AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲಿಷ್ಠ ಬ್ಯಾಂಕ್; ಲಾಭದ ಓಟದಲ್ಲಿ ರಿಲಾಯನ್ಸ್ ಸಾಮ್ರಾಜ್ಯವನ್ನೇ ಹಿಂದಿಕ್ಕಿದ ಎಸ್​ಬಿಐ; ಎರಡು ದಶಕಗಳಲ್ಲಿ ಇದು ಎರಡನೇ ಸಲ

SBI vs RIL Net Profit: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಲಾಭದ ಪ್ರಮಾಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024ರ ಮೊದಲ ಕ್ವಾರ್ಟರ್​ನಲ್ಲಿ ಮೀರಿಸಿದೆ. ಲಾಭದ ಓಟದಲ್ಲಿ ಆರ್​ಐಎಲ್ ಅನ್ನು ಎಸ್​ಬಿಐ ಮೀರಿಸಿರುವುದು ಇದು ಎರಡನೇ ಸಲ ಮಾತ್ರ.

ಬಲಿಷ್ಠ ಬ್ಯಾಂಕ್; ಲಾಭದ ಓಟದಲ್ಲಿ ರಿಲಾಯನ್ಸ್ ಸಾಮ್ರಾಜ್ಯವನ್ನೇ ಹಿಂದಿಕ್ಕಿದ ಎಸ್​ಬಿಐ; ಎರಡು ದಶಕಗಳಲ್ಲಿ ಇದು ಎರಡನೇ ಸಲ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 09, 2023 | 11:24 AM

Share

ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಎಸ್​ಬಿಐ (SBI) ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಭರ್ಜರಿ ಲಾಭ ಗಳಿಸಿದೆ. 2023ರ ಎಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,537 ಕೋಟಿ ರೂ ನಿವ್ವಳ ಲಾಭ (Net Profit) ತೋರಿಸಿದೆ. ಅಚ್ಚರಿ ಎಂದರೆ ಲಾಭದ ಓಟದಲ್ಲಿ ಎಸ್​ಬಿಐ ಭಾರತದ ಅತಿದೊಡ್ಡ ಕಂಪನಿ ಮತ್ತು ಅತಿಹೆಚ್ಚು ಲಾಭದಾಯಕ ಸಂಸ್ಥೆ ಎನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ ಅನ್ನೇ ಮೀರಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ಆರ್​ಐಎಲ್ (RIL) ಸಂಸ್ಥೆಯ ತ್ರೈಮಾಸಿಕ ಅವಧಿಯ ನಿವ್ವಳ ಲಾಭ 16,011 ಕೋಟಿ ರೂ ಇದೆ. ಕಳೆದ 20 ವರ್ಷದಲ್ಲಿ ಲಾಭದ ವಿಚಾರದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯನ್ನು ಎಸ್​ಬಿಐ ಹಿಂದಿಕ್ಕಿರುವುದು ಇದು ಎರಡನೇ ಸಲ ಮಾತ್ರ. ಹಿಂದೆ ಇಂಥದ್ದೊಂದು ಅಪರೂಪದ ಪ್ರಕರಣವಾಗಿದ್ದು 2011-12ರಲ್ಲಿ. ಆ ಹಣಕಾಸು ವರ್ಷದ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಆರ್​ಐಎಲ್​ನ ನಿವ್ವಳ ಲಾಭ 18,588 ಕೋಟಿ ರೂ ಇತ್ತು. ಆದರೆ, ಎಸ್​ಬಿಐನ ಟಿಟಿಎಂ ನಿವ್ವಳ ಲಾಭ 18,810 ಕೋಟಿ ರೂ ಇತ್ತು.

ರಿಲಾಯನ್ಸ್ ಇಂಡಸ್ಟ್ರೀಸ್ ಬಹಳ ವ್ಯಾವಹಾರಿ ವಿಸ್ತಾರ ಹೊಂದಿರುವ ಸಂಸ್ಥೆ. ಇಂಧನ, ಪೆಟ್ರೋಕೆಮಿಕಲ್, ನ್ಯಾಚುರಲ್ ಗ್ಯಾಸ್, ರೀಟೇಲ್ ಮತ್ತಿತರ ಕ್ಷೇತ್ರಗಳಲ್ಲಿ ಉದ್ದಿಮೆಗಳನ್ನು ಹೊಂದಿದೆ. ಭಾರತದಲ್ಲಿ ಅತಿಹೆಚ್ಚು ಮಾರುಕಟ್ಟೆಮೌಲ್ಯ ಹೊಂದಿರುವ ಸಂಸ್ಥೆ ಅದು. ದಶಕದಿಂದ ಭಾರತದ ಅತಿಲಾಭದಾಯಕ ಸಂಸ್ಥೆಯೂ ಅದಾಗಿದೆ. ಲಾಭದ ವಿಚಾರದಲ್ಲಿ ಆರ್​ಐಎಲ್ ಜೊತೆ ಪೈಪೋಟಿ ನಡೆಸಬಲ್ಲಂಥವು ತೈಲ ಸಂಸ್ಕರಣೆ ಸಂಸ್ಥೆಗಳಾದ ಒಎನ್​ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಇತ್ಯಾದಿ ಮಾತ್ರ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ಗಳ ಒಟ್ಟು ಕೆಟ್ಟ ಸಾಲ, ಬಾಕಿ ಬಿಲ್ ಹಣ ಎಷ್ಟು? ಇಲ್ಲಿದೆ ಸರ್ಕಾರದಿಂದ ಅಧಿಕೃತ ಮಾಹಿತಿ

ಸರ್ಕಾರಿ ಸ್ವಾಮ್ಯದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ (ಒಎನ್​ಜಿಸಿ) 2010-11ರವರೆಗೂ ಭಾರತದ ಅತಿಲಾಭದಾಯಕ ಸಂಸ್ಥೆ ಎನಿಸಿತ್ತು. 2011-12ರಲ್ಲಿ ಎಸ್​ಬಿಐ ಈ ದಾಖಲೆ ಬರೆಯಿತು. 2012-13ರಲ್ಲಿ ಇಂಡಿಯನ್ ಆಯಿಲ್ ಸಂಸ್ಥೆ ಅತಿಹೆಚ್ಚು ಲಾಭ ಮಾಡಿದ ಕಂಪನಿ ಎನಿಸಿತು. 2013-14ರಿಂದೀಚೆ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯದ್ದೇ ನಾಗಾಲೋಟವಾಗಿತ್ತು. ಈಗ ರಿಲಾಯನ್ಸ್ ಓಟವನ್ನು ಮೀರಿಸಿದ್ದು ಎಸ್​ಬಿಐ.

ಇದನ್ನೂ ಓದಿ: Ambiga Subramanian: ಹೆಮ್ಮೆಯ ಬೆಂಗಳೂರು ನಾರಿ ಅಂಬಿಗಾ ಸುಬ್ರಮಣಿಯನ್; ಸ್ವಂತವಾಗಿ ಬೆಳೆದು ಯಶಸ್ವಿ ಉದ್ಯಮಿಯಾದ ಈ ಮಹಿಳೆಯ ಸಾಧನೆ ಏನು?

ಬ್ಯಾಂಕ್​ನಿಂದ ಈ ಪರಿ ಲಾಭವನ್ನು ನಿರೀಕ್ಷಿಸಿದ್ದವರು ಕಡಿಮೆಯೇ. ಅದರಲ್ಲೂ ಜಾಗತಿಕ ಬ್ಯಾಂಕಿಂಗ್ ಬಿಕ್ಕಟ್ಟು ಉದ್ಭವಿಸಿದಾಗ ಭಾರತೀಯ ಬ್ಯಾಂಕುಗಳೂ ಸಂಕಷ್ಟಕ್ಕೆ ಸಿಲುಕಬಹುದು ಎಂದೇ ಬಹಳ ಮಂದಿ ಭಾವಿಸಿದ್ದರು. ಅವರ ಎಣಿಕೆ ಈಗ ಸುಳ್ಳಾಗಿದೆ. ಎಸ್​ಬಿಐ ಮಾತ್ರವಲ್ಲ ಭಾರತದ ಹಲವು ಬ್ಯಾಂಕುಗಳು ಒಳ್ಳೆಯ ಲಾಭ ತೋರಿಸಿವೆ. ಇವುಗಳು ತಮ್ಮ ಆದಾಯ ಪುಸ್ತಕದಿಂದ ಎನ್​​ಪಿಎ ಸಾಲಗಳನ್ನು ಪ್ರತ್ಯೇಕಗೊಳಿಸಿದ್ದು ಪಾಕ್ಷಿಕವಾಗಿ ಕಾರಣ ಇರಬಹುದಾದರೂ ಒಟ್ಟಾರೆ ಬ್ಯಾಂಕ್ ಆರೋಗ್ಯ ಉತ್ತಮವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ