2,000 ರೂ ನೋಟು ಚಲಾವಣೆ ರದ್ದಾದ ಬಳಿಕ ಮರಳದೇ ಉಳಿದಿರುವ ನೋಟುಗಳೆಷ್ಟು?
Rs 2,000 bank notes update: ಎರಡು ಸಾವಿರ ರೂ ಮುಖಬೆಲೆಯ ನೋಟುಗಳು ಶೇ. 98.04ರಷ್ಟು ಮರಳಿವೆ ಎಂದು ಹೇಳಲಾಗಿದೆ. ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 3.56 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳ ಪೈಕಿ ಬರಬೇಕಿರುವ ನೋಟುಗಳ ಮೌಲ್ಯ 6,977.6 ಕೋಟಿ ರೂ. 2023ರ ಮೇ 17ರಂದು ಆರ್ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು.
ನವದೆಹಲಿ, ನವೆಂಬರ್ 5: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು 17 ತಿಂಗಳ ಮೇಲಾಯಿತು. ಇನ್ನೂ ಕೂಡ ಮೂರೂವರೆ ಕೋಟಿ ಸಂಖ್ಯೆಯಷ್ಟು ನೋಟುಗಳು ಮರಳಿಲ್ಲ. ಇವುಗಳ ಒಟ್ಟು ಮೌಲ್ಯ 6,977.6 ಕೋಟಿ ರೂ ಇದೆ. ಆದರೆ, 2023ರ ಮೇ 19ರಂದು ಆರ್ಬಿಐ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಾಗ 3.56 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಚಲಾವಣೆಯಲ್ಲಿ ಇದ್ದವು. ಈ ಪೈಕಿ 3.51 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಆರ್ಬಿಐಗೆ ಮರಳಿವೆ. ಮರಳದೇ ಇರುವ ನೋಟುಗಳ ಪ್ರಮಾಣ ಶೇ 1.96 ಮಾತ್ರ ಎಂದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ.
ಎರಡು ಸಾವಿರ ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಬಹಳ ಅಲ್ಪಾವಧಿಯಲ್ಲಿ ಹೆಚ್ಚಿನ ನೋಟುಗಳು ಮರಳಿವೆ. ಎಷ್ಟು ನೋಟುಗಳು ಮರಳಿವೆ, ಎಷ್ಟು ಬಾಕಿ ಉಳಿದಿವೆ ಎನ್ನುವ ನಿಖರ ಮಾಹಿತಿಯನ್ನು ಆರ್ಬಿಐ ಕಾಲ ಕಾಲಕ್ಕೆ ಅಪ್ಡೇಟ್ ಮಾಡುತ್ತಿರುತ್ತದೆ. ಅಕ್ಟೋಬರ್ 1ರಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಇನ್ನೂ ಬಾರದೇ ಇರುವ ನೋಟುಗಳ ಮೌಲ್ಯ 7,117 ಕೋಟಿ ರೂ ಇತ್ತು. ಇವತ್ತಿನ ಅಪ್ಡೇಟ್ ಪ್ರಕಾರ ಬರಬೇಕಿರುವ ನೋಟುಗಳ ಮೌಲ್ಯ 6,977.6 ಕೋಟಿ ರೂ ಇದೆ. ಸುಮಾರು ಒಂದು ತಿಂಗಳಲ್ಲಿ ಸುಮಾರು 140 ಕೋಟಿ ರೂ ಮೌಲ್ಯದ ಎರಡು ಸಾವಿರ ರೂ ನೋಟುಗಳು ಆರ್ಬಿಐಗೆ ಮರಳಿವೆ.
ಇದನ್ನೂ ಓದಿ: ಕರ್ನಾಟಕದ ಮೂರು ಸೇರಿ ದೇಶದ ವಿವಿಧೆಡೆ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು
ಏಳು ವರ್ಷದ ಇತಿಹಾಸ ಹೊಂದಿದ್ದ ಎರಡು ಸಾವಿರ ರೂ ನೋಟು…
2016ರಲ್ಲಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಕ್ರಮ ತೆಗೆದುಕೊಂಡು ಆಗ ಚಲಾವಣೆಯಲ್ಲಿದ್ದ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಸಿಂಧುಗೊಳಿಸಿತು. ಅದಕ್ಕೆ ಬದಲಾಗಿ ಹೊಸ 500 ರೂ ನೋಟುಗಳನ್ನು ಮುದ್ರಿಸಿತು. 2,000 ರೂ ಮುಖಬೆಲೆಯ ನೋಟುಗಳ ಮುದ್ರಣವನ್ನೂ ಆರಂಭಿಸಿತು.
ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ಜೀವಿತಾವಧಿ ನಾಲ್ಕರಿಂದ ಐದು ವರ್ಷಗಳೆನ್ನಲಾಗಿದೆ. 2017ರ ಮಾರ್ಚ್ ನಂತರ ಈ ನೋಟುಗಳ ಮುದ್ರಣ ಬಹಳ ಅಪರೂಪವಾಗಿದೆ. ಶೇ 89ರಷ್ಟು ಆ ನೋಟುಗಳು ಅದಕ್ಕೆ ಮುಂಚೆಯೇ ಮುದ್ರಣಗೊಂಡವಾಗಿದ್ದವು.
ಇದನ್ನೂ ಓದಿ: ಭಾರತ್ ಬ್ರ್ಯಾಂಡ್ ಎರಡನೇ ಹಂತದ ಸೇಲ್ಸ್ ಆರಂಭ; ಸಬ್ಸಿಡಿ ದರದಲ್ಲಿ ಗೋಧಿಹಿಟ್ಟು ಮತ್ತು ಅಕ್ಕಿ ಮಾರಾಟ
ಈಗ ಹಣಕಾಸು ಮಾರುಕಟ್ಟೆಯಲ್ಲಿ ಕಡಿಮೆ ಮುಖಬೆಲೆಯ ಅವಶ್ಯಕ ಸಂಖ್ಯೆಯಲ್ಲಿ ನೋಟುಗಳ ಲಭ್ಯ ಇರುವುದರಿಂದ 2,000 ರೂ ನೋಟಿನ ಅಗತ್ಯತೆ ಇಲ್ಲವಾಗಿದೆ. ಹೀಗಾಗಿ, ಆರ್ಬಿಐ 2,000 ರೂ ಮುಖಬೆಲೆ ನೋಟನ್ನು ಚಲಾವಣೆಯಿಂದ ಹಿಂಪಡೆದಿದೆ.
ಈಗಲೂ ನೋಟು ಬದಲಾಯಿಸಿಕೊಳ್ಳಲು ಅವಕಾಶ
ಈಗ ಯಾರಾದರೂ ಈ ನೋಟನ್ನು ಹೊಂದಿದ್ದರೆ ಅದನ್ನು ಚಲಾಯಿಸಲು ಆಗುವುದಿಲ್ಲ. ಅದನ್ನು ಆರ್ಬಿಐಗೆ ಮರಳಿಸಿ, ಅದಕ್ಕೆ ಸಮನಾದ ಮೌಲ್ಯದ ಬೇರೆ ನೋಟುಗಳನ್ನು ಪಡೆಯುವ ಅವಕಾಶ ಇದೆ. ಆರ್ಬಿಐನ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ತಮ್ಮ ಖಾತೆಗೆ ಆ ಮೌಲ್ಯದ ಹಣವನ್ನು ಡೆಪಾಸಿಟ್ ಮಾಡಿಸಿಕೊಳ್ಳಬಹುದು. ಪೋಸ್ಟ್ ಮುಖಾಂತರವೂ ಈ ಕೆಲಸ ಮಾಡಲು ಸಾಧ್ಯವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ