Rupee vs Dollar: ಡಾಲರ್​ನ ಜಾಗತಿಕ ಪ್ರಾಬಲ್ಯ ಮುಗಿಯುತ್ತಿದೆಯಾ? ರುಪಾಯಿ ಕೈಹಿಡಿಯುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಿದೆ

|

Updated on: Mar 16, 2023 | 10:51 AM

18 Nations To Trade In Rupee With India: ರಷ್ಯಾ, ಇಸ್ರೇಲ್, ಶ್ರೀಲಂಕಾ, ಜರ್ಮನಿ ಸೇರಿದಂತೆ 18 ದೇಶಗಳು ಭಾರತದೊಂದಿಗೆ ರುಪಾಯಿ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಆರ್​ಬಿಐ ವಿಶೇಷ ವೋಸ್ಟ್ರೋ ಖಾತೆಗಳಿಗೆ ಅನುಮತಿ ಕೊಟ್ಟಿದೆ. ಇದರಿಂದ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಅವಲಂಬಿಕೆ ಕಡಿಮೆಯಾಗಿ ರುಪಾಯಿಗೆ ಮನ್ನಣೆ ಹೆಚ್ಚಾಗಲಿದೆ.

Rupee vs Dollar: ಡಾಲರ್​ನ ಜಾಗತಿಕ ಪ್ರಾಬಲ್ಯ ಮುಗಿಯುತ್ತಿದೆಯಾ? ರುಪಾಯಿ ಕೈಹಿಡಿಯುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಿದೆ
ಡಾಲರ್ vs ರುಪಾಯಿ
Follow us on

ನವದೆಹಲಿ: ಭಾರತದ ರುಪಾಯಿ ಅಂತರರಾಷ್ಟ್ರೀಯ ಕರೆನ್ಸಿಯಾಗುವ (International Currency) ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬದಲು ರುಪಾಯಿ ಕರೆನ್ಸಿಯನ್ನು ಬಳಸಲು ಮುಂದಾಗುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಇದಕ್ಕೆ ಪೂರಕವಾಗಿ ರುಪಾಯಿಯಲ್ಲಿ ವ್ಯಾಪಾರ ಮಾಡುವ ದೇಶಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಮತ್ತು ಈ ಪ್ರಕ್ರಿಯೆ ಸುಗಮವಾಗಿ ಸಾಗುವ ರೀತಿಯಲ್ಲಿ ವೋಸ್ತ್ರೋ ವ್ಯವಸ್ಥೆಯನ್ನು ಭಾರತ ಮಾಡಿದೆ. ಇದೀಗ ಇಸ್ರೇಲ್, ರಷ್ಯಾ ಇತ್ಯಾದಿ 18 ದೇಶಗಳಲ್ಲಿ 60 ವಿಶೇಷ ರುಪಾಯಿ ವೋಸ್ಟ್ರೋ ಖಾತೆ (SRVA- Special Rupee Vostro Account) ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿಸಿದೆ.

ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಬಹುತೇಕ ದೇಶಗಳು ಡಾಲರ್ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತವೆ. ಒಂದು ವೇಳೆ ಅಮೆರಿಕವೇನಾದರೂ ಒಂದು ದೇಶದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೆ ಅದರ ಪರಿಣಾಮ ಭೀಕರವಾದುದು. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾವನ್ನು ಇದೇ ರೀತಿ ಉಸಿರುಗಟ್ಟಿಸಿ ಇಕ್ಕಟ್ಟಿಗೆ ಸಿಲುಕಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಕರೆನ್ಸಿಯ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಭಾರತದ ರುಪಾಯಿ ಬಹಳ ಜನಪ್ರಿಯವಾಗತೊಡಗಿದೆ. ಅತಿಯಾದ ರುಪಾಯಿ ಆಮದಿನಿಂದ ಅದರ ಕರೆನ್ಸಿ ಮೌಲ್ಯ ಕಡಿಮೆ ಆಗುವುದನ್ನು ತಪ್ಪಿಸಲು ಮತ್ತು ವ್ಯಾಪಾರ ಪ್ರಕ್ರಿಯೆ ಸುಲಭವಾಗಿ ಸಾಗಲು ವೋಸ್ಟ್ರೋ ಖಾತೆ ವ್ಯವಸ್ಥೆ ಸಹಾಯಕ್ಕೆ ಬರುತ್ತದೆ.

ಇದನ್ನೂ ಓದಿPMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ

ರುಪಾಯಿ ಕರೆನ್ಸಿಯಲ್ಲಿ ವ್ಯಾಪಾರ ಮಾಡಲು ಆರ್​ಬಿಐ ಅನುಮತಿಸಿದ 18 ದೇಶಗಳು

ಭಾರತೀಯ ರುಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ 18 ದೇಶಗಳಿಗೆ ಅನುಮತಿ ನೀಡಿದೆ. 18 ದೇಶಗಳಿಗೆ 60 ವಿಶೇಷ ವೋಸ್ಟ್ರೋ ಅಕೌಂಟ್​ಗಳನ್ನು ತೆರೆಯಲಾಗುತ್ತದೆ. 18 ದೇಶಗಳು ಪಟ್ಟಿ ಮುಂದಿದೆ:

  1. ರಷ್ಯಾ
  2. ಸಿಂಗಾಪುರ
  3. ಶ್ರೀಲಂಕಾ
  4. ಬೋಟ್ಸವಾನ
  5. ಫಿಜಿ
  6. ಜರ್ಮನಿ
  7. ಗಯಾನ
  8. ಇಸ್ರೇಲ್
  9. ಕೀನ್ಯಾ
  10. ಮಲೇಷ್ಯಾ
  11. ಮಾರಿಷಸ್
  12. ಮಯನ್ಮಾರ್
  13. ನ್ಯೂಜಿಲೆಂಡ್
  14. ಓಮನ್
  15. ಸೇಶೆಲೆಸ್
  16. ತಾಂಜಾನಿಯಾ
  17. ಉಗಾಂಡ
  18. ಬ್ರಿಟನ್ (ಯುಕೆ)

ಏನಿದು ಆರ್​ಬಿಐನ ಸ್ಪೆಷಲ್ ರುಪೀ ವೋಸ್ಟ್ರೋ ಅಕೌಂಟ್?

ವಿಶೇಷ ರುಪಾಯಿ ವೋಸ್ಟ್ರೋ ಖಾತೆಯ ಆಲೋಚನೆ ಆರ್​ಬಿಐಗೆ ಹೊಳೆದದ್ದು ಈಗಲ್ಲ. ಕಳೆದ ವರ್ಷ ಜುಲೈನಲ್ಲೇ ಇದರ ಪ್ರಕ್ರಿಯೆ ಆರಂಭವಾಗಿತ್ತು. ಭಾರತೀಯ ರುಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ನಡೆಸಲು ಆರ್​ಬಿಐ ಮಾರ್ಗಸೂಚಿಗಳನ್ನು ತಿಳಿಸಿತ್ತು.

ಇದನ್ನೂ ಓದಿJio Plus Plans: ಜಿಯೋ ಫ್ಯಾಮಿಲಿ ಪ್ಲಾನ್; ನಾಲ್ವರಿಗೆ ಸೇರಿ ಪ್ಯಾಕೇಜ್; ಭರ್ಜರಿ ಉಳಿತಾಯ; ಡೇಟಾ ಮಿತಿ ಇತ್ಯಾದಿ ವಿವರ ಇಲ್ಲಿದೆ

ಅದರ ಪ್ರಕಾರ, ಭಾರತದ ಜೊತೆ ವ್ಯಾಪಾರ ಮಾಡುವ ದೇಶವು ರುಪಾಯಿ ಕರೆನ್ಸಿಯನ್ನ ಬಳಸಲು ಅನುವು ಮಾಡಿಕೊಡುತ್ತದೆ ವೋಸ್ಟ್ರೋ ಖಾತೆ. ವ್ಯಾಪಾರ ಮಾಡುವ ದೇಶದ ಪಾರ್ಟ್ನರ್ ಬ್ಯಾಂಕುಗಳಿಗೆ ವೋಸ್ಟ್ರೋ ಖಾತೆ ಬೇಕಾಗುತ್ತದೆ. ಈ ಖಾತೆಯನ್ನು ಭಾರತೀಯ ಬ್ಯಾಂಕೊಂದು ತೆರೆದು ನಿರ್ವಹಣೆ ಮಾಡುತ್ತದೆ. ಈ ವಿದೇಶೀ ವ್ಯಾಪಾರಿಯಿಂದ ಭಾರತ ಆಮದು ಮಾಡಿಕೊಂಡಾಗ ರುಪಾಯಿಯಲ್ಲಿ ವಹಿವಾಟು ಮಾಡಲಾಗುತ್ತದೆ. ವಿದೇಶೀ ವ್ಯಾಪಾರಿಗೆ ರುಪಾಯಿಯಲ್ಲೇ ಹಣ ಸಂದಾಯವಾಗುತ್ತದೆ. ಈ ಹಣವು ನಿಗದಿತ ವೋಸ್ಟ್ರೋ ಖಾತೆಗೆ ಜಮೆಯಾಗುತ್ತದೆ.

ಹಾಗೆಯೇ, ಭಾರತದಿಂದ ವಿದೇಶಕ್ಕೆ ಏನಾದರೂ ರಫ್ತು ಆದಾಗ, ಆ ವಿದೇಶೀ ಆಮದುದಾರ ಸಂಸ್ಥೆಯ ವೋಸ್ಟ್ರೋ ಖಾತೆಯಿಂದ ರುಪಾಯಿ ಲೆಕ್ಕದಲ್ಲಿ ಮೊತ್ತವನ್ನು ಕಳೆಯಲಾಗುತ್ತದೆ. ಈ ರೀತಿಯಾಗಿ ವೋಸ್ಟ್ರೋ ವ್ಯವಸ್ಥೆ ಮೂಲಕ ಭಾರತೀಯ ರುಪಾಯಿಯಲ್ಲೇ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿTCS: ಹೆಚ್ಚು ಅಮೆರಿಕನ್ನರಿಗೆ ಟಿಸಿಎಸ್ ಉದ್ಯೋಗ; ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಕಂಪನಿ; ಟಾಟಾ ಕಂಪನಿಯ ಇನ್ನೂ ಮಹತ್ವದ ಸಾಧನೆಗಳು ಇಲ್ಲಿವೆ

ವಿಶೇಷ ವೋಸ್ಟ್ರೋ ಖಾತೆ ಹೊಂದಿರುವವರು ಭಾರತ ಸರ್ಕಾರದ ಷೇರು, ಬಾಂಡು ಇತ್ಯಾದಿಗಳಲ್ಲಿ ಹೂಡಿಕೆ ರೂಪದಲ್ಲಿ ಹಣ ಇಟ್ಟುಕೊಳ್ಳುವ ವ್ಯವಸ್ಥೆಯೂ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲೇ ವ್ಯಾಪಾರ ಮಾಡಲು ಮುಂದಾಗಬಹುದೆಂದು ನಿರೀಕ್ಷಿಸಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:48 am, Thu, 16 March 23