RBI updates: ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿ ಏರಿಕೆ; ಡೆಲಿಗೇಟೆಡ್ ಪೇಮೆಂಟ್ ಸಿಸ್ಟಂ ಪರಿಚಯ
UPI tax payment limit raised to Rs 5 lakh: ಆರ್ಬಿಐ ಎಂಪಿಸಿ ಸಭೆಯಲ್ಲಿ ಯುಪಿಐ ತೆರಿಗೆ ಪಾವತಿ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ. 2023ರ ಡಿಸೆಂಬರ್ನಲ್ಲೂ ಆರ್ಬಿಐ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾಡುವ ಯುಪಿಐ ಪಾವತಿ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಿತ್ತು. ಇದೇ ವೇಳೆ, ಆರ್ಬಿಐ ನಿಯೋಜಿತ ಪಾವತಿ ಅಥವಾ ಡೆಲಿಗೇಟೆಡ್ ಪೇಮೆಂಟ್ ವ್ಯವಸ್ಥೆಯನ್ನು ಪರಿಚಯಿಸಿದೆ.
ನವದೆಹಲಿ, ಆಗಸ್ಟ್ 8: ತೆರಿಗೆ ಪಾವತಿಯನ್ನು ಸುಲಭಗೊಳಿಸಲು ಆರ್ಬಿಐ ಕ್ರಮ ಕೈಗೊಂಡಿದ್ದು, ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಿಸಿದೆ. ಆರ್ಬಿಐನ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗವರ್ನರ್ ಶಕ್ತಿಕಾಂತ ದಾಸ್, ಈ ವಿಚಾರವನ್ನು ತಿಳಿಸಿದರು. ಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂವರೆಗೆ ಹಣ ಕಳುಹಿಸಬಹುದು. ಈಗ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂವರೆಗೆ ಹಣ ಕಳುಹಿಸಲು ಸಾಧ್ಯ ಎಂದು ಹೇಳಿದರು. ಒಂದು ವಹಿವಾಟಿನಲ್ಲಿ ಈಗ ನೀವು 5 ಲಕ್ಷ ರೂವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ (2023) ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಮೂಲಕ ಮಾಡಲಾಗುವ ಹಣ ಪಾವತಿ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ಪಾವತಿ ಕಾರ್ಯವನ್ನು ಸುಗಮಗೊಳಿಸಲು ಟ್ಯಾಕ್ಸ್ ಪೇಮೆಂಟ್ ಮಿತಿಯನ್ನೂ 5 ಲಕ್ಷ ರೂಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ರೈಲು ಚಾಲಕರ ಸ್ಥಿತಿ ಆಗ ಹೇಗಿತ್ತು, ಈಗ ಹೇಗಿದೆ? ಹತ್ತು ವರ್ಷದ ಹಿಂದಿನ ಪರಿಸ್ಥಿತಿ ಹೋಲಿಸಿದ ಸಚಿವ ವೈಷ್ಣವ್
ಡೆಲಿಗೇಟೆಡ್ ಪೇಮೆಂಟ್ ವ್ಯವಸ್ಥೆಯ ಪರಿಚಯ
ಯುಪಿಐ ಮೂಲಕ ಡೆಲಿಗೇಟೆಡ್ ಪೇಮೆಂಟ್ಸ್ ಅಥವಾ ನಿಯೋಜಿತ ಪಾವತಿ ವ್ಯವಸ್ಥೆಯನ್ನು ಆರ್ಬಿಐ ಪರಿಚಯಿಸಲಿರುವುದನ್ನು ಶಕ್ತಿಕಾಂತ ದಾಸ್ ತಿಳಿಸಿದರು. ಇದು ಒಬ್ಬ ಬ್ಯಾಂಕ್ ಖಾತೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಲು ಅನುವು ಮಾಡಿಕೊಡುವ ಒಂದು ರೀತಿಯ ಫೀಚರ್ ಆಗಿದೆ.
ಉದಾಹರಣೆಗೆ, ಒಂದು ಬ್ಯಾಂಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯನ್ನು ಪ್ರಾಥಮಿಕ ಬಳಕೆದಾರ ಎಂದು ಪರಿಗಣಿಸಬಹುದು. ಇವರು ತಮ್ಮ ಬ್ಯಾಂಕ್ ಖಾತೆಯನ್ನು ಯುಪಿಐ ಮೂಲಕ ಸೀಮಿತ ಪ್ರಮಾಣದಲ್ಲಿ ಬಳಸಲು ಎರಡನೇ ವ್ಯಕ್ತಿಗೆ ಅವಕಾಶ ಕೊಡಬಹುದು. ಯುಪಿಐ ವಹಿವಾಟು ಎಷ್ಟು ಮೊತ್ತಕ್ಕೆ ಸೀಮಿತ ಆಗಬೇಕು ಎಂಬುದನ್ನು ಪ್ರಾಥಮಿಕ ಸದಸ್ಯ ನಿರ್ಧರಿಸಬಹುದು.
ಇದನ್ನೂ ಓದಿ: ಶೇ. 6.5ರ ಬಡ್ಡಿದರ ಮುಂದುವರಿಸಲು ಆರ್ಬಿಐ ನಿರ್ಧಾರ
ನಿದರ್ಶನ ತೆಗೆದುಕೊಳ್ಳುವುದಾದರೆ, ಒಬ್ಬ ಮನೆಯ ಯಜಮಾನ ಒಂದು ಬ್ಯಾಂಕ್ ಖಾತೆ ಹೊಂದಿದ್ದು, ಅವರ ಮಗ ಅಥವಾ ಮಗಳು ಇನ್ನೂ ಅಪ್ರಾಪ್ತರಾಗಿದ್ದು ಬ್ಯಾಂಕ್ ಖಾತೆ ಮಾಡಿಸಿರುವುದಿಲ್ಲ. ಆದರೆ ಇವರ ಯುಪಿಐಗೆ ಅಪ್ಪನ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು. ಆದರೆ, ಎಷ್ಟು ವಹಿವಾಟು ನಡೆಸಬೇಕು ಎಂಬುದನ್ನು ಅಪ್ಪನೇ ನಿರ್ಧರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ