ನವದೆಹಲಿ, ನವೆಂಬರ್ 8: ಡೊನಾಲ್ಡ್ ಟ್ರಂಪ್ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಗೆದ್ದ ಬಳಿಕ ರಿನಿವಬಲ್ ಎನರ್ಜಿ ಸೆಕ್ಟರ್ನ ಷೇರುಗಳಿಗೆ ಹಿನ್ನಡೆ ಆಗುತ್ತಿದೆ. ಸತತ ಎರಡು ದಿನ ಷೇರುಬೆಲೆ ಕುಸಿತ ಕಂಡಿದೆ. ಇತ್ತೀಚೆಗೆ ಐಪಿಒಗೆ ಬಂದಿದ್ದ ವಾರೀ ಎನರ್ಜೀಸ್ ಸಂಸ್ಥೆಯ ಷೇರು ಸಿಕ್ಕಾಪಟ್ಟೆ ಬೇಡಿಕೆ ಪಡೆದಿತ್ತು. ಈಗ ಟ್ರಂಪ್ ಎಫೆಕ್ಟ್ನಿಂದ ಕಳೆದ ಎರಡು ದಿನಗಳಿಂದ ವಾರಿ ಷೇರು ತನ್ನ ಹೂಡಿಕೆದಾರರಿಗೆ ವರಿ ತರುತ್ತಿದೆ. ಎರಡು ದಿನದಲ್ಲಿ ಶೇ. 10ರಷ್ಟು ಷೇರುಬೆಲೆ ಇಳಿಮುಖವಾಗಿದೆ.
ಡೊನಾಲ್ಡ್ ಟ್ರಂಪ್ 2016ರಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಪಟ್ಟ ಪಡೆದಾಗಿನಿಂದಲೂ ಸಾಂಪ್ರದಾಯಿಕ ಇಂಧನದ ಪರವಾಗಿ ಇದ್ಧಾರೆ. ರಿನಿವಬಲ್ ಎನರ್ಜಿ ಅಥವಾ ಮರುಬಳಕೆ ಇಂಧನ ಇತ್ಯಾದಿ ಪರ್ಯಾಯ ಇಂಧನ ಬಳಕೆಯ ಕಡು ವಿರೋಧಿಯಾಗಿದ್ಧಾರೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಉತ್ಪಾದನೆಯನ್ನು ಅವರು ಆಗಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಈ ಎರಡನೇ ಬಾರಿ ಅಧ್ಯಕ್ಷರಾಗುತ್ತಿರುವ ಅವರು ಈ ಕ್ಷೇತ್ರಕ್ಕೆ ಮನ್ನಣೆ ಕೊಡದೇ ಹೋಗಬಹುದು.
ಇದನ್ನೂ ಓದಿ: ಉದ್ಯಮ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರೋದನ್ನು ವಿರೋಧಿಸುತ್ತೇನೆ: ರಾಹುಲ್ ಗಾಂಧಿ ಸ್ಪಷ್ಟನೆ
ಭಾರತದ ಮರುಬಳಕೆ ಇಂಧನ ಉತ್ಪಾದಿಸುವ ಸಂಸ್ಥೆಗಳು ಆ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತವೆ. ಟ್ರಂಪ್ ಅವರೇನಾದರೂ ಅಮೆರಿಕದಲ್ಲಿ ರಿನಿವಬಲ್ ಎನರ್ಜಿ ಪ್ರಾಜೆಕ್ಟ್ಗಳಿಗೆ ತಿಲಾಂಜಲಿ ಹೇಳಿದ್ದೇ ಆದಲ್ಲಿ ಭಾರತೀಯ ಸಂಸ್ಥೆಗಳ ರಫ್ತು ಬಿಸಿನೆಸ್ಗೆ ಹೊಡೆತ ಬೀಳುತ್ತದೆ.
ಸದ್ಯದ ಮಟ್ಟಿಗೆ ಈ ಬಿಸಿನೆಸ್ಗೆ ಘಾಸಿಯಾಗದೇ ಹೋದರೂ ಮೂರ್ನಾಲ್ಕು ವರ್ಷದಲ್ಲಿ ಒಂದಷ್ಟು ಪರಿಣಾಮ ಬೀರಬಹುದು ಎಂಬುದು ತಜ್ಞರ ಅಂದಾಜು. ಹೀಗಾಗಿ, ವಾರೀ ಎನರ್ಜೀಸ್ ಷೇರು ಮಾತ್ರವಲ್ಲದೇ, ಅದಾನಿ ಗ್ರೀನ್ ಎನರ್ಜಿ, ಕೇಯ್ನಸ್ ಟೆಕ್ನಾಲಜಿ, ಒಲೆಕ್ಟ್ರಾ ಗ್ರೀನ್ಟೆಕ್, ವೆಬ್ಸೋಲ್ ಎನರ್ಜಿ ಮೊದಲಾದ ಸಂಸ್ಥೆಗಳ ಷೇರುಗಳೂ ಕೂಡ ಹಿನ್ನಡೆ ಕಾಣುತ್ತಿವೆ.
ಸೌರಶಕ್ತಿ ಮೊದಲಾದ ಮರುಬಳಕೆ ಇಂಧನದಿಂದ ಪರಿಸರ ಹಾನಿ ತಪ್ಪುತ್ತದೆ ಎನ್ನುವ ವಾದವನ್ನು ಡೊನಾಲ್ಡ್ ಟ್ರಂಪ್ ಒಪ್ಪುವುದಿಲ್ಲ. ಹಾಗೆಯೇ, ಪೆಟ್ರೋಲಿಯಂನಂತಹ ಪಳೆಯುಳಿಕೆ ಇಂಧನಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ವಾದವನ್ನೂ ಅವರು ಒಪ್ಪುವುದಿಲ್ಲ. ಅವರ ಪ್ರಕಾರ ಸೌರಶಕ್ತಿ ಉತ್ಪಾದನೆಗೆ ಬಳಸಲಾಗುವ ಸೋಲಾರ್ ಪೆನಲ್ಗಳ ಸ್ಥಾಪನೆಗೆ ಸಾಕಷ್ಟು ಸ್ಥಳ ಬೇಕಾಗುತ್ತದೆ. ಹೀಗಾಗಿ, ಈ ಯೋಜನೆ ಸಿಂಧು ಎನಸುವುದಿಲ್ಲ.
ಇದನ್ನೂ ಓದಿ: ರಿಷಿತ್, ಈ ಬೆಂಗಳೂರು ಹುಡುಗ ಈಗ ಸ್ವೀಡನ್ ಮೂಲದ ಟ್ರೂಕಾಲರ್ ಸಿಇಒ; ಯಾರು ಈ ಜುಂಜುನವಾಲ?
ತಾನು ಅಧಿಕಾರಕ್ಕೆ ಬಂದ ಮೊದಲ ದಿನವೇ ರಿನಿವಬಲ್ ಎನರ್ಜಿ ಪ್ರಾಜೆಕ್ಟ್ಗಳನ್ನು ನಿಲ್ಲಿಸುತ್ತೇನೆ ಎಂದು ಚುನಾವಣಾ ಪ್ರಚಾರದ ವೇಳೆಯೇ ಟ್ರಂಪ್ ಘೋಷಿಸಿದ್ದರು. ಈಗ ನುಡಿದಂತೆ ನಡೆದರೆ ವಾರೀ ಎನರ್ಜೀಸ್ನಂತಹ ಸಂಸ್ಥೆಗಳ ಆದಾಯಕ್ಕೆ ತುಸು ಹೊಡೆತ ಬೀಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ