ಕಳಪೆ ರಸ್ತೆಗಳಿಗೆಲ್ಲಾ ಟೋಲ್ ವಸೂಲಿ ಮಾಡಬೇಡಿ: ಹೆದ್ದಾರಿ ಪ್ರಾಧಿಕಾರಗಳಿಗೆ ಸಚಿವ ನಿತಿನ್ ಗಡ್ಕರಿ ಸೂಚನೆ
Nitin Gadkari at global workshop on satellite based tolling systems: ರಸ್ತೆ ಗುಣಮಟ್ಟ ಸರಿ ಇಲ್ಲದಿದ್ದರೂ ಟೋಲ್ ವಸೂಲಿಗೆ ಮುಂದಾಗುವುದು ಸರಿ ಇಲ್ಲ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಉಚ್ಚತಮ ಗುಣಮಟ್ಟದ ರಸ್ತೆಗಳಲ್ಲಿ ಟೋಲ್ ಪಡೆಯಿರಿ. ಆದರೆ ಗುಂಡಿಬಿದ್ದ ರಸ್ತೆಗೆ ಟೋಲ್ ಪಡೆದರೆ ಜನರು ತಿರುಗಿಬೀಳುತ್ತಾರೆ ಎಂಬುದು ಗಡ್ಕರಿ ಎಚ್ಚರಿಕೆ. ಸದ್ಯದಲ್ಲೇ ಈಗಿರುವ ಆರ್ಎಫ್ಐಡಿ ಆಧಾರಿತ ಫಾಸ್ಟ್ಯಾಗ್ ವ್ಯವಸ್ಥೆ ಬದಲು ಗ್ಲೋಬಲ್ ನ್ಯಾವಿಗೇಶನ್ ಸೆಟಿಲೈಟ್ ಸಿಸ್ಟಂ ಆಧಾರಿತ ಟೋಲಿಂಗ್ ಸಿಸ್ಟಂ ಬರಲಿದೆ.
ನವದೆಹಲಿ, ಜೂನ್ 27: ಕಳಪೆ ಗುಣಮಟ್ಟದ ರಸ್ತೆಗಳಿಗೆ ಟೋಲ್ ವಸೂಲಿ ಮಾಡುವುದನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಕ್ಷೇಪಿಸಿದ್ದಾರೆ. ಬುಧವಾರ ನಡೆದ ಟೋಲಿಂಗ್ ಸಿಸ್ಟಂ ವರ್ಕ್ಶಾಪ್ವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವರು, ರಸ್ತೆ ಗುಣಮಟ್ಟ ಉತ್ತಮವಾಗಿದ್ದರೆ ಟೋಲ್ ಸಂಗ್ರಹ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಟೋಲ್ಗಳನ್ನು ನಿರ್ಮಿಸಿ ಶುಲ್ಕ ವಸೂಲಿ ಮಾಡಲು ಬಹಳ ಬೇಗ ಮುಂದಾಗುತ್ತೇವೆ. ಅತ್ಯುತ್ತಮ ಗುಣಮಟ್ಟದ ರಸ್ತೆಗಳಲ್ಲಿ ಮಾತ್ರವೇ ಜನರಿಂದ ಟೋಲ್ ಸಂಗ್ರಹ ಮಾಡಬಹುದು. ಗುಂಡಿ ಬಿದ್ದಿರುವ, ಕೆಸರು ತುಂಬಿರುವ ರಸ್ತೆಗಳಲ್ಲಿ ಟೋಲ್ ವಸೂಲಿ ಮಾಡಿದರೆ ಜನರು ತಿರುಗಿಬೀಳುತ್ತಾರೆ ಅಷ್ಟೇ,’ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರು ಹೇಳಿದ್ದಾರೆ.
ಜಾರಿಗೆ ಬರಲಿದೆ ಜಿಎನ್ಎಸ್ಸ್ ಟೋಲಿಂಗ್ ಸಿಸ್ಟಂ
ಸದ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲು ಫಾಸ್ಟ್ಯಾಗ್ ಸಿಸ್ಟಂ ಬಳಸಲಾಗುತ್ತಿದೆ. ಈ ಫಾಸ್ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಐಡಿ ಅಥವಾ ಆರ್ಎಫ್ಐಡಿ ಸಿಗ್ನಲ್ನಿಂದ ನಡೆಯುತ್ತದೆ. ಮುಂಬರುವ ದಿನಗಳಲ್ಲಿ ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಂ (ಜಿಎನ್ಎಸ್ಎಸ್) ಆಧಾರಿತ ಫಾಸ್ಟ್ಯಾಗ್ ಬರಲಿದೆ. ಮೊದಲಿಗೆ ಆರ್ಎಫ್ಐಡಿ ಮತ್ತು ಜಿಎನ್ಎಸ್ಎಸ್ ಆಧಾರಿತ ಹೈಬ್ರಿಡ್ ಮಾದರಿಯಲ್ಲಿ ಟೋಲಿಂಗ್ ಸಿಸ್ಟಂ ಇರುತ್ತದೆ. ಬಳಿಕ ಸಂಪೂರ್ಣವಾಗಿ ಜಿಎನ್ಎಸ್ಎಸ್ ಸಿಸ್ಟಂ ಅನ್ನು ಅಳವಡಿಸುವ ಸಾಧ್ಯತೆ ಇದೆ.
ಜಿಎನ್ಎಸ್ಎಸ್ ಸಿಸ್ಟಂ ಜಾರಿಗೆ ಬಂದರೆ ಟೋಲ್ ಪೇಮೆಂಟ್ ವಿಧಾನವು ಪ್ರೀಪೇಯ್ಡ್ ಬದಲು ಪೋಸ್ಟ್ ಪೇಯ್ಡ್ ಆಗಬಹುದು. ನಿತಿನ್ ಗಡ್ಕರಿ ಪ್ರಕಾರ ಗ್ಲೋಬಲ್ ನ್ಯಾವಿಗೇಶನ್ ಸೆಟಿಲೈಟ್ ಸಿಸ್ಟಂ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಬಂದಲ್ಲಿ ಟೋಲ್ ಆದಾಯ ಕನಿಷ್ಠ 10,000 ಕೋಟಿ ರೂನಷ್ಟಾದರೂ ಹೆಚ್ಚಾಗುತ್ತದೆ. 2023-24ರ ವರ್ಷದಲ್ಲಿ ಭಾರತದಲ್ಲಿ ಟೋಲ್ ಸಂಗ್ರಹ ಹೆಚ್ಚೂಕಡಿಮೆ 65,000 ಕೋಟಿ ರೂ ಗಡಿ ಸಮೀಪ ಹೋಗಿತ್ತು.
ಇದನ್ನೂ ಓದಿ: ಮದುವೆಯಾದವರಿಗೆ ಕೆಲಸವಿಲ್ಲ ಅನ್ನೋದು ಸುಳ್ಳು; ಇತ್ತೀಚೆಗೆ ನೇಮಕವಾದವರಲ್ಲಿ ಶೇ. 25ರಷ್ಟು ವಿವಾಹಿತೆಯರೇ: ಫಾಕ್ಸ್ಕಾನ್
ಈ ಜಿಎನ್ಎಸ್ಎಸ್ ಟೋಲಿಂಗ್ ಸಿಸ್ಟಂ ಅನ್ನು ಮೊದಲಿಗೆ ಕಮರ್ಷಿಯಲ್ ವಾಹನಗಳಿಗೆ ಜಾರಿಗೊಳಿಸಲಾಗುತ್ತದೆ. ನಂತರ ಖಾಸಗಿ ವಾಹನಗಳು ಈ ಹೊಸ ಫಾಸ್ಟ್ಯಾಗ್ ವ್ಯವಸ್ಥೆ ಬಳಸಬಹುದು. ಟೋಲ್ ಕಟ್ಟದೇ ತಪ್ಪಿಸಿಕೊಂಡು ವಂಚಿಸುವ ಪ್ರಕರಣಗಳನ್ನು ಪತ್ತೆ ಮಾಡಲು ವಿನೂತನ ತಂತ್ರಜ್ಞಾನ ಅಳವಡಿಸುವ ಇರಾದೆಯಲ್ಲಿ ಪ್ರಾಧಿಕಾರ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ