
ನವದೆಹಲಿ, ಜೂನ್ 22: ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸ್ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ (Multi-state cooperative societies act) ಅಡಿ ನೊಂದಾಯಿಸಲಾಗಿದೆ.
ಎನ್ಸಿಡಿಸಿ, ಅಮುಲ್, ನಬಾರ್ಡ್, ಇಫ್ಕೋ, ಎನ್ಡಿಡಿಬಿ ಇತ್ಯಾದಿ ದೇಶದ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳು ಈ ಸಹಕಾರಿ ಟ್ಯಾಕ್ಸಿ ಸೇವೆ ಯೋಜನೆಯನ್ನು ಬೆಂಬಲಿಸಿವೆ. ಆರಂಭಿಕ ಹಂತದಲ್ಲಿ ಈ ಪ್ರತಿಯೊಂದು ಸಹಕಾರಿ ಸಂಸ್ಥೆಯೂ ತಲಾ 10 ಕೋಟಿ ರೂ ಹೂಡಿಕೆಗೆ ಬದ್ಧವಾಗಿವೆ.
ಇದನ್ನೂ ಓದಿ: ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ
ಸಹಕಾರಿ ಟ್ಯಾಕ್ಸಿ ಸೇವೆಯು ಲಾಭದ ಉದ್ದೇಶಕ್ಕೆ ನಡೆಯುತ್ತಿಲ್ಲ. ಸಹಕಾರಿ ತತ್ವಗಳಲ್ಲಿ ನಡೆಯುವ ಈ ಟ್ಯಾಕ್ಸಿ ಸರ್ವಿಸ್ನಲ್ಲಿ ಪ್ರಯಾಣಿಕರಿಗೆ ಹೊರೆಯಾಗುವಷ್ಟು ದುಬಾರಿ ದರ ಇರುವುದಿಲ್ಲ. ಓಲಾ, ಊಬರ್ ರೀತಿಯಲ್ಲಿ ಪ್ಲಾಟ್ಫಾರ್ಮ್ ಫೀ ಪಡೆಯಲಾಗುವುದಿಲ್ಲ. ಪೀಕ್ ಅವರ್ ಹೆಸರಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುವುದಿಲ್ಲ. ಪ್ರಯಾಣದಿಂದ ಬರುವ ಬಹುತೇಕ ಆದಾಯವು ಚಾಲಕರಿಗೆ ಸಂದಾಯವಾಗುತ್ತದೆ.
ಚಾಲಕರಿಗೆ ಆದಾಯದಲ್ಲಿ ಸಿಂಹಪಾಲು ಸಿಕ್ಕಂತೆ ಸಹಕಾರಿ ಸಂಸ್ಥೆಯಲ್ಲಿ ಷೇರುಪಾಲು ಕೂಡ ಸಿಗುವ ಅವಕಾಶ ಇರುತ್ತದೆ. ಈ ಟ್ಯಾಕ್ಸಿ ಸರ್ವಿಸ್ನಲ್ಲಿ ಆರು ತಿಂಗಳು ಕೆಲಸ ಮಾಡಿದ ಬಳಿಕ ಚಾಲಕರು ಈ ಸಂಸ್ಥೆಯ ಸದಸ್ಯತ್ವ ಪಡೆಯಲು ಅವಕಾಶ ಇರುತ್ತದೆ. 100 ರೂ ಬೆಲೆಯಂತೆ ಐದು ಷೇರುಗಳನ್ನು ಖರೀದಿಸಿ ಸದಸ್ಯತ್ವ ಪಡೆಯಬಹುದು. ಚಾಲಕರಿಗೆ ಮತ್ತೊಂದು ಅನುಕೂಲವೆಂದರೆ, ಸೋಷಿಯಲ್ ಸೆಕ್ಯೂರಿಟಿ ಸ್ಕೀಮ್ಗಳ ಮೂಲಕ ಹಣಕಾಸು ಭದ್ರತೆ ಸಿಗುತ್ತದೆ.
ಇದನ್ನೂ ಓದಿ: ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ
ಸಹಕಾರಿ ಟ್ಯಾಕ್ಸಿ ಸೇವೆ ಇದೇ ಡಿಸೆಂಬರ್ ತಿಂಗಳಲ್ಲಿ ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮೊದಲಿಗೆ ಆರಂಭವಾಗಬಹುದು. ಆ ಬಳಿಕ ದೇಶಾದ್ಯಂತ ಇದನ್ನು ವಿಸ್ತರಿಸುವ ಗುರಿ ಇದೆ. ಆರಂಭಿಕ ಹಂತದಲ್ಲಿ 400-500 ಚಾಲಕರು ಇದರಲ್ಲಿ ಜೋಡಿಸಿಕೊಳ್ಳುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ