ವಿಮೆ ಕ್ಲೇಮ್​ಗೆ ಕೆವೈಸಿ, ಸಿಲಿಂಡರ್​ ಡೆಲಿವರಿಗೆ ಒಟಿಪಿ ಸೇರಿ ಇಂದಿನಿಂದ ಹಲವು ನಿಯಮಗಳು ಬದಲು

| Updated By: Ganapathi Sharma

Updated on: Nov 01, 2022 | 12:20 PM

ಎಲ್ಲ ರೀತಿಯ ವಿಮೆ ಕ್ಲೇಮ್​ ಮಾಡಿಕೊಳ್ಳಬೇಕಾದರೆ ಕೆವೈಸಿ ಕಡ್ಡಾಯ, ಎಲ್​ಪಿಜಿ ಸಿಲಿಂಡರ್ ವಿತರಣೆಗೆ ಒಟಿಪಿ ಕಡ್ಡಾಯ ಸೇರಿದಂತೆ ಕೆಲವು ನಿಯಮಗಳಲ್ಲಿ ಇಂದಿನಿಂದ (ನವೆಂಬರ್ 1) ಬದಲಾವಣೆಯಾಗಿವೆ.

ವಿಮೆ ಕ್ಲೇಮ್​ಗೆ ಕೆವೈಸಿ, ಸಿಲಿಂಡರ್​ ಡೆಲಿವರಿಗೆ ಒಟಿಪಿ ಸೇರಿ ಇಂದಿನಿಂದ ಹಲವು ನಿಯಮಗಳು ಬದಲು
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಎಲ್ಲ ರೀತಿಯ ವಿಮೆ (Insurance) ಕ್ಲೇಮ್​ ಮಾಡಿಕೊಳ್ಳಬೇಕಾದರೆ ಕೆವೈಸಿ (KYC) ಕಡ್ಡಾಯ, ಎಲ್​ಪಿಜಿ ಸಿಲಿಂಡರ್ (LPG gas) ವಿತರಣೆಗೆ ಒಟಿಪಿ ಕಡ್ಡಾಯ ಸೇರಿದಂತೆ ಕೆಲವು ನಿಯಮಗಳಲ್ಲಿ ಇಂದಿನಿಂದ (ನವೆಂಬರ್ 1) ಬದಲಾವಣೆಯಾಗಿವೆ. ಕೆಲವು ಬದಲಾವಣೆಗಳ ಬಗ್ಗೆ ತಿಳಿದಿರಲೇಬೇಕಾದ ಅನಿವಾರ್ಯತೆ ಇದ್ದರೆ ಇನ್ನು ಕೆಲವು ಜನಸಾಮಾನ್ಯರ ಹಣಕಾಸು ಚಟುವಟಿಕೆಗಳ ಮೇಲೂ ಪ್ರಭಾವ ಬೀರಲಿವೆ. ಇಂದಿನಿಂದ ಬದಲಾದ ನಿಯಮಗಳು ಯಾವುವೆಲ್ಲ ಎಂಬುದನ್ನು ಇಲ್ಲಿ ನೀಡಲಾಗಿದೆ.

ಎಲ್ಲ ರೀತಿಯ ವಿಮೆ ಕ್ಲೇಮ್​ಗೂ ಕೆವೈಸಿ ಕಡ್ಡಾಯ

ಈವರೆಗೆ ಜೀವ ವಿಮೆ ಕ್ಲೇಮ್​ಗೆ ಮಾತ್ರ ಕೆವೈಸಿ ಕಡ್ಡಾಯಗೊಳಿಸಲಾಗಿತ್ತು. ಇತರ ವಿಮೆಗಳಾದ ಆರೋಗ್ಯ, ವಾಹನ ವಿಮೆಯಂಥವುಗಳಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತ ಕ್ಲೇಮ್ ಮಾಡಿಕೊಳ್ಳಬೇಕಾದರೆ ಮಾತ್ರ ಕೆವೈಸಿ ಕಡ್ಡಾಯವಾಗಿತ್ತು. ಆದರೆ, ಇದೀಗ ಎಲ್ಲ ರೀತಿಯ ವಿಮೆ ಮಾಡಿಸಿಕೊಳ್ಳುವುದಕ್ಕೂ ಐಆರ್​ಡಿಎಐ (ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಕೆವೈಸಿ ಕಡ್ಡಾಯಗೊಳಿಸಿದೆ.

ಎಲ್​ಪಿಜಿ ದರ ಹೆಚ್ಚಳ

ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ್ ಕಂಪನಿಗಳು ಎಲ್​ಪಿಜಿ ದರ ಪರಿಷ್ಕರಿಸುತ್ತವೆ. 19 ಕೆಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 115.50 ರೂಪಾಯಿ ಕಡಿತಗೊಳಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಕ್ಟೋಬರ್ 1ರಂದು ಸಹ 19 ಕೆಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 25.5 ರೂ. ಕಡಿತ ಮಾಡಲಾಗಿತ್ತು. ಇದೀಗ ಮತ್ತೆ ದರ ಇಳಿಕೆ ಮಾಡುವುದರೊಂದಿಗೆ, ಸತತ ಆರನೇ ತಿಂಗಳು ವಾಣಿಜ್ಯ ಬಳಕೆಯ ಎಲ್​ಪಿಜಿ ಬೆಲೆ ಇಳಿಕೆಯಾದಂತಾಗಿದೆ.

ಎಲ್​ಪಿಜಿ ಸಿಲಿಂಡರ್ ವಿತರಣೆಗೆ ಒಟಿಪಿ

ಎಲ್​ಪಿಜಿ ಸಿಲಿಂಡರ್ ಕಾಯ್ದಿರಿಸಿದ ಬಳಿಕ ನಿಮ್ಮ ಮೊಬೈಲ್​​ಗೆ ಒಟಿಪಿ ಸಂದೇಶ ಬರಲಿದೆ. ಇದನ್ನು ವಿತರಣೆಗಾರರಿಗೆ ತಿಳಿಸಿದ ನಂತರವಷ್ಟೇ ನೀವು ಸಿಲಿಂಡರ್ ಪಡೆಯಬಹುದಾಗಿದೆ.

ಜಿಎಸ್​ಟಿ ರಿಟರ್ನ್​ ಸಲ್ಲಿಸಲು ಎಚ್​ಎಸ್​ಎನ್ ಕೋಡ್

ಜಿಎಸ್​ಟಿ ರಿಟರ್ನ್ ಸಲ್ಲಿಕೆ ನಿಯಮದಲ್ಲಿ ತುಸು ಬದಲಾವಣೆ ಮಾಡಲಾಗಿದೆ. 5 ಕೋಟಿ ರೂ.ಗಿಂತ ಕಡಿಮೆ ಮೊತ್ತದ ವಹಿವಾಟು ನಡೆಸುವ ಉದ್ದಿಮೆದಾರರು ಕೂಡ ಜಿಎಸ್​ಟಿ ರಿಟರ್ನ್ ಸಲ್ಲಿಸುವಾಗ 4 ಡಿಜಿಟ್​ನ ಎಚ್​ಎಸ್​ಎನ್ ಕೋಡ್ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ 5 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸುವ ಉದ್ದಿಮೆದಾರರು ಮಾತ್ರ ಎಚ್​ಎಸ್​ಎನ್ ಕೋಡ್ ಉಲ್ಲೇಖಿಸಬೇಕಾಗಿತ್ತು.

ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ

ಕೊಂಕಣ ಮಾರ್ಗದಲ್ಲಿ ಚಲಿಸುವ ರೈಲುಗಳ ವೇಳಾಪಟ್ಟಿ ಇಂದಿನಿಂದ ಬದಲಾಗಿದೆ. ಮುಂಗಾರು ಅವಧಿಯಲ್ಲಿ ರೈಲುಗಳ ವೇಗದ ಮೇಲೆ ಹೇರಲಾಗಿದ್ದ ಮಿತಿಯನ್ನೂ ತೆರವುಗೊಳಿಸಲಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ