Post Office Fixed Deposit: ಪೋಸ್ಟ್ ಆಫೀಸ್ ಎಫ್​ಡಿ ಹಣ ಹಿಂಪಡೆಯುವ ಮುನ್ನ ಈ ಮಹತ್ವದ ನಿಯಮ ಬದಲಾವಣೆ ತಿಳಿದಿರಿ

|

Updated on: Dec 06, 2023 | 12:12 PM

FD Premature Withdrawal Rules: ಅಂಚೆ ಕಚೇರಿ ನಿಶ್ಚಿತ ಠೇವಣಿ ಸ್ಕೀಮ್​ನಲ್ಲಿ ನವೆಂಬರ್ 7ರಂದು ಹಣಕಾಸು ಸಚಿವಾಲಯ ಮಹತ್ವದ ನಿಯಮ ಬದಲಾವಣೆ ಮಾಡಿತ್ತು. ನವೆಂಬರ್ 10ರ ನಂತರ ಆರಂಭಿಸುವ ಎಫ್​ಡಿ ಸ್ಕೀಮ್​ನಲ್ಲಿ ಪ್ರೀಮೆಚ್ಯೂರ್ ಆಗಿ ಹಣ ವಿತ್​ಡ್ರಾ ಮಾಡಲು ಇನ್ನಷ್ಟು ನಿರ್ಬಂಧ ಹಾಕಲಾಗಿದೆ. ಐದು ವರ್ಷದ ಅವಧಿಯ ಎಫ್​ಡಿಗೆ 4 ವರ್ಷ ಲಾಕ್ ಇನ್ ಪೀರಿಯಡ್ ಇದೆ. 4 ವರ್ಷದವರೆಗೂ ಹಣ ಹಿಂಪಡೆಯಲು ಆಗುವುದಿಲ್ಲ.

Post Office Fixed Deposit: ಪೋಸ್ಟ್ ಆಫೀಸ್ ಎಫ್​ಡಿ ಹಣ ಹಿಂಪಡೆಯುವ ಮುನ್ನ ಈ ಮಹತ್ವದ ನಿಯಮ ಬದಲಾವಣೆ ತಿಳಿದಿರಿ
ಅಂಚೆ ಕಚೇರಿ ಎಫ್​ಡಿ
Follow us on

ಉಳಿತಾಯ ಹಣ ಇರಿಸಲು ಅಂಚೆ ಕಚೇರಿಯಲ್ಲಿ ಕೆಲ ಮಹತ್ವದ ಸ್ಕೀಮ್​ಗಳಿವೆ. ಅವುಗಳಲ್ಲಿ ನಿಶ್ಚಿತ ಠೇವಣಿಯೂ ಒಂದು. ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್​ಗಳು (Post Office Fixed Deposits) ಒಂದರಿಂದ 5 ವರ್ಷದ ಅವಧಿಯ ಶ್ರೇಣಿಗಳಲ್ಲಿವೆ. ಹಣಕಾಸು ಸಚಿವಾಲಯ ಕಳೆದ ತಿಂಗಳು ಫಿಕ್ಸೆಡ್ ಡೆಪಾಸಿಟ್ ವಿಚಾರದಲ್ಲಿ ಕೆಲ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಅವಧಿಗೆ ಮುನ್ನ, ಅಂದರೆ ಪ್ರೀಮೆಚ್ಯೂರ್ ಆಗಿ ಠೇವಣಿ ಹಣ ಹಿಂಪಡೆಯುವ ವಿಚಾರದಲ್ಲಿ ಪ್ರಮುಖ ನಿಯಮ ಬದಲಾವಣೆ ಮಾಡಲಾಗಿದೆ. ಅದರಂತೆ 5 ವರ್ಷದ ಅವಧಿಯ ಠೇವಣಿಗೆ 4 ವರ್ಷ ಲಾಕ್ ಇನ್ ಪೀರಿಯಡ್ ನಿಗದಿ ಮಾಡಲಾಗಿದೆ. ಅಂದರೆ, 4 ವರ್ಷದವರೆಗೂ ಠೇವಣಿ ಹಣವನ್ನು ಹಿಂಪಡೆಯಲು ಆಗುವುದಿಲ್ಲ. 4 ವರ್ಷದ ಬಳಿಕ ಹಣ ಹಿಂಪಡೆದರೂ ಬಡ್ಡಿ ಬಹಳ ಕಡಿಮೆ ಸಿಗುತ್ತದೆ.

ನವೆಂಬರ್ 7ರಂದು ಈ ಸಂಬಂಧ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ಈ ಹೊಸ ನಿಯಮವು 2023ರ ನವೆಂಬರ್ 10ರಂದು ಹಾಗೂ ಆ ಬಳಿಕ ಆರಂಭಿಸಲಾದ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳಿಗೆ ಅನ್ವಯ ಆಗುತ್ತದೆ. ನವೆಂಬರ್ 10ಕ್ಕೆ ಮುಂಚಿನ ಠೇವಣಿಗಳ ವಿಚಾರದಲ್ಲಿ ಹಳೆಯ ನಿಯಮಗಳೇ ಅನ್ವಯ ಆಗುತ್ತವೆ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನಲ್ಲಿ ನಿಮ್ಮ ಹಳೆಯ ನಿಷ್ಕ್ರಿಯ ಸೇವಿಂಗ್ಸ್ ಖಾತೆ ಮತ್ತೆ ಸಕ್ರಿಯಗೊಳಿಸುವ ಕ್ರಮ ತಿಳಿಯಿರಿ

ಪೋಸ್ಟ್ ಆಫೀಸ್ ಎಫ್​ಡಿ ನಿಯಮಗಳಿವು

ಐದು ವರ್ಷದ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಹಣವನ್ನು ನಾಲ್ಕು ವರ್ಷ ಪೂರ್ಣಗೊಳ್ಳುವವರೆಗೂ ವಿತ್​ಡ್ರಾ ಮಾಡಲು ಆಗುವುದಿಲ್ಲ. ನಾಲ್ಕು ವರ್ಷದ ಬಳಿಕ ಎಫ್​ಡಿ ಹಣ ವಿತ್​ಡ್ರಾ ಮಾಡುವುದಾದರೆ ಸೇವಿಂಗ್ಸ್ ಅಕೌಂಟ್​ಗೆ ಸಿಗುವ ಬಡ್ಡಿದರ ಮಾತ್ರವೇ ಅನ್ವಯ ಆಗುತ್ತದೆ.

ಒಂದು ವರ್ಷ, ಎರಡು ವರ್ಷ ಅಥವಾ ಮೂರು ವರ್ಷದ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಹಣವನ್ನು 6 ತಿಂಗಳಿಂದ ಒಂದು ವರ್ಷದಲ್ಲಿ ವಿತ್​ಡ್ರಾ ಮಾಡಿದರೆ ಅದಕ್ಕೂ ಕೂಡ ಸೇವಿಂಗ್ಸ್ ಅಕೌಂಟ್​ನ ಬಡ್ಡಿದರ ಮಾತ್ರವೇ ಅನ್ವಯ ಆಗುತ್ತದೆ.

ಎರಡು ವರ್ಷ ಅಥವಾ ಮೂರು ವರ್ಷದ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಒಂದು ವರ್ಷದ ಬಳಿಕ ವಿತ್​ಡ್ರಾ ಮಾಡುವುದಾದರೆ ಬಡ್ಡಿದರ ಕ್ರಮವಾಗಿ ಒಂದು ವರ್ಷದ ಅವಧಿಯ ಅಥವಾ ಎರಡು ವರ್ಷದ ಅವಧಿಯ ಬಡ್ಡಿದರ ಅನ್ವಯ ಆಗುತ್ತದೆ. ಜೊತೆಗೆ ಶೇ. 2ರಷ್ಟು ಬಡ್ಡಿಯನ್ನು ದಂಡವಾಗಿ ಮುರಿದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್

ಅಂಚೆ ಕಚೇರಿ ಎಫ್​ಡಿಯಲ್ಲಿ ಬಡ್ಡಿದರಗಳೆಷ್ಟು?

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಮತ್ತು ಐದು ವರ್ಷದ ಸ್ಕೀಮ್​ಗಳಿವೆ.

  • ಒಂದು ವರ್ಷದ ಅವಧಿ ಠೇವಣಿ: ಶೇ. 6.90ರಷ್ಟು ಬಡ್ಡಿ
  • ಎರಡು ವರ್ಷದ ಅವಧಿ ಠೇವಣಿ: ಶೇ. 7ರಷ್ಟು ಬಡ್ಡಿ
  • ಮೂರು ವರ್ಷದ ಅವಧಿ ಠೇವಣಿ: ಶೇ. 7ರಷ್ಟು ಬಡ್ಡಿ
  • ಐದು ವರ್ಷದ ಅವಧಿ ಠೇವಣಿ: ಶೇ. 7.50ರಷ್ಟು ಬಡ್ಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Wed, 6 December 23