವಜನಿಕರ ಅಭಿಪ್ರಾಯ ಕೇಳಿದೆ. ಸಾರ್ವಜನಿಕರು ಡಿಜಿಟಲ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಒಗ್ಗಿಕೊಳ್ಳಲಿ ಎನ್ನುವ ಕಾರಣಕ್ಕೆ ನೆಫ್ಟ್, ಯುಪಿಐ ಮತ್ತು ಆರ್​ಟಿಜಿಎಸ್ ವ್ಯವಸ್ಥೆಯನ್ನು ಆರ್​ಬಿಐ ರೂಪಿಸಿದೆ. ಇದು ಸಾರ್ವಜನಿಕರ ಹಿತಕ್ಕಾಗಿ ರೂಪಿಸಿದ ವ್ಯವಸ್ಥೆ ಎನ್ನುವುದು ನಿಜ. ಆದರೆ ಎಷ್ಟು ದಿನ ಈ ವ್ಯವಸ್ಥೆಗಳನ್ನು ಉಚಿತವಾಗಿಯೇ ಉಳಿಸಬೇಕು ಎಂದು ಸಂಶೋಧನಾ ವರದಿ ಪ್ರಶ್ನಿಸಿದೆ.

ಪ್ರಸ್ತುತ ಐಎಂಪಿಎಸ್ (Immediate Payment Service – IMPS) ವ್ಯವಸ್ಥೆಗೆ ಕೆಲ ಹಣಕಾಸು ಸಂಸ್ಥೆಗಳು ಶುಲ್ಕ ನಿಗದಿಪಡಿಸಿವೆ. ಮುಂದಿನ ದಿನಗಳಲ್ಲಿ ಈ ಶುಲ್ಕಗಳನ್ನು ಆರ್​ಬಿಐ ನಿರ್ವಹಿಸುವ ಕುರಿತು ಆರ್​ಬಿಐ ಪ್ರಕಟಿಸಿರುವ ವರದಿಯು ಪ್ರಸ್ತಾಪಿಸಿದೆ. ಪಿಎಸ್​ಒಗಳು (Payment System Operators – PSOs) ಪ್ರಸ್ತುತ ಡೆಬಿಟ್ ಕಾರ್ಡ್​ ವಹಿವಾಟಿಗೆ ವಿಧಿಸುತ್ತಿರುವ ಶುಲ್ಕವನ್ನು ಕಡಿತಗೊಳಿಸುವ ಬದಲು ಪಾವತಿ ವ್ಯವಸ್ಥೆಯ ಸೇವೆ ಒದಗಿಸುವ ಸಂಸ್ಥೆಗಳಿಗೆ Payment System Providers – PSPs) ಶುಲ್ಕದ ಒಂದು ಭಾಗವನ್ನು ಹಂಚಿಕೆ ಮಾಡುವ ಕುರಿತು ಆರ್​ಬಿಐ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಪಿಎಸ್​ಒಗಳಲ್ಲಿ ಕ್ರೆಡಿಟ್ ಕಾರ್ಡ್​ ಬಳಕೆಗೆ ವಿಧಿಸುವ ಶುಲ್ಕವನ್ನೂ ಆರ್​ಬಿಐ ನಿರ್ವಹಿಸಲಿದೆ.

ಯುಪಿಐ ವ್ಯವಸ್ಥೆಗೂ ಮುಂದಿನ ದಿನಗಳಲ್ಲಿ ಐಎಂಪಿಎಸ್​ ಮಾದರಿಯಲ್ಲಿ ನಿಗದಿತ ಶುಲ್ಕ ವಿಧಿಸಲಾಗುವುದು. ವಹಿವಾಟಿನ ಮೊತ್ತ ಆಧರಿಸಿ ಶುಲ್ಕ ನಿಗದಿಪಡಿಸಬಹುದು ಎಂದು ಆರ್​ಬಿಐನ ತಜ್ಞರು ಸಲಹೆ ಮಾಡಿದ್ದಾರೆ. ಯುಪಿಐ ಮೂಲಕ ನಗದು ವಹಿವಾಟು ತತ್​ಕ್ಷಣದಲ್ಲಿ ನಡೆಯುತ್ತಿದೆ. ಸಾರ್ವಜನಿಕರಿಗೂ ಇದನ್ನು ಬಳಸುವುದು ಸುಲಭ ಎನಿಸಿದೆ. ಮುಂದಿನ ದಿನಗಳಲ್ಲಿ ಯುಪಿಐ ಬಳಕೆಗೆ ಆರ್​ಬಿಐ ಶುಲ್ಕವನ್ನು ಹೇಗೆ ನಿಗದಿಪಡಿಸಲಿದೆ ಮತ್ತು ಸಾರ್ವಜನಿಕರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಕುತೂಹಲ ಹುಟ್ಟುಹಾಕಿದೆ. ಡಿಜಿಟಲ್ ಬ್ಯಾಂಕಿಂಗ್ ಆಶಯ ಈಡೇರುವಲ್ಲಿ ಯುಪಿಐ ಮಹತ್ವದ ಪಾತ್ರ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.