AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5ಜಿ ಸ್ಪೆಕ್ಟ್ರಂ ಹರಾಜು; ಮಾರಾಟವಾದ್ದರಲ್ಲಿ ಏರ್ಟೆಲ್ ಸಿಂಹಪಾಲು; ವೊಡಾಫೋನ್​ಗಿಂತಲೂ ಜಿಯೋ ಖರೀದಿಸಿದ್ದು ಕಡಿಮೆ

Bharti Airtel makes biggest buy in Spectrum Auction: ಜೂನ್ 25ಕ್ಕೆ ಆರಂಭವಾಗಿ ಒಂದೂವರೆ ದಿನದಲ್ಲಿ ಮುಕ್ತಾಯಗೊಂಡ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲಿ 11,340 ಕೋಟಿ ರೂ ಆದಾಯ ಸರ್ಕಾರಕ್ಕೆ ಸಿಕ್ಕಿದೆ. ಮಾರಾಟಕ್ಕಿದ್ದ 10,543 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಪೈಕಿ 141.5 ಮೆಗಾಹರ್ಟ್ಜ್​ನಷ್ಟು ಸ್ಪೆಕ್ಟ್ರಂ ಮಾತ್ರವೇ ಸೇಲ್ ಆಗಿದೆ. ಭಾರ್ತಿ ಏರ್ಟೆಲ್ ಅತಿ ಹೆಚ್ಚು ಖರೀದಿ ಮಾಡಿದೆ. ರಿಲಾಯನ್ಸ್ ಜಿಯೋಗಿಂತಲೂ ವೊಡಾಫೋನ್ ಐಡಿಯಾ ಹೆಚ್ಚು ಸ್ಪೆಕ್ಟ್ರಂ ಪಡೆದಿದೆ.

5ಜಿ ಸ್ಪೆಕ್ಟ್ರಂ ಹರಾಜು; ಮಾರಾಟವಾದ್ದರಲ್ಲಿ ಏರ್ಟೆಲ್ ಸಿಂಹಪಾಲು; ವೊಡಾಫೋನ್​ಗಿಂತಲೂ ಜಿಯೋ ಖರೀದಿಸಿದ್ದು ಕಡಿಮೆ
ಏರ್ಟೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2024 | 12:39 PM

Share

ನವದೆಹಲಿ, ಜೂನ್ 27: ನಿನ್ನೆ ಮುಕ್ತಾಯಗೊಂಡ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 11,340.80 ಕೋಟಿ ರೂ ಮೊತ್ತದ ಸ್ಪೆಕ್ಟ್ರಂ ಮಾರಾಟ ಮಾಡಿದೆ ಸರ್ಕಾರ. 2010ರಲ್ಲಿ ಆರಂಭವಾದ ಸ್ಪೆಕ್ಟ್ರಂ ಹರಾಜಿನ ಇತಿಹಾಸದಲ್ಲಿ ಇಷ್ಟು ಕಡಿಮೆ ಪ್ರಮಾಣದ ಮಾರಾಟ ಕಂಡಿದ್ದು ಇದೇ ಮೊದಲು. ಕಳೆದ ಬಾರಿ ನಡೆದ ಹರಾಜಿನಲ್ಲಿ ಸರ್ಕಾರಕ್ಕೆ ಒಂದೂವರೆ ಲಕ್ಷ ಕೋಟಿ ರೂನಷ್ಟು ಆದಾಯ ಸಿಕ್ಕಿತ್ತು. ಈ ಸಲದ ಹರಾಜಿನಲ್ಲಿ ಪಾಲ್ಗೊಂಡಿದ್ದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಒಟ್ಟಾರೆ 141.5 MHz ಸ್ಪೆಕ್ಟ್ರಂ ಅನ್ನು ಖರೀದಿ ಮಾಡಿವೆ. 900 ಮೆಗಾಹರ್ಟ್ಜ್, 1800 ಮೆಗಾಹರ್ಟ್ಜ್, 2100 ಮೆಗಾಹರ್ಟ್ಜ್ ಮತ್ತು 2500 ಮೆಗಾಹರ್ಟ್ಜ್ ಬ್ಯಾಂಡ್​ಗಳಲ್ಲಿ ಖರೀದಿಗಳಾಗಿವೆ.

ಹರಾಜು ಪ್ರಕ್ರಿಯೆಗೆ ಮುನ್ನ ರಿಲಾಯನ್ಸ್ ಜಿಯೋ ಅತಿ ಹೆಚ್ಚು ಡೆಪಾಸಿಟ್ (Earnest Money Deposit) ಇಟ್ಟಿತ್ತಾದರೂ ಖರೀದಿ ಮಾಡಿದ್ದು ಮಾತ್ರ ಅತ್ಯಲ್ಪ. ಒಟ್ಟಾರೆ ನಡೆದ 11,340.80 ಕೋಟಿ ರೂ ಮೊತ್ತದ ಮಾರಾಟದಲ್ಲಿ ಭಾರ್ತಿ ಏರ್ಟೆಲ್ 6,857 ಕೋಟಿ ರೂ ಮೊತ್ತದ ಬ್ಯಾಂಡ್​ಗಳನ್ನು ಖರೀದಿ ಮಾಡಿದೆ. ಭಾರ್ತಿ ಏರ್ಟೆಲ್ 97 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಕೊಂಡುಕೊಂಡಿದೆ.

ಇದನ್ನೂ ಓದಿ: ಎಸ್​ಬಿಐ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗೆ ಭರ್ಜರಿ ಬೇಡಿಕೆ; ಶೇ. 7.36 ಕೂಪನ್ ರೇಟ್​ಗೆ 10,000 ಕೋಟಿ ರೂ ಸ್ವೀಕರಿಸಿದ ಬ್ಯಾಂಕ್

ವೊಡಾಫೋನ್ ಐಡಿಯಾ 900 ಮೆಗಾಹರ್ಟ್ಜ್, 1800 ಮೆಗಾಹರ್ಟ್ಜ್, 2500 ಮೆಗಾಹರ್ಟ್ಜ್ ಬ್ಯಾಂಡ್​ಗಳಲ್ಲಿ ಒಟ್ಟು 30 MHz ಸ್ಪೆಕ್ಟ್ರಂ ಅನ್ನು ಪಡೆದಿದೆ. ಇದಕ್ಕೆ ಅದು ಮಾಡಿದ ವೆಚ್ಚ 3,510 ಕೋಟಿ ರೂ.

ಮತ್ತೊಂದೆಡೆ, ರಿಲಾಯನ್ಸ್ ಜಿಯೋ 1800 ಮೆಗಾಹರ್ಟ್ಜ್ ಬ್ಯಾಂಡ್​ನಲ್ಲಿ 14.4 MHz ಸ್ಪೆಕ್ಟ್ರಂ ಅನ್ನು 973 ಕೋಟಿ ರೂ ತೆತ್ತು ಪಡೆದುಕೊಂಡಿದೆ.

ಈ ಬಾರಿ ಹರಾಜಿನಲ್ಲಿ ಲಭ್ಯ ಇದ್ದದ್ದು 10,523 ಮೆಗಾಹರ್ಟ್ಜ್ ಸ್ಪೆಕ್ಟ್ರಂ. ಈ ಪೈಕಿ 141 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಮಾತ್ರವೇ ಮಾರಾಟವಾಗಿರುವುದು. ಅಂದರೆ ಶೇ. 1.30ರಷ್ಟು ಮಾತ್ರವೇ ಸೇಲ್ ಆಗಿದೆ. ಇಷ್ಟು ಕಡಿಮೆ ಮಾರಾಟವಾಗಲು ಕಾರಣ ಇದೆ. ಈ ಹಿಂದಿನ ಹರಾಜಿನಲ್ಲಿ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಸಂಸ್ಥೆಗಳು 5ಜಿಗೆ ಬೇಕಾದ ಪ್ರಮುಖ ಸ್ಪೆಕ್ಟ್ರಂಗಳನ್ನು ಖರೀದಿ ಮಾಡಿದ್ದಾಗಿದೆ. ಈಗ ಕೆಲ ನವೀಕರಣಗಳು ಹಾಗೂ ಸಣ್ಣಪುಟ್ಟ ಅಪ್​ಡೇಟ್​ಗಳಿಗೆ ಸ್ಪೆಕ್ಟ್ರಂ ಖರೀದಿಸಿವೆ.

ಇದನ್ನೂ ಓದಿ: ಬೈಜೂಸ್ ಕಥೆ.! ತನಿಖೆಯಲ್ಲಿ ಪತ್ತೆಯಾಗದ ವಂಚನೆ; 4,000 ಕೋಟಿ ರೂಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿದ ಪ್ರೋಸಸ್; ಇದೇನು ಸಾಲ ಮನ್ನವಾ?

ಈಗ ಬಿಕರಿಯಾಗಿರುವ ಸ್ಪೆಕ್ಟ್ರಂಗಳನ್ನು ಸರ್ಕಾರ ಸದ್ಯದಲ್ಲೇ ಹಂಚಿಕೆ ಮಾಡಲಿದೆ. ಈ ಸ್ಪೆಕ್ಟ್ರಂಗಳನ್ನು 20 ವರ್ಷದವರೆಗೆ ಮಾತ್ರ ಬಳಸಬಹುದು. ಆ ಬಳಿಕ ಅದನ್ನು ಮರಳಿ ಖರೀದಿಸಬೇಕಾಗುತ್ತದೆ. ಸ್ಪೆಕ್ಟ್ರಂ ಖರೀದಿಸಿ 10 ವರ್ಷದ ಬಳಿಕ ಬಾಡಿಗೆಗೆ ಕೊಡುವುದೋ ಅಥವಾ ಇನ್ಯಾವುದಾದರೂ ರೀತಿಯಲ್ಲೇ ಲಾಭಕ್ಕೆ ಬಳಸಿಕೊಳ್ಳಲು ಅವಕಾಶ ಇರುತ್ತದೆ. ಆದರೆ, 20 ವರ್ಷದವರೆಗೆ ಮಾತ್ರ ಕಾಲಾವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ