Hero Moto Corp: ಆದಾಯ ತೆರಿಗೆ ದಾಳಿಯಲ್ಲಿ ಹೀರೋ ಮೋಟೋಕಾರ್ಪ್‌ಗೆ ಸೇರಿದ 1,000 ಕೋಟಿ ರೂ. ಬೋಗಸ್ ವೆಚ್ಚ ಪತ್ತೆ
ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ 1000 ಕೋಟಿ ರೂಪಾಯಿ ಬೋಗಸ್ ವೆಚ್ಚ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆ ಬಗೆಗಿನ ವಿವರ ಇಲ್ಲಿದೆ.
ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero Moto Corp) ಷೇರುಗಳು ಮಾರ್ಚ್ 29ರ ಮಂಗಳವಾರದಂದು ಶೇಕಡಾ 7ರಷ್ಟು ಕುಸಿದವು. ಆದಾಯ ತೆರಿಗೆ ಇಲಾಖೆಯು ಕಂಪೆನಿಯು ಮಾಡಿದ 1,000 ಕೋಟಿ ರೂಪಾಯಿಗಳ ಬೋಗಸ್ ವೆಚ್ಚಗಳನ್ನು ಪತ್ತೆ ಮಾಡಿದೆ ಎಂಬ ವರದಿಗೆ ಮಾರುಕಟ್ಟೆಯು ಪ್ರತಿಕೂಲವಾಗಿ ಪ್ರತಿಕ್ರಿಯಿಸಿತು. ಮೂಲಗಳು ಸಿಎನ್ಬಿಸಿ ಟಿವಿ18ಗೆ ತಿಳಿಸಿರುವಂತೆ, ಹೀರೋ ಮೋಟೋಕಾರ್ಪ್‌ಗೆ ಸಂಬಂಧಿಸಿದ ಆವರಣದಲ್ಲಿ ಮಾರ್ಚ್ 23ರಿಂದ ಮಾರ್ಚ್ 26ರ ವರೆಗೆ ನಡೆಸಿದ ಐ-ಟಿ ದಾಳಿಯಲ್ಲಿ ಸುಳ್ಳು ವೆಚ್ಚಗಳಿಗೆ ಸಂಬಂಧಿಸಿದ ಕ್ಲೇಮ್‌ಗಳು ಪತ್ತೆ ಆಗಿವೆ ಎಂದು ತಿಳಿಸಲಾಗಿದೆ. ಅಧಿಕೃತ ಹೇಳಿಕೆಗಾಗಿ ಕಾಯುತ್ತಿರುವಾಗ, “ಆರೋಪಿಸುವ ಪುರಾವೆಗಳು” ಹಾರ್ಡ್ ಕಾಪಿಗಳು ಮತ್ತು ಡಿಜಿಟಲ್ ಡೇಟಾದ ರೂಪದಲ್ಲಿ ಕಂಡುಬಂದವು ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳಿಂದ ತಿಳಿದಿದೆ.
ವರದಿಗಳಿಗೆ ಹೀರೋ ಮೋಟೋಕಾರ್ಪ್ ಕಂಪೆನಿಯು ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ವರದಿಗಳು ಹೊರಬಂದ ಸ್ವಲ್ಪ ಸಮಯದ ನಂತರ ಮಾರುಕಟ್ಟೆಯು ಹೀರೋ ಮೋಟೋಕಾರ್ಪ್‌ನ ಸ್ಟಾಕ್‌ನಲ್ಲಿ ಗಮನಾರ್ಹ ಕುಸಿತವನ್ನು ಕಂಡಿತು. ಮಧ್ಯಾಹ್ನ 3.15ರ ಹೊತ್ತಿಗೆ ಷೇರು ಬಿಎಸ್‌ಇಯಲ್ಲಿ 2,206 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿತ್ತು. ಇದು ಹಿಂದಿನ ದಿನದ ಮುಕ್ತಾಯಕ್ಕೆ ಹೋಲಿಸಿದರೆ ಶೇ 7.18ರಷ್ಟು ಕಡಿಮೆ ಆಗಿತ್ತು. ಅಂತಿಮವಾಗಿ ಈ ಷೇರು ಶೇ 7.08ರಷ್ಟು ಇಳಿಕೆಯಾಗಿ ರೂ. 2,208.35ಕ್ಕೆ ಸ್ಥಿರವಾಯಿತು.
ಗಮನಾರ್ಹವಾಗಿ, ಕಳೆದ ವಾರ ದೆಹಲಿ ಮತ್ತು ಗುರುಗ್ರಾಮ್‌ನಲ್ಲಿರುವ ಎರಡು ಹೀರೋ ಮೋಟೋಕಾರ್ಪ್ ಕಚೇರಿಗಳಲ್ಲಿ ಮತ್ತು ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಪವನ್ ಮುಂಜಲ್ ಅವರ ನಿವಾಸದಲ್ಲಿ ಐಟಿ ದಾಳಿಗಳನ್ನು ನಡೆಸಲಾಯಿತು. ಶೋಧ ಕಾರ್ಯಾಚರಣೆಗಳ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹೀರೋ ಮೋಟೋಕಾರ್ಪ್ ಇದು ಐಟಿ ಇಲಾಖೆ ನಡೆಸಿದ “ವಾಡಿಕೆಯ ವಿಚಾರಣೆ” ಎಂದು ಹೇಳಿದೆ. “ಇದು ವಾಡಿಕೆಯ ವಿಚಾರಣೆ ಎಂದು ನಮಗೆ ತಿಳಿಸಲಾಗಿದೆ. ಇದು ಆರ್ಥಿಕ ವರ್ಷದ ಅಂತ್ಯದ ಮೊದಲು ಅಪರೂಪ ಅಲ್ಲ,” ಎಂದು ಕಂಪೆನಿಯು ಹೇಳಿದೆ. “ನಮ್ಮ ಎಲ್ಲ ಪಾಲುದಾರರಿಗೆ ಎಂದಿನಂತೆ ವ್ಯವಹಾರವನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡುತ್ತೇವೆ,” ಎಂಬುದಾಗಿ ತಿಳಿಸಿದೆ.
ಎಎನ್‌ಐ ಪ್ರಕಾರ, ದೆಹಲಿಯ ಹೊರವಲಯದಲ್ಲಿರುವ ಛತ್ತರ್‌ಪುರದಲ್ಲಿ ಮುಂಜಲ್‌ನಿಂದ ಫಾರ್ಮ್‌ಹೌಸ್ ಖರೀದಿಯಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ನಗದು ವಹಿವಾಟು ನಡೆದಿರುವುದನ್ನು ಐಟಿ ಇಲಾಖೆ ಪತ್ತೆ ಮಾಡಿದೆ. ತೆರಿಗೆ ಉಳಿಸಲು ಫಾರ್ಮ್‌ಹೌಸ್‌ನ ಮಾರುಕಟ್ಟೆ ಬೆಲೆಯನ್ನು ಬದಲಾಯಿಸಲಾಗಿದೆ ಮತ್ತು ಈ ಉದ್ದೇಶಕ್ಕಾಗಿ 100 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ ಹೇಳಿಕೊಂಡಿದೆ. ವರದಿಯಲ್ಲಿ ಮಾಡಲಾದ ಕ್ಲೇಮ್ಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಮನಿ ಕಂಟ್ರೋಲ್ ತಿಳಿಸಿದೆ.
ಇದನ್ನೂ ಓದಿ: ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಪರಿಚಯಿಸಿದ ಹೀರೋ: ಬೆಲೆ ಎಷ್ಟು ಗೊತ್ತಾ?