ಮುಕೇಶ್ ಅಂಬಾನಿಗೆ ಸೆಬಿ 25 ಕೋಟಿ ರೂ ದಂಡ ವಿಧಿಸಿದ್ದು ಯಾಕೆ? ಕೋರ್ಟ್ ಇದನ್ನು ರದ್ದು ಮಾಡಿದ್ದು ಯಾಕೆ?

|

Updated on: Dec 06, 2023 | 10:42 AM

SAT Quashes SEBI Order: 2007ರಲ್ಲಿ ರಿಲಾಯನ್ಸ್ ಪೆಟ್ರೋಲಿಯಂ ಷೇರು ವಹಿವಾಟಿನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬುದು ಸೆಬಿ ಆರೋಪ. ಈ ಪ್ರಕರಣದಲ್ಲಿ ಮುಕೇಶ್ ಅಂಬಾನಿ, ಆರ್​ಐಎಲ್ ಹಾಗೂ ಇತರ ಎರಡು ಕಂಪನಿಗಳ ಮೇಲೆ ಸೆಬಿ 2021ರಲ್ಲಿ ದಂಡ ವಿಧಿಸಿತ್ತು. ಅಂಬಾನಿ ಅಕ್ರಮ ಸಾಬೀತುಪಡಿಸಲು ಸೆಬಿ ವಿಫಲವಾಗಿದೆ ಎಂದು ಎಸ್​ಎಟಿ ಸೆಬಿ ಆದೇಶ ರದ್ದುಮಾಡಿದೆ.

ಮುಕೇಶ್ ಅಂಬಾನಿಗೆ ಸೆಬಿ 25 ಕೋಟಿ ರೂ ದಂಡ ವಿಧಿಸಿದ್ದು ಯಾಕೆ? ಕೋರ್ಟ್ ಇದನ್ನು ರದ್ದು ಮಾಡಿದ್ದು ಯಾಕೆ?
ಮುಕೇಶ್ ಅಂಬಾನಿ
Follow us on

ನವದೆಹಲಿ, ಡಿಸೆಂಬರ್ 6: ಹದಿನಾರು ವರ್ಷದ ಹಿಂದಿನ ಪ್ರಕರಣವೊಂದರ ಸಂಬಂಧ ಮುಕೇಶ್ ಅಂಬಾನಿ ಹಾಗೂ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ದಂಡ ವಿಧಿಸಿದ್ದ ಸೆಬಿ ಆದೇಶವನ್ನು (SEBI order) ಕೋರ್ಟ್ ರದ್ದು ಮಾಡಿದೆ. 2007ರ ಆರ್​ಪಿಎಲ್ (ರಿಲಾಯನ್ಸ್ ಪೆಟ್ರೋಲಿಯಂ) ಪ್ರಕರಣದಲ್ಲಿ ಅಂಬಾನಿ ಮತ್ತು ಇತರ ಎರಡು ಸಂಸ್ಥೆಗಳ ಮೇಲೆ ಸೆಬಿ 2021ರಲ್ಲಿ ಒಟ್ಟು 70 ಕೋಟಿ ರೂ ದಂಡ ಹಾಕಿತ್ತು. ಷೇರು ಮೇಲ್ಮನವಿ ನ್ಯಾಯಮಂಡಳಿ (SAT- securities appellate tribunal) ಈ ಆದೇಶವನ್ನು ರದ್ದುಪಡಿಸಿದೆ. ಆಗ ಅಸ್ತಿತ್ವದಲ್ಲಿದ್ದ ರಿಲಾಯನ್ಸ್ ಪೆಟ್ರೋಲಿಯಂ ಲಿ ಸಂಸ್ಥೆಯ ಷೇರುಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಪ್ರಕರಣ ಅದಾಗಿತ್ತು.

ಈ ಪ್ರಕರಣದಲ್ಲಿ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಅಷ್ಟೇ ಅಲ್ಲದೇ ನವಿ ಮುಂಬೈ ಎಸ್​ಇಝಡ್ ಹಾಗೂ ಮುಂಬೈ ಎಸ್​ಇಝಡ್ ಕಂಪನಿಗಳ ಮೇಲೂ ಸೆಬಿ ದಂಡ ವಿಧಿಸಿತ್ತು. ರಿಲಾಯನ್ಸ್ ಇಂಡಸ್ಟ್ರೀಸ್ ಮೇಲೆ 25 ಕೋಟಿ ರೂ ದಂಡ ಹಾಕಲಾಗಿದ್ದರೆ, ಅದರ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಮುಕೇಶ್ ಅಂಬಾನಿಗೆ 15 ಕೋಟಿ ರೂ ಫೈನ್ ವಿಧಿಸಲಾಗಿತ್ತು. ಇನ್ನು, ನವಿ ಮುಂಬೈ ಎಸ್​ಇಝಡ್ ಹಾಗೂ ಮುಂಬೈ ಎಸ್​ಇಝಡ್ ಸಂಸ್ಥೆಗಳ ಮೇಲೆ ಕ್ರಮವಾಗಿ 20 ಕೋಟಿ ರೂ ಹಾಗೂ 10 ಕೋಟಿ ರೂ ದಂಡ ಹಾಕಿ ಸೆಬಿ ಆದೇಶ ಹೊರಡಿಸಿತ್ತು. ಈ ಮೂರು ಸಂಸ್ಥೆಗಳು ಸೆಬಿ ಆದೇಶದ ವಿರುದ್ಧ ಎಸ್​ಎಟಿ ಬಳಿ ಮೇಲ್ಮನವಿ ಹೋಗಿದ್ದವು. ಈಗ ಈ ಮೂರು ಸಂಸ್ಥೆಗಳ ಪರವಾಗಿ ನ್ಯಾಯಮಂಡಳಿ ತೀರ್ಪು ನೀಡಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ

ಸೆಬಿ ಆರೋಪವೇನು?

ರಿಲಾಯನ್ಸ್ ಪೆಟ್ಟೋಲಿಯಂ ಸಂಸ್ಥೆ ಹಿಂದೆ ಆರ್​ಐಎಲ್​ನ ಉಪಸಂಸ್ಥೆಯಾಗಿತ್ತು. 2007ರಲ್ಲಿ ಆರ್​ಪಿಎಲ್​ನಲ್ಲಿದ್ದ ತನ್ನ ಪಾಲಿನ ಶೇ. 5ರಷ್ಟು ಷೇರುಗಳನ್ನು ಮಾರಲು ಆರ್​ಐಎಲ್ ನಿರ್ಧರಿಸಿತ್ತು. 12 ಕೋಟಿ ರೂ ಮೌಲ್ಯದ ಈ ಷೇರುಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎನ್ನುವುದು ಸೆಬಿ ಆರೋಪ. ನಿಯಮದ ಪ್ರಕಾರ ಸಂಸ್ಥೆಯ ಸಂಸ್ಥಾಪಕರು ಹೊಂದಿರಬೇಕಾದ ಷೇರುಪಾಲು ಶೇ. 5ಕ್ಕಿಂತ ಹೆಚ್ಚಿರಬಾರದು. ಆದರೂ ಕೂಡ 6.83 ಪ್ರತಿಶತದಷ್ಟು ಷೇರುಪಾಲು ಹೊಂದಿದ್ದು ಕಾನೂನಿಗೆ ವಿರುದ್ಧವಾಗಿದೆ. ಈ ವ್ಯವಹಾರದಲ್ಲಿ ಮುಕೇಶ್ ಅಂಬಾನಿ ಹಾಗೂ ಅವರ ಸಂಸ್ಥೆ ಅಕ್ರಮ ಎಸಗಿದೆ ಎಂದು ಸೆಬಿ ಅಭಿಪ್ರಾಯಪಟ್ಟಿತ್ತು.

ಇದನ್ನೂ ಓದಿ: ಸಾಲ ಕೊಟ್ಟು ಕುಣಿಕೆ ಹಾಕೋ ಆನ್ಲೈನ್ ಖದೀಮರಿದ್ದಾರೆ ಹುಷಾರ್; ಲೋನ್ ಸ್ಕ್ಯಾಮ್ ಗುರುತಿಸುವುದು ಹೇಗೆ?

ಎಸ್​ಎಟಿ ಅಭಿಪ್ರಾಯ ಏನು?

ಒಂದು ಕಾರ್ಪೊರೇಟ್ ಸಂಸ್ಥೆ ಕಾನೂನು ಉಲ್ಲಂಘಿಸಿದರೆ ಅದಕ್ಕೆ ಮುಖ್ಯಸ್ಥರನ್ನೇ ಹೊಣೆ ಮಾಡಲು ಆಗುವುದಿಲ್ಲ. ಆರ್​ಐಎಲ್​ನ ಎರಡು ಬೋರ್ಡ್ ಮೀಟಿಂಗ್​ಗಳ ವರದಿಯನ್ನು ಗಮನಿಸಿದರೆ ಅಂದಿನ ವಹಿವಾಟನ್ನು ಆರ್​ಐಎಲ್​ನ ಇಬ್ಬರು ಹಿರಿಯ ಅಧಿಕಾರಿಗಳು ನಡೆಸಿದ್ದರು. ಇದು ಅರ್ಜಿದಾರರಿಗೆ ತಿಳಿದೇ ಇರಲಿಲ್ಲ. ಮುಕೇಶ್ ಅಂಬಾನಿ ಈ ವಹಿವಾಟಿನಲ್ಲಿ ಇದ್ದಾರೆ ಎಂದು ಸಾಬೀತುಪಡಿಸಲು ಸೆಬಿ ವಿಫಲವಾಗಿದೆ. ಹೀಗಾಗಿ, ಅಂಬಾನಿ ಹಾಗೂ ಆರ್​ಐಎಲ್ ಮೇಲೆ ದಂಡ ವಿಧಿಸಿದ ಸೆಬಿ ಕ್ರಮವನ್ನು ರದ್ದುಗೊಳಿಸಲಾಗುತ್ತದೆ ಎಂದು ಸೆಕ್ಯೂರಿಟೀಸ್ ಅಪೆಲೆಂಟ್ ಟ್ರಿಬ್ಯುನಲ್ ತನ್ನ ತೀರ್ಪಿನಲ್ಲಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:37 am, Wed, 6 December 23