ನವದೆಹಲಿ, ಮಾರ್ಚ್ 29: ಸಾರ್ವಜನಿಕವಾಗಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು (Rs 2,000 notes) ಏಪ್ರಿಲ್ 1ರಂದು ವಿನಿಮಯಕ್ಕೆ ಅವಕಾಶ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿನ್ನೆ ಗುರುವಾರ ಹೇಳಿದೆ. ಆರ್ಬಿಐನ 19 ಕಚೇರಿಗಳಲ್ಲಿ (RBI Issue offices) ಈ ನೋಟುಗಳನ್ನು ವಿನಿಮಯ ಮಾಡುವ ಅವಕಾಶ ಇದೆ. ಏಪ್ರಿಲ್ 1ರಂದು ಬ್ಯಾಂಕ್ ರಜಾ ದಿನ ಅಲ್ಲವಾದರೂ ಅಂದು ವಾರ್ಷಿಕ ಲೆಕ್ಕಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಹೀಗಾಗಿ, ಅಂದು ಆರ್ಬಿಐ ಮಾತ್ರವಲ್ಲ ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಲಭ್ಯ ಇರುವುದಿಲ್ಲ. ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮರಳಿಸುವ ಸೇವೆಯೂ ಅಂದು ಇರುವುದಿಲ್ಲ. ಏಪ್ರಿಲ್ 2ರಂದು, ಹಾಗು ನಂತರ ವರ್ಕಿಂಗ್ ದಿನಗಳಂದು ಆರ್ಬಿಐ ಕಚೇರಿಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಬಹುದು.
ಹತ್ತು ತಿಂಗಳ ಹಿಂದೆ, 2023ರ ಮೇ 19ರಂದು ಆರ್ಬಿಐ 2,000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದಾಗಿ ಘೋಷಿಸಿತು. ಆಗ 3.56 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಸಾರ್ವಜನಿಕರಲ್ಲಿ ಇತ್ತು ಎನ್ನಲಾಗಿದೆ. ವಿವಿಧ ಬ್ಯಾಂಕುಗಳ ಮೂಲಕ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮ ಅಕೌಂಟ್ಗೆ ಡೆಪಾಸಿಟ್ ಮಾಡಲು ಆರ್ಬಿಐ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಇದೀಗ ಕೆಲ ತಿಂಗಳಿಂದ ಆರ್ಬಿಐನ 19 ಇಷ್ಯೂ ಆಫೀಸ್ಗಳಲ್ಲಿ ಮಾತ್ರ ಈ ನೋಟುಗಳ ಎಕ್ಸ್ಚೇಂಜ್ಗೆ ಅವಕಾಶ ಮುಂದುವರಿದಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್ಬಿಐ ಕಚೇರಿಯಲ್ಲೂ ನೋಟು ವಿನಿಮಯ ಮಾಡಿಕೊಳ್ಳಬಹುದು. ಅಂಚೆ ಮೂಲಕ ಆರ್ಬಿಐ ಕಚೇರಿ ವಿಳಾಸಕ್ಕೆ ನೋಟು ಕಳುಹಿಸಿ ಆ ಮೂಲಕವೂ ಆ ಹಣವನ್ನು ತಮ್ಮ ಖಾತೆಗಳಿಗೆ ಡೆಪಾಸಿಟ್ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ
ಆರ್ಬಿಐ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ 2024ರ ಮಾರ್ಚ್ 1ರವರೆಗೆ ಶೇ. 97.62ರಷ್ಟು 2,000 ರೂ ನೋಟುಗಳು ಮರಳಿವೆಯಂತೆ. ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂದು 10 ತಿಂಗಳ ಹಿಂದೆ ಘೋಷಿಸಿದಾಗ 3.56 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇದ್ದವು. ಇದೀಗ ಚಲಾವಣೆಯಲ್ಲಿ ಉಳಿದಿರುವುದು, ಅಂದರೆ ನೋಟುಗಳು ಆರ್ಬಿಐಗೆ ಇನ್ನೂ ಮರಳದೇ ಇರುವುದು 8,470 ಕೋಟಿ ರೂ ಮೊತ್ತದ್ದು ಎನ್ನಲಾಗಿದೆ.
2016ರಲ್ಲಿ ಆರ್ಬಿಐ ಅಂದಿನ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ನಗದು ಹಣಕ್ಕೆ ಕೊರತೆ ಬೀಳಬಾರದೆಂಬ ಉದ್ದೇಶಕ್ಕೆ ಸರ್ಕಾರ ತಾತ್ಕಾಲಿಕವಾಗಿ 2,000 ರೂ ಮುಖಬೆಲೆಯ ನೋಟುಗಳನ್ನು ಮೊದಲ ಬಾರಿಗೆ ಪರಿಚಯಿಸಿತು. ಬಳಿಕ 500 ರೂ ಮುಖಬೆಲೆಯ ಹೊಸ ನೋಟುಗಳನ್ನೂ ಮುದ್ರಿಸಿ ಬಿಡುಗಡೆ ಮಾಡಲಾಯಿತು. ಈಗ 2,000 ರೂ ನೋಟುಗಳ ಕಾಲಾವಧಿ ಮುಗಿದ ಕಾರಣಕ್ಕೆ ಅದನ್ನು ಹಿಂಪಡೆಯಲಾಗಿದೆ ಎಂದು ಆರ್ಬಿಐ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ