
ನವದೆಹಲಿ, ಫೆಬ್ರುವರಿ 7: ಸೋಷಿಯಲ್ ಮೀಡಿಯಾದಲ್ಲಿ ಹಣಕಾಸು ಮತ್ತು ಟ್ರೇಡಿಂಗ್ ಸಲಹೆಗಳನ್ನು ನೀಡುತ್ತಾ ಖ್ಯಾತರಾಗಿರುವ ಫಿನ್ಫ್ಲುಯನ್ಸರುಗಳ ಉಪಟಳ ಯದ್ವಾತದ್ವ ಏರುತ್ತಿದೆ. ವಿಡಿಯೋಗಳನ್ನು ಮಾಡುವುದಷ್ಟೇ ಅಲ್ಲ, ಟ್ರೇಡಿಂಗ್ ಸೀಕ್ರೆಟ್ ಕಲಿಸಿಕೊಡುವ ಕೋರ್ಸ್ಗಳನ್ನು ನೀಡುತ್ತಿರುವುದಾಗಿ ಹೇಳಿ ಅಮಾಯಕ ಜನರಿಂದ ಹಣ ಲೂಟಿ ಮಾಡುತ್ತಿರುವವರು ಬಹಳ ಇದ್ದಾರೆ. ಇಂಥವರಲ್ಲಿ ಅಸ್ಮಿತಾ ಜಿತೇಶ್ ಪಟೇಲ್ ಒಬ್ಬರು. ಕೋರ್ಸ್ಗಳನ್ನು ಆಫರ್ ಮಾಡಿ ಈಕೆ ಹೂಡಿಕೆದಾರರಿಂದ 104 ಕೋಟಿ ರೂ ಗಳಿಸಿದ್ದಾಳೆ. ಸೆಬಿ ಈಗ ಈಕೆಗೆ ನಿಷೇಧ ಹೇರಿದೆ. 53.67 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜನರಿಂದ ಈಕೆ ಪಡೆದ ಎಲ್ಲಾ 104 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಯೋಜನೆಯಲ್ಲಿದೆ.
ಕೋರ್ಸ್ ಹೆಸರಿನಲ್ಲಿ ಈಕೆ ಹೂಡಿಕೆ ಸಲಹೆಗಳನ್ನು ನೀಡುತ್ತಿರುವ ಆರೋಪ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಲಹೆಗಳನ್ನು ನೀಡಬೇಕಾದರೆ ಸೆಬಿಯಲ್ಲಿ ನೊಂದಾಯಿಸಿರಬೇಕು. ಅದರೆ, ಅಸ್ಮಿತಾ ಪಟೇಲ್ ಹಾಗು ಆಕೆಯ ಯಾವ ಸಂಸ್ಥೆಗಳೂ ಕೂಡ ಸೆಬಿ ನೊಂದಾಯಿತ ಅಡ್ವೈಸರ್ಗಳಲ್ಲ. ಹೀಗಾಗಿ, ಸೆಬಿ ಅಸ್ಮಿತಾರನ್ನು ಟ್ರೇಡಿಂಗ್ ಮಾಡದಂತೆ ನಿಷೇಧಿಸಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಇನ್ಫೋಸಿಸ್ನಿಂದ ನೂರಾರು ಉದ್ಯೋಗಿಗಳ ಲೇ ಆಫ್; ಎರಡು ವರ್ಷ ಸತಾಯಿಸಿ ನೇಮಕಗೊಂಡಿದ್ದ ಫ್ರೆಷರ್ಸ್ಗೆ ಶಾಕ್
ಅಸ್ಮಿತಾ ಜಿತೇಶ್ ಪಟೇಲ್ ಸ್ಟಾಕ್ ಮಾರ್ಕೆಟ್ನ ‘ಶೀ ವುಲ್ಫ್’ ಮತ್ತು ‘ಆಪ್ಷನ್ಸ್ ಕ್ವೀನ್’ ಎಂದು ಹೆಸರಾಗಿದ್ದಾಳೆ. ಈಕೆಯ ಯೂಟ್ಯೂಬ್ ಚಾನಲ್ಗೆ 5.26 ಲಕ್ಷ ಸಬ್ಸ್ಕ್ರೈಬರ್ಸ್ ಇದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 2.90, ಫೇಸ್ಬುಕ್ನಲ್ಲಿ 73,000, ಎಕ್ಸ್ನಲ್ಲಿ 4,200 ಫಾಲೋಯರ್ಸ್ ಇದ್ದಾರೆ. ಈಕೆಯ ಲಿಂಕ್ಡ್ಇನ್ನಲ್ಲಿ 1,900 ಕನೆಕ್ಷನ್ಸ್ ಇದ್ದಾರೆ.
ಅಸ್ಮಿತಾಪಟೇಲ್ ಡಾಟ್ ಕಾಂ (asmitapatel.com) ಎನ್ನುವ ವೆಬ್ಸೈಟ್ ಕೂಡ ಈಕೆ ಹೊಂದಿದ್ದು, ಅದರಲ್ಲಿ ವಿವಿಧ ಟ್ರೇಡಿಂಗ್ ಕೋರ್ಸ್ಗಳನ್ನು ಆಫರ್ ಮಾಡಲಾಗುತ್ತಿದೆ. ಈ ಕೋರ್ಸ್ ಪಡೆದವರಿಗೆ ನಿರ್ದಿಷ್ಟ ಸಂಸ್ಥೆಯಲ್ಲಿ ಟ್ರೇಡಿಂಗ್ ಅಕೌಂಟ್ ತೆರೆಯಬೇಕೆಂದು ತಿಳಿಸಲಾಗುತ್ತದೆ. ಬಳಿಕ, ನಿರ್ದಿಷ್ಟಪಡಿಸಲಾದ ಷೇರುಗಳನ್ನು ಟ್ರೇಡಿಂಗ್ ಮಾಡುವಂತೆ ತಿಳಿಸಲಾಗುತ್ತದೆ. ಟೆಲಿಗ್ರಾಂ ಗ್ರೂಪ್ಗಳನ್ನು ಮಾಡಿ ಅಲ್ಲಿ ಸ್ಟಾಕ್ ಟಿಪ್ಸ್ ಕೊಡಲಾಗುತ್ತದೆ.
ಇದನ್ನೂ ಓದಿ: ರತನ್ ಟಾಟಾ ಉಯಿಲಿನಲ್ಲಿ ‘ನಿಗೂಢ’ ವ್ಯಕ್ತಿ ಮೋಹಿನಿ; ಟಾಟಾ ಫ್ಯಾಮಿಲಿ ಸದಸ್ಯರಿಗೇ ಅಚ್ಚರಿ
ಸೆಬಿ ಇತ್ತೀಚೆಗೆ ಈ ರೀತಿ ಅಕ್ರಮವಾಗಿ ಹೂಡಿಕೆ ಸಲಹೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದೆ. ಬಾಪ್ ಕಾ ಚಾರ್ಟ್ ಎಂದು ಖ್ಯಾತರಾಗಿದ್ದ ಮತ್ತೊಬ್ಬ ಇನ್ಫ್ಲುಯನ್ಸರ್ ನಸೀರುದ್ದೀನ್ ಅನ್ಸಾರಿ ಎನ್ನುವ ವ್ಯಕ್ತಿಯ ಮೇಲೆ ಸೆಬಿ ಕ್ರಮ ತೆಗೆದುಕೊಂಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ