Closing Bell: ಸತತ ಮೂರನೇ ದಿನ ಷೇರುಪೇಟೆ ಇಳಿಕೆ; ಹೂಡಿಕೆದಾರರಿಗೆ 3 ದಿನದಲ್ಲಿ 6.56 ಲಕ್ಷ ಕೋಟಿ ರೂಪಾಯಿ ನಷ್ಟ

ಷೇರು ಮಾರುಕಟ್ಟೆ ಹೂಡಿಕೆದಾರರು ಕಳೆದ ಮೂರು ದಿನದಲ್ಲಿ ರೂ. 6.56 ಲಕ್ಷ ಕೋಟಿ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಸೆನ್ಸೆಕ್ಸ್ 1800 ಪಾಯಿಂಟ್ಸ್​ನಷ್ಟು ಇಳಿಕೆ ಕಂಡಿದೆ.

Closing Bell: ಸತತ ಮೂರನೇ ದಿನ ಷೇರುಪೇಟೆ ಇಳಿಕೆ; ಹೂಡಿಕೆದಾರರಿಗೆ 3 ದಿನದಲ್ಲಿ 6.56 ಲಕ್ಷ ಕೋಟಿ ರೂಪಾಯಿ ನಷ್ಟ
ಸಾಂದರ್ಭಿಕ ಚಿತ್ರ
Edited By:

Updated on: Jan 20, 2022 | 5:12 PM

ಭಾರತದ ಷೇರು ಮಾರುಕಟ್ಟೆ (Indian Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ಮೂರನೇ ದಿನವಾದ ಜನವರಿ 20ನೇ ತಾರೀಕಿನ ಗುರುವಾರ ಕೂಡ ಭಾರೀ ಕುಸಿತ ಕಂಡಿದೆ. ಲಾಭದ ನಗದೀಕರಣ ಮಾಡಿಕೊಂಡಿದ್ದರಿಂದ ಈ ಬೆಳವಣಿಗೆ ಆಗಿದೆ. ಈ ಮೂರು ದಿನದಲ್ಲಿ ಬಿಎಸ್​ಇ ಸೆನ್ಸೆಕ್ಸ್ 1800 ಪಾಯಿಂಟ್ಸ್​ನಷ್ಟು ನೆಲ ಕಚ್ಚಿದೆ. ಗುರುವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 634.20 ಪಾಯಿಂಟ್ಸ್ ಅಥವಾ ಶೇ 1.06ರಷ್ಟು ಕುಸಿದು, 59,464.62 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾ ಮಾಡಿತು. ನಿಫ್ಟಿ ಸೂಚ್ಯಂಕವು 181.40 ಪಾಯಿಂಟ್ಸ್ ಅಥವಾ ಶೇ 1.01ರಷ್ಟು ನೆಲ ಕಚ್ಚಿ, 17,757 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಮುಗಿಸಿತು. ಇಂದಿನ ವಹಿವಾಟಿನಲ್ಲಿ 1593 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1606 ಕಂಪೆನಿಯ ಷೇರುಗಳ ಬೆಲೆ ಇಳಿಕೆ ಆಯಿತು. ಇನ್ನು 64 ಕಂಪೆನಿಯ ಷೇರು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ವಿದ್ಯುತ್, ರಿಯಾಲ್ಟಿ ಹಾಗೂ ಲೋಹದ ವಲಯವನ್ನು ಹೊರತುಪಡಿಸಿ, ಉಳಿದ ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯನ್ನು ದಾಖಲಿಸಿದವು. ವಾಹನ, ಮಾಹಿತಿ ತಂತ್ರಜ್ಞಾನ, ಎಫ್​ಎಂಸಿಜಿ ಮತ್ತು ಫಾರ್ಮಾ ಸೂಚ್ಯಂಕಗಳು ಶೇ 0.8ರಿಂದ ಶೇ 1.7ರಷ್ಟು ಕುಸಿತ ಕಂಡವು. ಬಿಎಸ್​ಇ ಮಿಡ್​ಕ್ಯಾಪ್ ಅಲ್ಪ ಪ್ರಮಾಣದ ಇಳಿಕೆ ದಾಖಲಿದರೆ, ಸ್ಮಾಲ್​ಕ್ಯಾಪ್​ನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂತು. ಬಿಎಸ್​ಇ ಲಿಸ್ಟೆಡ್ ಸಂಸ್ಥೆಗಳ ಸಂಪತ್ತು 1.31 ಲಕ್ಷ ಕೋಟಿ ರೂಪಾಯಿ ಕರಗಿದ್ದು, ಮಾರುಕಟ್ಟೆ ಬಂಡವಾಳ ಮೌಲ್ಯ 273.46 ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದ ಮೂರು ದಿನದಲ್ಲಿ ಹೂಡಿಕೆದಾರರು 6.56 ಲಕ್ಷ ಕೋಟಿ ರೂಪಾಯಿ ಸಂಪತ್ತು ಕಳೆದುಕೊಂಡಿದ್ದಾರೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಪವರ್​ ಗ್ರಿಡ್ ಕಾರ್ಪೊರೇಷನ್ ಶೇ 4.89
ಭಾರ್ತಿ ಏರ್​ಟೆಲ್​ ಶೇ 1.66
ಗ್ರಾಸಿಮ್ ಶೇ 1.36
ಜೆಎಸ್​ಡಬ್ಲ್ಯು ಸ್ಟೀಲ್ ಶೇ 1.16
ಬ್ರಿಟಾನಿಯಾ ಶೇ 0.83

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಫಿನ್​ಸರ್ವ್ ಶೇ -4.53
ಬಜಾಜ್ ಆಟೋ ಶೇ -3.73
ಡಿವೀಸ್ ಲ್ಯಾಬ್ಸ್ ಶೇ -3.39
ಇನ್ಫೋಸಿಸ್ ಶೇ -2.32
ಟಿಸಿಎಸ್ ಶೇ -2.25

ಇದನ್ನೂ ಓದಿ: PTC India Financial: ಸ್ವತಂತ್ರ ನಿರ್ದೇಶಕರ ರಾಜೀನಾಮೆ ನಂತರ ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಷೇರು ಶೇ 20ರಷ್ಟು ಕುಸಿತ