RBI Interest Rate: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 6.5ರ ಬಡ್ಡಿದರ ಮುಂದುವರಿಕೆ
RBI Governor shaktikanta Das Press Meet: ಆರ್ಬಿಐ ಎಲ್ಲರ ನಿರೀಕ್ಷೆಯಂತೆ ಸತತ ಏಳನೇ ಬಾರಿಗೆ ರೆಪೋ ದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಎಂಪಿಸಿ ಸಭೆಯಲ್ಲಿ ಭಾಗವಹಿಸಿದ್ದ ಆರು ಸದಸ್ಯರಲ್ಲಿ ಐವರು ರೆಪೋ ದರ ಯಥಾಸ್ಥಿತಿ ಪಾಲಿಸುವ ನಿರ್ಧಾರದ ಪರ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಆರ್ಬಿಐನ ಬಡ್ಡಿದರ ಶೇ. 6.5ರಲ್ಲಿ ಮುಂದುವರಿಯಲಿದೆ. ಇನ್ನು, ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.5ರಷ್ಟಿರಬಹುದು, ನೈಜ ಜಿಡಿಪಿ ವೃದ್ಧಿದರ ಶೇ. 7ರಷ್ಟಿರಬಹುದು ಎಂದೂ ಆರ್ಬಿಐ ಅಂದಾಜು ಮಾಡಿದೆ.
ನವದೆಹಲಿ, ಏಪ್ರಿಲ್ 5: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇರುವ ಶೇ. 6.5ರ ಬಡ್ಡಿದರವೇ ಮುಂದುವರಿಯಲಿದೆ. ಏಪ್ರಿಲ್ 3ರಿಂದ ನಡೆದ ಆರ್ಬಿಐನ ಹಣಕಾಸು ನೀತಿ ಸಮಿತಿ ಅಥವಾ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಸತತ ಏಳನೇ ಬಾರಿ ರೆಪೋ ದರ ಬದಲಾವಣೆ ಆಗಿಲ್ಲ. ಹಾಗೆಯೇ, ಹಣದ ಹರಿವು ಸಂಕುಚಿತಗೊಳಿಸುವ ಕ್ರಮವನ್ನೂ (Withdrawal of Accommodation) ಆರ್ಬಿಐ ಮುಂದುವರಿಸುತ್ತಿರುವುದನ್ನು ದಾಸ್ ತಿಳಿಸಿದ್ದಾರೆ.
ವಿವಿಧ ಆರ್ಥಿಕ ತಜ್ಞರು ಮತ್ತು ರೇಟಿಂಗ್ ಏಜೆನ್ಸಿಗಳು ಆರ್ಬಿಐ ಈ ಬಾರಿಯೂ ರೆಪೋ ದರದಲ್ಲಿ ಬದಲಾವಣೆ ಮಾಡದೇ ಹೋಗಬಹುದು ಎಂದು ನಿರೀಕ್ಷಿಸಿದ್ದವು. ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೂ ಸೇರಿ ಭಾಗವಹಿಸಿದ್ದ 6 ಮಂದಿ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿದರೆನ್ನಲಾಗಿದೆ. 5:1 ಮತಗಳು ಈ ನಿರ್ಧಾರದ ಪರವಾಗಿ ಬಂದಿದೆ.
ಇದನ್ನೂ ಓದಿ: ಕೆನರಾ ಬ್ಯಾಂಕ್ನಿಂದ ಆರೋಗ್ಯ ಸಾಲ, ಮಹಿಳಾ ಉಳಿತಾಯ ಖಾತೆ ಮತ್ತಿತರ ಹೊಸ ಯೋಜನೆಗಳು
ಹಣದುಬ್ಬರ ನಿಯಂತ್ರಣಕ್ಕೆ ವಿತ್ಡ್ರಾಯಲ್ ಆಫ್ ಅಕಾಮಡೇಶನ್ ತಂತ್ರ
ಹಣದುಬ್ಬರ ಹೆಚ್ಚಳ ನಿಯಂತ್ರಿಸಲು ರೆಪೋ ದರ ಹೆಚ್ಚಿಸುವುದು ವಾಡಿದೆ. ಇದರ ಜೊತೆಗೆ ಹಣದ ಹರಿವು ಸಂಕುಚಿತಗೊಳಿಸುವ ಕ್ರಮದ ತಂತ್ರವೂ ಇದೆ. ವಿತ್ಡ್ರಾಯಲ್ ಆಫ್ ಅಕಾಮಡೇಶನ್ ಎಂದರೆ ಬ್ಯಾಂಕುಗಳ ಬಳಿ ಸಾಲ ನೀಡಲು ಹೆಚ್ಚಿನ ಫಂಡಿಂಗ್ ಇಲ್ಲದಂತೆ ಮಾಡುವ ಒಂದು ವಿಧಾನ. ಇದರಿಂದ ಹಣದುಬ್ಬರ ಕಡಿಮೆ ಆಗಬಹುದು ಎನ್ನುವ ಲೆಕ್ಕಾಚಾರ ಇದೆ.
ಆರ್ಬಿಐನ ಪ್ರಮುಖ ದರಗಳು
- ರೆಪೋ ದರ: ಶೇ. 6.5
- ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ರೇಟ್: ಶೇ. 6.25
- ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ರೇಟ್: ಶೇ. 6.75
- ಬ್ಯಾಂಕ್ ದರ: ಶೇ. 6.75
- ಫಿಕ್ಸೆಡ್ ರಿವರ್ಸ್ ರೆಪೋ ದರ: ಶೇ. 3.35
2024-25ರಲ್ಲಿ ಹಣದುಬ್ಬರ ಶೇ. 4.5ರಷ್ಟಿರಬಹುದು
ಈ ಬಾರಿಯ ಹಣಕಾಸು ವರ್ಷದಲ್ಲಿ, ಅಂದರೆ 2024-25ರಲ್ಲಿ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ದರ ಆಧಾರಿತ ಹಣದುಬ್ಬರ ಶೇ. 4.5ರಷ್ಟಿರಬಹುದು ಎಂದು ಆರ್ಬಿಐ ಅಂದಾಜು ಮಾಡಿರುವುದನ್ನು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
2024-25ರಲ್ಲಿ ಹಣದುಬ್ಬರ ಅಂದಾಜು
- ಕ್ವಾರ್ಟರ್ 1: ಶೇ. 4.9
- ಕ್ವಾರ್ಟರ್ 2: ಶೇ. 3.8
- ಕ್ವಾರ್ಟರ್ 3: ಶೇ. 4.6
- ಕ್ವಾರ್ಟರ್ 4: ಶೇ. 4.5
ಇದನ್ನೂ ಓದಿ: ಐದು ದಶಕದ ಹಿಂದೆ ಸತತ ಐದು ದಿನ ಹಸಿವಿನಿಂದ ಒದ್ದಾಡಿದ ಘಟನೆ ಸ್ಮರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ
ಜಿಡಿಪಿ ದರ ಶೇ. 7ರಷ್ಟಾಗಬಹುದು
ಭಾರತದ ನೈಜ ಜಿಡಿಪಿ ವೃದ್ಧಿ ದರ 2024-25ರಲ್ಲಿ ಶೇ. 7ರಷ್ಟಿರಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ. ನಾಲ್ಕು ಕ್ವಾರ್ಟರ್ಗಳಲ್ಲಿ ಕ್ರಮವಾಇಗ ಶೇ. 7.1, ಶೇ. 6.9, ಶೇ. 7 ಮತ್ತು ಶೇ. 7ರಷ್ಟು ಪ್ರಮಾಣದಲ್ಲಿ ಆರ್ಥಿಕತೆ ಬೆಳೆಯಬಹುದು ಎಂದು ನಿರೀಕ್ಷಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Fri, 5 April 24