ನವದೆಹಲಿ, ಜೂನ್ 27: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್ಬಿಐ ನಿನ್ನೆ ಬುಧವಾರ ಇನ್ಫ್ರಾಸ್ಟ್ರಕ್ಚರ್ ಬಾಂಡ್ ಮೂಲಕ 10,000 ಕೋಟಿ ರೂ ಸಾಲ ಸಂಗ್ರಹಿಸಿದೆ. ಎಸ್ಬಿಐನ ಈ ಇನ್ಫ್ರಾ ಬಾಂಡ್ಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿತ್ತು. 5,000 ಕೋಟಿ ರೂ ಮೌಲ್ಯದ ಬಾಂಡ್ಗಳಿಗೆ ನಾಲ್ಕು ಪಟ್ಟು ಹೆಚ್ಚು ಬಿಡ್ ಸಲ್ಲಿಕೆಯಾಗಿತ್ತು. ಎಸ್ಬಿಐ ನಿನ್ನೆ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ ಪ್ರಕಾರ, ಒಟ್ಟು 143 ಬಿಡ್ಗಳು ಬಂದಿದ್ದವು. ಒಟ್ಟು ಬಿಡ್ಗಳ ಮೊತ್ತ 19,884 ಕೋಟಿ ರೂ ದಾಟಿ ಹೋಗಿತ್ತು. ಪೆನ್ಷನ್ ಫಂಡ್ಗಳು, ಪ್ರಾವಿಡೆಂಟ್ ಫಂಡ್ಗಳು, ಮ್ಯೂಚುವಲ್ ಫಂಡ್ಗಳು, ಇನ್ಷೂರೆನ್ಸ್ ಕಂಪನಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಮೊದಲಾದ ಸಂಸ್ಥೆಗಳು ಎಸ್ಬಿಐನ ಇನ್ಫ್ರಾ ಬಾಂಡ್ಗಳ ಖರೀದಿಗೆ ಬಿಡ್ ಸಲ್ಲಿಸಿದ್ದು ಗೊತ್ತಾಗಿದೆ.
ಹೆಚ್ಚೂಕಡಿಮೆ 20,000 ಕೋಟಿ ರೂ ಮೊತ್ತದ ಇನ್ಫ್ರಾ ಬಾಂಡ್ಗಳಿಗೆ ಬಿಡ್ ಸಲ್ಲಿಕೆಯಾಗಿದ್ದರೂ ಎಸ್ಬಿಐ 10,000 ಕೋಟಿ ರೂ ಮೊತ್ತ ಸ್ವೀಕರಿಸಲು ನಿರ್ಧರಿಸಿತು. ಶೇ. 7.36ರ ಕೂಪನ್ ರೇಟ್ ಅಥವಾ ವಾರ್ಷಿಕ ಬಡ್ಡಿದರ ಕೊಡಲಿದೆ. 15 ವರ್ಷದವರೆಗೆ ಈ ಬಾಂಡ್ ಮೆಚ್ಯೂರಿಟಿ ಅವಧಿ ಇದೆ. ಬ್ಯಾಂಕ್ ಪ್ರತೀ ವರ್ಷ ಹೂಡಿಕೆದಾರರಿಗೆ ಬಡ್ಡಿಹಣವನ್ನು ಸಂದಾಯ ಮಾಡಲಿದೆ.
ಎಸ್ಬಿಐನಿಂದ ದೀರ್ಘಾವಧಿ ಬಾಂಡ್ಗಳ ವಿತರಣೆಯಾಗಿರುವುದು ಇದು ಐದನೇ ಸುತ್ತು. ಇಲ್ಲಿಯವರೆಗೆ ಅದು ವಿತರಿಸಿರುವ ದೀರ್ಘಾವಧಿ ಬಾಂಡ್ಗಳ ಒಟ್ಟು ಮೊತ್ತ 49,718 ಕೋಟಿ ರೂ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ದೀರ್ಘಾವಧಿಯ ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳ ಮೂಲಕ ಪಡೆದ ಸಾಲದ ಹಣವನ್ನು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ದಿಯಲ್ಲಿ ಮತ್ತು ಅಗ್ಗದ ವಸತಿ ವ್ಯವಸ್ಥೆಯಲ್ಲಿ ಇರುವ ಸಂಸ್ಥೆಗಳಿಗೆ ಸಾಲವಾಗಿ ಕೊಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ