ಭಾರತದ ವೇದಾಂತ ಸಂಸ್ಥೆಗೆ ಸೌದಿಯಲ್ಲಿ ಕಾಪರ್ ಫ್ಯಾಕ್ಟರಿ ಸ್ಥಾಪಿಸುವ ಯೋಜನೆ; 16,000 ಕೋಟಿ ರೂ ಹೂಡಿಕೆ ಸಾಧ್ಯತೆ
Vedanta gets copper project in Saudi: ಭಾರತದ ಮೈನಿಂಗ್ ಮತ್ತು ಲೋಹ ತಯಾರಿಕೆಯ ಕಂಪನಿಯಾದ ವೇದಾಂತಕ್ಕೆ ಸೌದಿಯಲ್ಲಿ ಒಳ್ಳೆಯ ಒಪ್ಪಂದ ಸಿಕ್ಕಿದೆ. ಸೌದಿಯ ರಾಸ್ ಅಲ್ ಖೇರ್ ಎಂಬಲ್ಲಿ 16,000 ಕೋಟಿ ರೂ ಬಂಡವಾಳದಲ್ಲಿ ತಾಮ್ರ ಉತ್ಪಾದನಾ ಘಟಕಗಳು ವೇದಾಂತದಿಂದ ನಿರ್ಮಾಣವಾಗಲಿವೆ. ರಿಯಾಧ್ನಲ್ಲಿ ನಡೆದ ವರ್ಲ್ಡ್ ಇನ್ವೆಸ್ಟ್ಮೆಂಟ್ ಕಾನ್ಫರೆನ್ಸ್ನಲ್ಲಿ ವೇದಾಂತ ಅಲ್ಲದೆ, ಬೇರೆ ಬೇರೆ ದೇಶಗಳ ವಿವಿಧ ಕಂಪನಿಗಳೊಂದಿಗೆ ಅಲ್ಲಿನ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ನವದೆಹಲಿ, ನವೆಂಬರ್ 26: ಸೌದಿ ಅರೇಬಿಯಾ ರಾಜಧಾನಿ ರಿಯಾಧ್ನಲ್ಲಿ ನಡೆಯುತ್ತಿರುವ ವಿಶ್ವ ಹೂಡಿಕೆ ಸಮಾವೇಶದಲ್ಲಿ ಅಲ್ಲಿನ ಸರ್ಕಾರ ಲೋಹ ಹಾಗೂ ಮೈನಿಂಗ್ ಕ್ಷೇತ್ರದಲ್ಲಿ 35 ಬಿಲಿಯನ್ ರಿಯಾಲ್ (ಸುಮಾರು 85,000 ಕೋಟಿ ರೂ) ಮೌಲ್ಯದ ಒಂಬತ್ತು ಒಪ್ಪಂದಗಳಿಗೆ ಸಮ್ಮತಿ ನೀಡಿದೆ. ಭಾರತದ ವೇದಾಂತ ಸಂಸ್ಥೆಯೂ ಒಳಗೊಂಡಂತೆ ವಿಶ್ವದ ಬೇರೆ ಬೇರೆ ಕಂಪನಿಗಳು ಈ ಯೋಜನೆಗಳನ್ನು ಪಡೆದಿವೆ.
ಸೌದಿ ಅರೇಬಿಯಾ ಸರ್ಕಾರವು ಆರ್ಥಿಕತೆಯನ್ನು ವಿಸ್ತರಿಸಲು ಮತ್ತು ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶನ್ 2030 ಯೋಜನೆ ಹಾಕಿದೆ. ಅದರ ಭಾಗವಾಗಿ ಗಣಿಗಾರಿಕೆ ಉದ್ಯಮಕ್ಕೆ ಅದು ಪುಷ್ಟಿ ಕೊಡುತ್ತಿದೆ. 2030ರೊಳಗೆ ಮೈನಿಂಗ್ ಉದ್ಯಮಕ್ಕೆ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ವಿದೇಶೀ ಹೂಡಿಕೆ ಹರಿದುಬರುವ ಆಶಯ ಇಟ್ಟುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಭಾರತದ ವೇದಾಂತ ಸಂಸ್ಥೆಯು ಸೌದಿಯ ರಾಸ್ ಅಲ್ ಖೇರ್ ಎಂಬಲ್ಲಿ 7.5 ಬಿಲಿಯನ್ ರಿಯಾಲ್ ಬಂಡವಾಳದಲ್ಲಿ ಕಾಪರ್ ರಿಫೈನರಿ ಸೇರಿದಂತೆ ವಿವಿಧ ತಾಮ್ರ ಘಟಕಗಳನ್ನು ನಿರ್ಮಿಸಲಿದೆ. ವಾರ್ಷಿಕವಾಗಿ ನಾಲ್ಕು ಲಕ್ಷ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯವು ಈ ಘಟಕಗಳಲ್ಲಿ ಇರಲಿದೆ. ಹಾಗೆಯೇ, ವಾರ್ಷಿಕ ಮೂರು ಲಕ್ಷ ಟನ್ ಕಾಪರ್ ರಾಡ್ ಉತ್ಪಾದನಾ ಘಟಕವನ್ನೂ ಅದು ನಿರ್ಮಿಸಲಿದೆ.
ತಾಮ್ರ ಉತ್ಪಾದನೆಯಲ್ಲಿ ಸೌದಿ ಸ್ವಾಲಂಬನೆ ಸಾಧಿಸಲು ವೇದಾಂತದೊಂದಿಗೆ ಮಾಡಿಕೊಳ್ಳಲಾಗಿರುವ ಈ ಒಪ್ಪಂದ ಸಹಕಾರಿಯಾಗಲಿದೆ. ಆ ದೇಶದ ಆರ್ಥಿಕತೆಯ ಬೆಳವಣಿಗೆಗೆ ಅಂದಾಜು 70 ಬಿಲಿಯನ್ ರಿಯಾಲ್ಗಳಷ್ಟು ಕೊಡುಗೆ ಸಿಗುವ ನಿರೀಕ್ಷೆಯೂ ಇದೆ.
ಇದನ್ನೂ ಓದಿ: ಮಾರುತಿ ಸುಜುಕಿಯ 30 ಲಕ್ಷ ಕಾರುಗಳ ರಫ್ತು, ಹೊಸ ಮೈಲಿಗಲ್ಲು; ಕಿಯಾದ 1 ಲಕ್ಷ ಸಿಕೆಡಿ ಯೂನಿಟ್ಸ್ ರಫ್ತು
ಚೀನಾದ ಝಿಜಿನ್ ಸಂಸ್ಥೆಯು ಸೌದಿಯಲ್ಲಿ ಜಿಂಕ್ ಉತ್ಪಾದನೆಗೆ ಗುತ್ತಿಗೆಗಳನ್ನು ಪಡೆದಿದೆ. ಆಸ್ಟ್ರೇಲಿಯಾದ ಹೇಸ್ಟಿಂಗ್ಸ್ ಟೆಕ್ನಾಲಜಿ ಮೆಟಲ್ಸ್ ಸಂಸ್ಥೆಯು ಅಪರೂಪದ ಭೂ ಖನಿಜಗಳ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ