ಸಾಲ ಬಾಕಿ, ಆಡಳಿತ ವೈಫಲ್ಯ: ರಿಲಯನ್ಸ್​ ಕ್ಯಾಪಿಟಲ್ ಸೂಪರ್​ಸೀಡ್ ಮಾಡಿದ ಆರ್​ಬಿಐ

ದಿವಾಳಿ ಕಾಯ್ದೆಯ (2019) ಅನ್ವಯ ರಿಲಯನ್ಸ್​ ಕಂಪನಿಯ ವಿರುದ್ಧ ಆರ್​ಬಿಐ ಶೀಘ್ರ ಕ್ರಮ ಜರುಗಿಸಲಿದೆ.

ಸಾಲ ಬಾಕಿ, ಆಡಳಿತ ವೈಫಲ್ಯ: ರಿಲಯನ್ಸ್​ ಕ್ಯಾಪಿಟಲ್ ಸೂಪರ್​ಸೀಡ್ ಮಾಡಿದ ಆರ್​ಬಿಐ
ಅನಿಲ್ ಅಂಬಾನಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 29, 2021 | 5:49 PM

ಮುಂಬೈ: ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗಿರುವ ರಿಲಯನ್ಸ್​ ಕ್ಯಾಪಿಟನ್ ಕಂಪನಿಯ ಆಡಳಿತ ಮಂಡಳಿಯನ್ನು ಭಾರತೀಯ ರಿಸರ್ವ್​ ಬ್ಯಾಂಕ್ (The Reserve Bank of India – RBI) ಸೋಮವಾರ (ನ.29) ಸೂಪರ್​ಸೀಡ್ ಮಾಡಿದೆ. ಸಮರ್ಪಕವಾಗಿ ಆಡಳಿತ ನಿರ್ವಹಿಸುವಲ್ಲಿಯೂ ನಿರ್ದೇಶಕರ ಮಂಡಳಿ ವಿಫಲವಾಗಿದೆ. ಸಕಾಲದಲ್ಲಿ ಆಡಳಿತ ಮಂಡಳಿಯು ಸಮರ್ಪಕ ಕ್ರಮಗಳನ್ನು ಜರುಗಿಸಿಲ್ಲ ಎಂದು ಆರ್​ಬಿಐ ಹೇಳಿದೆ. ಕಂಪನಿಯ ಆಡಳಿತಾಧಿಕಾರಿಯಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ವೈ.ನಾಗೇಶ್ವರರಾವ್ ಅವರನ್ನು ಆರ್​ಬಿಐ ನೇಮಿಸಿದೆ. ದಿವಾಳಿ ಕಾಯ್ದೆಯ (2019) ಅನ್ವಯ ಕಂಪನಿಯ ವಿರುದ್ಧ ಆರ್​ಬಿಐ ಶೀಘ್ರ ಕ್ರಮ ಜರುಗಿಸಲಿದೆ.

ದಿವಾಳಿ ನಿಯಮಗಳ ಅನ್ವಯ ಕಂಪನಿಯ ಆಸ್ತಿಯನ್ನು ವಿಲೇವಾರಿ ಮಾಡಲು ಸೂಕ್ತ ವ್ಯಕ್ತಿಯನ್ನು ನಿಯೋಜಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರವನ್ನು (National Company Law Tribunal – NCLT) ಆರ್​ಬಿಐ ಕೋರಿದೆ. ಎಚ್​ಡಿಎಫ್​ಸಿ (Housing Development Finance Corporation – HDFC) ಮತ್ತು ಆ್ಯಕ್ಸಿಸ್​ ಬ್ಯಾಂಕ್​ಗಳಿಂದ ಪಡೆದುಕೊಂಡಿರುವ ₹ 624 ಕೋಟಿ ಮೊತ್ತದ ಸಾಲ ಮರುಪಾವತಿ ಮಾಡುವಲ್ಲಿ ರಿಲಯನ್ಸ್ ಕ್ಯಾಪಿಟಲ್ ವಿಫಲವಾಗಿದೆ. ಈ ವಿಚಾರವನ್ನು ರಿಲಯನ್ಸ್ ಕ್ಯಾಪಿಟಲ್ ನವೆಂಬರ್ 27, 2020ರಂದು ಷೇರುಪೇಟೆ ಅಧಿಕಾರಿಗಳಿಗೆ ತಿಳಿಸಿತ್ತು.

ಅಕ್ಟೋಬರ್ 31ರ ಮಾಹಿತಿ ಪ್ರಕಾರ ಎಚ್​ಡಿಎಫ್​ಗೆ ₹ 4.77 ಕೋಟಿ ಹಾಗೂ ಆ್ಯಕ್ಸಿಸ್​ ಬ್ಯಾಂಕ್​ಗೆ ₹ 0.71 ಕೋಟಿ ಬಡ್ಡಿಕಟ್ಟುವುದುನ್ನು ರಿಲಯನ್ಸ್ ಕ್ಯಾಪಿಟಲ್ ಬಾಕಿ ಉಳಿಸಿಕೊಂಡಿದೆ. ಎಚ್​ಡಿಎಫ್​ಸಿಯಿಂದ 6 ತಿಂಗಳಿನಿಂದ 7 ವರ್ಷಗಳ ಅವಧಿಗೆ ಶೇ 10.6ರಿಂದ ಶೇ 13ರ ಬಡ್ಡಿದರದಲ್ಲಿ ಹಾಗೂ ಆ್ಯಕ್ಸಿಸ್​ ಬ್ಯಾಂಕ್​ನಿಂದ 3ರಿಂದ 7 ವರ್ಷಗಳ ಅವಧಿಗೆ ಶೇ 8.25ರ ಬಡ್ಡಿದರದಲ್ಲಿ ರಿಲಯನ್ಸ್ ಕ್ಯಾಪಿಟಲ್ ಸಾಲ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶಗಳ ನಿರ್ಬಂಧ ಇರುವುದರಿಂದ ಆಸ್ತಿಗಳ ನಗದೀಕರಣ ಸಾಧ್ಯವಾಗುತ್ತಿಲ್ಲ. ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಈ ವಿಷಯವನ್ನು ಕಂಪನಿಯು ತಿಳಿಸಿದೆ. ಹೀಗಾಗಿ ಸಾಲದ ತೀರುವಳಿ ಸಾಧ್ಯವಾಗುತ್ತಿಲ್ಲ ಎಂದರು.

ಕಳೆದ ಏಪ್ರಿಲ್ 2021ರಲ್ಲಿ ಕಂಪನಿಯು ಪರಿವರ್ತಿಸಲು ಆಗದ ಸಾಲಪತ್ರಗಳ ಮೇಲೆ (Non-Convertible Debentures – NCDs) ಬಡ್ಡಿ ಪಾವತಿಸಲು ವಿಫಲವಾಗಿತ್ತು. ಕಾಲಮಿತಿಯಲ್ಲಿ ತನ್ನ ಎಲ್ಲ ಸಾಲದ ಬಾಧ್ಯತೆಗಳನ್ನು ಪೂರೈಸಲು ಬದ್ಧವಾಗಿರುವುದಾಗಿ ಘೋಷಿಸಿದ್ದ ಕಂಪನಿಯು ತನ್ನ ಸುಪರ್ದಿಯಲ್ಲಿರುವ ಆಸ್ತಿಗಳನ್ನು ಮಾರಲು ಸಾಲಪತ್ರಗಳ ವಿಶ್ವಸ್ಥರಾಗಿರುವ ವಿಸ್ತ್ರಾ ಮತ್ತು ಇತರ ಸಾಲಪತ್ರಗಳ ಖರೀದಿದಾರರ ಅನುಮತಿ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿತ್ತು.

ಸಾಲಪತ್ರಗಳನ್ನು ಹೊಂದಿರುವವರ ಸಮಿತಿಯು ರಿಲಯನ್ಸ್​ ಕ್ಯಾಪಿಟಲ್ ಅಧೀನದಲ್ಲಿರುವ ಆಸ್ತಿ ಮತ್ತು ಇತರ ಹೂಡಿಕೆಗಳನ್ನು ನಗದೀಕರಿಸುವ ಬಗ್ಗೆ ಆಸಕ್ತಿಯ ಪ್ರಸ್ತಾವಗಳನ್ನು (Expression of Interest – EoI) ಆಹ್ವಾನಿಸಿತ್ತು. ಈ ಆಹ್ವಾನವನ್ನು ಅಕ್ಟೋಬರ್​ 31, 2020ರಂದು ಹೊರಡಿಸಲಾಗಿತ್ತು. ಕಂಪನಿಯು ಹಲವು ಪ್ರಸ್ತಾವಗಳನ್ನು ಸ್ವೀಕರಿಸಿದ್ದರೂ ಹಲವು ನ್ಯಾಯಾಲಯಗಳಲ್ಲಿ ವಿಚಾರಣೆಗಳು ಬಾಕಿ ಉಳಿದ ಕಾರಣ ಮಾರಾಟ ಪ್ರಕ್ರಿಯೆಯು ತಡವಾಯಿತು. ರಿಲಯನ್ಸ್​ ಕ್ಯಾಪಿಟಲ್ ಲಿಮಿಟೆಡ್​ನ ಆಡಳಿತ ಮಂಡಳಿಯಲ್ಲಿ ಅನಿಲ್ ಅಂಬಾನಿ, ರಾಹುಲ್ ಸರಿನ್​, ಛಾಯಾ ವಿರಾನಿ, ಥಾಮಸ್ ಮ್ಯಾಥ್ಯೂ, ಎ.ಎನ್.ಸೇತುರಾಮ್ ಮತ್ತು ಧನಂಜಯ್ ತಿವಾರಿ ಇದ್ದಾರೆ.

ಇದನ್ನೂ ಓದಿ: Reliance Industries O2C: ಪ್ರಸ್ತಾವಿತ O2C ಮಾರಾಟ ಮರು ಮೌಲ್ಯಮಾಪನಕ್ಕೆ ರಿಲಯನ್ಸ್, ಸೌದಿ ಅರಾಮ್ಕೊ ನಿರ್ಧಾರ​ ಇದನ್ನೂ ಓದಿ: ಗುಜರಾತ್‌ನಲ್ಲಿ 5G ಪರೀಕ್ಷೆಗಾಗಿ ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್‌ಗೆ ಪರವಾನಗಿ, ಸ್ಪೆಕ್ಟ್ರಮ್

Published On - 5:43 pm, Mon, 29 November 21