ಕ್ರೆಡಿಟ್ ಕಾರ್ಡ್ಗಳ ಒಟ್ಟು ಕೆಟ್ಟ ಸಾಲ, ಬಾಕಿ ಬಿಲ್ ಹಣ ಎಷ್ಟು? ಇಲ್ಲಿದೆ ಸರ್ಕಾರದಿಂದ ಅಧಿಕೃತ ಮಾಹಿತಿ
Credit Card Defaults: ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಘೋಷಿಸಿರುವ ಒಟ್ಟು ಎನ್ಪಿಎ 2022ರ ಮಾರ್ಚ್ನಲ್ಲಿ 3,122 ಕೋಟಿ ರೂ ಇತ್ತು. ಇದು 2023ರ ಮಾರ್ಚ್ನಲ್ಲಿ 4,072 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು, ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಬಾಕಿ ಇರುವ ಮೊತ್ತ 2.10 ಲಕ್ಷಕೋಟಿ ರೂ ಇರುವುದು ತಿಳಿದುಬಂದಿದೆ.
ನವದೆಹಲಿ, ಆಗಸ್ಟ್ 9: ಬ್ಯಾಂಕ್ ಸಾಲದ ಕಟ್ಟದೇ ಬಾಕಿ ಉಳಿಸಿಕೊಳ್ಳಲಾದ ಮೊತ್ತವನ್ನು ಎನ್ಪಿಎ ಎಂದು ವರ್ಗೀಕರಿಸಲಾಗುತ್ತದೆ. ಅದೇ ರೀತಿ ಕ್ರೆಡಿಟ್ ಕಾರ್ಡ್ ಸಾಲ ಕೂಡ ಪಾವತಿಯಾಗದಿದ್ದರೆ ಅಂತವನ್ನು ಅನುತ್ಪಾದಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ವಿವಿಧ ಕಂಪನಿಗಳ ಕ್ರೆಡಿಟ್ ಕಾರ್ಡ್ ಕಂಪನಿಗಳ ಒಟ್ಟಾರೆ ಇಂಥ ಅನುತ್ಪಾದಕ ಆಸ್ತಿ (GNPA) 2023ರ ಮಾರ್ಚ್ ತಿಂಗಳಲ್ಲಿ 4,072 ರೂ ಆಗಿದೆ ಎಂದು ಹೇಳಲಾಗಿದೆ. ಪ್ರತಿಶತ ಲೆಕ್ಕದಲ್ಲಿ ಶೇ. 1.94ರಷ್ಟು ಎನ್ಪಿಎ ಇದೆ. 2022ರ ಮಾರ್ಚ್ ತಿಂಗಳಿಗಿಂತ ಈ ಬಾರಿ ಕೆಟ್ಟ ಸಾಲ ತುಸು ಹೆಚ್ಚಾಗಿದೆ. 2022ರ ಮಾರ್ಚ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಡೀಫಾಲ್ಟ್ ಆದ ಪ್ರಮಾಣ ಶೇ. 1.91ರಷ್ಟಿತ್ತು. ಈ ಮಾಹಿತಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 8ರಂದು ಸಂಸತ್ ಮುಂದೆ ಪ್ರಸ್ತುಪಡಿಸಿದೆ.
2021ರಲ್ಲಿ ಕ್ರೆಡಿಟ್ ಕಾರ್ಡ್ಗಳ ಒಟ್ಟು ಅನುಪ್ಪಾದಕ ಆಸ್ತಿ ಶೇ. 3.56ರಷ್ಟಿತ್ತು. 2022ರ ಮಾರ್ಚ್ನಲ್ಲಿ ಇದು ಶೇ. 1.91ಕ್ಕೆ ಇಳಿದಿತ್ತು. ಈಗ 2023ರ ಮಾರ್ಚ್ ತಿಂಗಳಲ್ಲಿ ಶೇ. 1.94ರಕ್ಕೆ ಏರಿದೆ. ಆದರೆ, ಬ್ಯಾಂಕುಗಳ ಅನುಪತ್ಪಾದಕ ಆಸ್ತಿಗೆ ಹೋಲಿಸಿದರೆ ಕ್ರೆಡಿಟ್ ಕಾರ್ಡ್ನ ಕೆಟ್ಟ ಸಾಲದ ಪ್ರಮಾಣ ಕಡಿಮೆ ಇದೆ. ಮಾಹಿತಿ ಪ್ರಕಾರ, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕಗಳ ಸಮಗ್ರ ಅನುತ್ಪಾದಕ ಸಾಲದ (ಜಿಎನ್ಪಿಎ) ಪರಿಮಾಣ ಶೇ. 3.87ರಷ್ಟಿದೆ.
ಬಾಕಿ ಉಳಿದ ಕ್ರೆಡಿಟ್ ಕಾರ್ಡ್ ಬಿಲ್ 2 ಲಕ್ಷ ಕೋಟಿಗೂ ಹೆಚ್ಚು
ಮೇಲಿನದ್ದು ಕ್ರೆಡಿಟ್ ಕಾರ್ಡ್ ಕಂಪನಿಗಳು ಘೋಷಿಸಿದ ಎನ್ಪಿಎಗಳ ವಿವರ. ಆದರೆ, ಒಟ್ಟಾರೆ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಬಾಕಿ ಇರುವ ಮೊತ್ತ ಬಹಳ ದೊಡ್ಡದಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಅವರು ರಾಜ್ಯಸಭೆಗೆ ಸಲ್ಲಿಸಿದ ಲಿಖಿತ ಉತ್ತರದ ಪ್ರಕಾರ, 2023ರ ಮಾರ್ಚ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಮೊತ್ತ 2.10 ಲಕ್ಷ ಕೋಟಿ ರೂ ಇದೆ. 2022ರ ಮಾರ್ಚ್ ತಿಂಗಳಲ್ಲಿ ಇದು 1.64 ಲಕ್ಷ ಕೋಟಿ ರೂ ಇತ್ತು ಎಂದು ಹೇಳಲಾಗಿದೆ.
ಬ್ಯಾಂಕಿಂಗ್ ವಂಚನೆ ಪ್ರಕರಣಗಳು
ಫೋರ್ಜರಿ, ನಕಲಿ ದಾಖಲೆ ಇತ್ಯಾದಿ ವಂಚನೆ ಪ್ರಕರಣಗಳು ಬ್ಯಾಂಕ್ ವಲಯದಲ್ಲಿ ನಡೆಯುತ್ತವೆ. ಸಹಕಾರಿ ಬ್ಯಾಂಕುಗಳು ವರದಿ ಮಾಡಿರುವ ಪ್ರಕಾರ 2023ರ ಹಣಕಾಸು ವರ್ಷದಲ್ಲಿ ಇಂಥ 964 ಪ್ರಕರಣಗಳು ಜರುಗಿದ್ದು 791.40 ಕೋಟಿ ರೂನಷ್ಟು ವಂಚನೆಯಾಗಿದೆ.
ಹಾಗೆಯೆ, 2021-22ರ ಹಣಕಾಸು ವರ್ಷದಲ್ಲಿ 721 ಪ್ರಕರಣಗಳಲ್ಲಿ 566.59 ಕೋಟಿ ರೂ ವಂಚನೆ; 2020-21ರ ಹಣಕಾಸು ವರ್ಷದಲ್ಲಿ 438 ಪ್ರಕರಣಗಳಲ್ಲಿ 1,985.79 ಕೋಟಿ ರೂನಷ್ಟು ವಂಚನೆ ಆಗಿದೆ ಎಂದು ಸಹಕಾರಿ ಬ್ಯಾಂಕುಗಳು ಆರ್ಬಿಐಗೆ ಮಾಹಿತಿ ನೀಡಿರುವ ಸಂಗತಿಯನ್ನು ಕೇಂದ್ರ ಸಚಿವರು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ