ನವದೆಹಲಿ, ಆಗಸ್ಟ್ 22: ಭಾರತದಲ್ಲಿ ಸ್ಥೂಲ ಆರ್ಥಿಕತೆಯ ನಿರ್ವಹಣೆ ಉತ್ತಮವಾಗಿದೆಯಾದರೂ ಸೂಕ್ಷ್ಮ ಆರ್ಥಿಕತೆಯನ್ನು ನಿರ್ವಹಣೆ ಮಾಡುತ್ತಿರುವ ರೀತಿ ಆತಂಕ ತರುವಂತಿದೆ. ಇಲ್ಲಿ ಬಿಸಿನೆಸ್ ಮಾಡುವುದು ಬಹಳ ಕಷ್ಟವಾಗಿದೆ. ತನಿಖಾ ಸಂಸ್ಥೆಗಳ ಹಿಂಸೆಗೆ ಹೆದರಿ ಉದ್ಯಮಿಗಳು ಭಾರತದಿಂದ ಕಾಲ್ಕಿತ್ತು ದುಬೈ, ಸಿಂಗಾಪುರ ಮುಂತಾದ ದೇಶಗಳಿಗೆ ಓಡಿ ಹೋಗುವಂತಿದೆ ಎಂದು ಹೂಡಿಕೆದಾರ ಮತ್ತು ಬರಹಗಾರ ರುಚಿರ್ ಶರ್ಮಾ ಹೇಳಿದ್ದಾರೆ. ನೆಟ್ವರ್ಕ್ 18ನ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರಾಕ್ಫೆಲ್ಲರ್ ಇಂಟರ್ನ್ಯಾಷನಲ್ನ ಛೇರ್ಮನ್ ಆಗಿರುವ ರುಚಿರ್ ಶರ್ಮಾ, ಭಾರತದಲ್ಲಿನ ಈ ಆತಂಕಕಾರಿ ಪರಿಸ್ಥಿತಿಗೆ ತನಿಖಾ ಸಂಸ್ಥೆಗಳು ಕಾರಣ ಎಂದು ಹೊಣೆ ಮಾಡಿದ್ದಾರೆ.
ಪ್ರಸಕ್ತ ಸರ್ಕಾರದ ವಿರುದ್ದ ಕೇಳಿಬರುತ್ತಿರುವ ಪ್ರಮುಖ ಟೀಕೆ ಎಂದರೆ ತನಿಖಾ ಸಂಸ್ಥೆಗಳು ಕೈಮೀರಿ ಹೋಗಿವೆ. ಸಾಮಾನ್ಯ ಉದ್ಯಮಿಗಳಿಗೆ ಒಂದು ರೀತಿಯಲ್ಲಿ ಭಯ ಆವರಿಸಿದೆ ಎಂದು ರುಚಿರ್ ಶರ್ಮಾ ಆರೋಪಿಸಿದ್ದಾರೆ.
ಭಾರತದಲ್ಲಿ ಬಿಸಿನೆಸ್ ನಡೆಸುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸಿದ ಅವರು, ಈಗಿರುವ ವ್ಯವಸ್ಥೆಯಲ್ಲಿ ಕಾನೂನು ಉಲ್ಲಂಘನೆ ಮಾಡದೇ ಉದ್ದಿಮೆಗಳು ಕೆಲಸ ಮಾಡುವುದು ಕಷ್ಟ ಎಂದಿದ್ದಾರೆ.
ಇದನ್ನೂ ಓದಿ: ಪೇಟಿಎಂನ ಎಂಟರ್ಟೈನ್ಮೆಂಟ್ ಟಿಕೆಟ್ ಬಿಸಿನೆಸ್ ಜೊಮಾಟೊಗೆ ಮಾರಲು ನಿರ್ಧಾರ; 2,048 ಕೋಟಿ ರೂಗೆ ಡೀಲ್
ಭಾರತದಲ್ಲಿ ಏನಾದರೂ ಕೆಲಸ ಸಾಧಿಸಬೇಕಾದರೆ ಯಾವುದಾದರೂ ಕಾನೂನು ಉಲ್ಲಂಘಿಸಬೇಕಾಗುತ್ತದೆ. ಆ ರೀತಿಯಲ್ಲಿ ಇಲ್ಲಿ ನಿಯಮ ಮತ್ತು ಕಾನೂನುಗಳನ್ನು ರೂಪಿಸಲಾಗಿರುತ್ತದೆ. ಸರ್ಕಾರದ ಬಳಿ ದೊಡ್ಡ ನಿಯಮಾವಳಿಗಳ ಪಟ್ಟಿಯೇ ಇರುತ್ತದೆ. ಅದನ್ನು ಬೇಕಾದಂತೆ ಬಳಸಿ ನಿಮ್ಮಲ್ಲಿ ಭಯ ಮೂಡಿಸುತ್ತದೆ ಎಂದು ಹಲವು ಪುಸ್ತಕಗಳನ್ನು ಬರೆದಿರುವ ರುಚಿರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಷೇರು ಮಾರುಕಟ್ಟೆ ಒಳ್ಳೆಯ ಓಟದಲ್ಲಿ ಇರುವುದನ್ನು ಪ್ರಸ್ತಾಪಿಸಿದ ರುಚಿರ್ ಶರ್ಮಾ, ಈ ದೇಶದಲ್ಲಿ ಈ ಸ್ಟಾಕ್ ಮಾರ್ಕೆಟ್ನ ಫಲ ಪಡೆಯುವುದು ಎರಡರಿಂದ ಮೂರು ಕೋಟಿ ಜನ ಮಾತ್ರ. 50ರಿಂದ 60 ಕೋಟಿ ಜನರಿಗೆ ಇದು ಏನೂ ಅಲ್ಲ ಎಂದಿದ್ದಾರೆ.
ಇನ್ನು, ಭಾರತದ ಆರ್ಥಿಕ ಪ್ರಗತಿಯ ಈಗಿನ ವೇಗ ಸಾಕಾಗಲ್ಲ ಎಂದೂ ಹೇಳುತ್ತಾರೆ ಅವರು. ‘ಈ ರೀತಿಯ ಶೇ. 6ರ ಆಸುಪಾಸಿ ದರವನ್ನು ಮೀರಿಸುವ ಅವಶ್ಯಕತೆ ಈಗ ಇದೆ. ಖಾಸಗಿ ಹೂಡಿಕೆ ಹೆಚ್ಚಾಗಬೇಕು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ