ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇದೀಗ ತನ್ನ ಹಣಕಾಸು ಸೇವೆಯ ವ್ಯವಹಾರಗಳನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ (Jio Financial Services) ಆಗಿ ಡೀಮರ್ಜ್ ಮಾಡುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಬಳಿ ಈಗಾಗಲೇ ರಿಲಾಯನ್ಸ್ ಸ್ಟ್ರಾಟಿಜಿಕ್ ಇನ್ವೆಸ್ಟ್ಮೆಂಟ್ ಲಿ ಎಂಬ ಸಂಸ್ಥೆ ಇದೆ. ಈ ಕಂಪನಿಯನ್ನು ಆರ್ಐಎಲ್ನಿಂದ ಬೇರ್ಪಡಿಸಲಾಗುತ್ತದೆ. ಬೇರ್ಪಟ್ಟ ರಿಲಾಯನ್ಸ್ ಸ್ಟ್ರಾಟಿಜಿಕ್ ಇನ್ವೆಸ್ಟ್ಮೆಂಟ್ ಸಂಸ್ಥೆಯನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿ (JFSL) ಎಂದು ಮರುಹೆಸರಿಸಲಾಗುತ್ತದೆ.
ಈಗ ಪ್ರತ್ಯೇಕ ಸಂಸ್ಥೆಯಾಗಲಿರುವ ಜೆಎಫ್ಎಸ್ಎಲ್ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್ಮೆಂಟ್ಸ್ ಅಂಡ್ ಹೋಲ್ಡಿಂಗ್ಸ್ ಲಿ (RIIHL) ಎಂಬ ಸಂಸ್ಥೆಯ ಹೂಡಿಕೆಗಳನ್ನು ಹೊಂದಿರಲಿದೆ. ಈ ಆರ್ಐಐಎಚ್ಎಲ್ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರೀಸ್ನಲ್ಲಿ ಶೇ. 6.27ರಷ್ಟು ಪಾಲನ್ನು ಹೊಂದಿದೆ.
ಆರ್ಐಎಲ್ನಿಂದ ಜೆಎಫ್ಎಸ್ಎಲ್ ಪ್ರತ್ಯೇಕಗೊಳ್ಳುವ ವಿಚಾರ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ. ರಿಲಾಯನ್ಸ್ ನೀಡಿದ ಮಾಹಿತಿ ಪ್ರಕಾರ ಆರ್ಐಎಲ್ನ ಪ್ರತೀ ಷೇರಿಗೆ ಜೆಎಫ್ಎಸ್ಎಲ್ನ ಒಂದು ಷೇರು ಸಿಗುತ್ತದೆ.
ಇದನ್ನೂ ಓದಿ: Alia Bhatt, Reliance: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅವರ ಕಂಪನಿ ಸೇಲ್; ಅಂಬಾನಿ ಪಾಲಾಗಲಿದೆಯಾ ಎಡ್ಡೇ ಮಮ್ಮಾ?
ಅಂದರೆ, ನೀವು 1,000 ಆರ್ಐಎಲ್ ಷೇರುಗಳನ್ನು ಹೊಂದಿದ್ದರೆ ನಿಮಗೆ ಹೆಚ್ಚುವರಿಯಾಗಿ 1,000 ಜೆಫ್ಎಸ್ಎಲ್ ಷೇರುಗಳು ಸಿಗುತ್ತವೆ. ಜೆಎಫ್ಎಸ್ಎಲ್ ಷೇರುಗಳು ಉಚಿತವಾಗಿಯೇ ಸಿಗುತ್ತವೆ. ಆದರೆ, ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಜೆಎಫ್ಎಸ್ಎಲ್ ಷೇರಿನ ಮೌಲ್ಯ ಎಷ್ಟಿದೆಯೋ ಅಷ್ಟು ಆರ್ಐಎಲ್ ಷೇರುಮೌಲ್ಯ ಕಡಿಮೆ ಆಗುತ್ತದೆ.
ಉದಾಹರಣೆಗೆ, ಈಗ ರಿಲಾಯನ್ಸ್ ಇಂಡಸ್ಟ್ರೀಸ್ನ ಷೇರುಬೆಲೆ 2,795 ರೂ ಇದೆ. ಜಿಯೋ ಫೈನಾನ್ಷಿಯಲ್ ಸರ್ವಿಸ್ ಸಂಸ್ಥೆಯ ಷೇರುಬೆಲೆ 100 ಇದೆ ಎಂದಿಟ್ಟುಕೊಳ್ಳಿ. ಆರ್ಐಎಲ್ನ ಷೇರುದಾರರಿಗೆ ಜೆಎಫ್ಎಸ್ಎಲ್ ಷೇರುಗಳು ಉಚಿತವಾಗಿ ಸಿಗುತ್ತವೆ. ಆದರೆ, ಆರ್ಐಎಲ್ ಷೇರುಬೆಲೆ 100 ರೂ ಕಡಿಮೆ ಆಗುತ್ತದೆ. ಅಂದರೆ 2,695 ರೂ ಆಗುತ್ತದೆ. ಆದರೆ, ಆರ್ಐಎಲ್ ಷೇರುದಾರರ ಒಟ್ಟು ಷೇರುಸಂಪತ್ತು ಅಷ್ಟೇ ಇರುತ್ತದೆ.
ಇದು ಮೇಲ್ನೋಟಕ್ಕೆ ಏನೂ ಲಾಭವಾದಂತೆ ಅನಿಸದೇ ಇರಬಹುದು. ಆದರೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರು ಬಹಳ ಕಡಿಮೆಗೆ ಸಿಕ್ಕಂತಾಗುತ್ತದೆ. ಮುಂದೆ ಅದು ಗಣನೀಯವಾಗಿ ಬೆಳೆಯುವ ಸಾಧ್ಯತೆ ಇದೆ. ಹಾಗೆಯೇ ರಿಲಾಯನ್ಸ್ ಇಂಡಸ್ಟ್ರೀಸ್ನ ಷೇರು ಬೆಲೆ ಕೂಡ ಮೇಲ್ಮಟ್ಟಕ್ಕೆ ಹೋಗುವ ಸಾಧ್ಯತೆ ಇದೆ. ಈ ಬೆಳವಣಿಗೆಯು ಆರ್ಐಎಲ್ನ ಷೇರುದಾರರಿಗೆ ಡಬಲ್ ಧಮಾಕವಾಗಿ ಪರಿಣಮಿಸಬಹುದು.
ಹಿಂದೆ ರಿಲಾಯನ್ಸ್ ಗ್ರೂಪ್ ನಾಲ್ಕು ಕಂಪನಿಗಳನ್ನು ಡೀಮರ್ಜ್ ಮಾಡಿತ್ತು. ಆಗೆಲ್ಲಾ ಸಂದರ್ಭಗಳಲ್ಲೂ ರಿಲಾಯನ್ಸ್ ಷೇರುದಾರರಿಗೆ ಒಳ್ಳೆಯ ಲಾಭವಾಗಿದ್ದಿದೆ. ಹೀಗಾಗಿ, ಈ ಬಾರಿಯೂ ರಿಲಾಯನ್ಸ್ ಷೇರುದಾರರಿಗೆ ಮ್ಯಾಜಿಕ್ ನಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ