Stock Market LIVE: ನಿಫ್ಟಿ -50 ಸೂಚ್ಯಂಕ 16 ಸಾವಿರ ಪಾಯಿಂಟ್ಸ್ ದಾಟಿ ದಾಖಲೆ, ಸೆನ್ಸೆಕ್ಸ್ ಕೂಡ ಹೊಸ ಎತ್ತರಕ್ಕೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ ಮಂಗಳವಾರ 16 ಸಾವಿರ ಪಾಯಿಂಟ್ಸ್ ದಾಟಿದೆ. ಸೆನ್ಸೆಕ್ಸ್ ದಾಖಲೆ ಎತ್ತರಕ್ಕೆ ಏರಿದೆ. ನಿಫ್ಟಿಯಲ್ಲಿ ಏರಿಕೆ- ಇಳಿಕೆ ದಾಖಲಾದ ಪ್ರಮುಖ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ-50 ಮಂಗಳವಾರದಂದು (ಆಗಸ್ಟ್ 3, 2021) 16 ಸಾವಿರದ ಪಾಯಿಂಟ್ ಗಡಿ ದಾಟಿದೆ. ಆ ಮೂಲಕ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಇನ್ನು ಈ ಲೇಖನ ಪ್ರಕಟಿಸುವ ಹೊತ್ತಿಗೆ ಸೆನ್ಸೆಕ್ಸ್ 508.59 ಪಾಯಿಂಟ್ ಹೆಚ್ಚಳ ಆಗಿ, 53,459.22 ಪಾಯಿಂಟ್ ಅನ್ನು ಮುಟ್ಟಿದೆ. ಆ ಮೂಲಕ ಸೆನ್ಸೆಕ್ಸ್ ಕೂಡ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿದೆ. ನಿಫ್ಟಿ ದಿನದ ಆರಂಭವು 15,951.55 ಪಾಯಿಂಟ್ನೊಂದಿಗೆ ಶುರುವಾಗಿ, ಗರಿಷ್ಠ ಮಟ್ಟವಾದ 16,025 ಪಾಯಿಂಟ್ ಅನ್ನು ತಲುಪಿತು. ಇನ್ನು ಸೆನ್ಸೆಕ್ಸ್ ಸೂಚ್ಯಂಕವು ಸೋಮವಾರದ ದಿನದ ಕೊನೆಗೆ 52,950.63 ಪಾಯಿಂಟ್ನೊಂದಿಗೆ ವಹಿವಾಟು ಮುಗಿದಿತ್ತು. ಇಂದಿನ ವ್ಯವಹಾರ 53,125.97 ಪಾಯಿಂಟ್ಸ್ನೊಂದಿಗೆ ಶುರುವಾಗಿ, ಗರಿಷ್ಠ ಮಟ್ಟವಾದ 53,478.57 ಪಾಯಿಂಟ್ಸ್ನೊಂದಿಗೆ ಸಾರ್ವಕಾಲಿಕ ಎತ್ತರವನ್ನು ತಲುಪಿದೆ.
ಬಿಎಸ್ಇಯಲ್ಲಿ 450ಕ್ಕೂ ಹೆಚ್ಚು ಕಂಪೆನಿಯ ಷೇರುಗಳು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ವಿಪ್ರೋ, ಯುನೈಟೆಡ್ ಬ್ರಿವರೀಸ್, ಟಾಟಾ ಪವರ್ ಸೇರಿದಂತೆ ಹಲವಾರು ಕಂಪೆನಿಗಳು ವಾರ್ಷಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ, ಮಿಡ್ ಮತ್ತು ಸ್ಮಾಲ್ ಕ್ಯಾಪ್ಗಳ ಸೂಚ್ಯಂಕ ಎಲ್ಲವೂ ದಾಖಲೆ ಎತ್ತರವನ್ನು ತಲುಪಿಕೊಂಡಿದ್ದು, ಗಳಿಕೆ ಓಟವನ್ನು ಮುಂದುವರಿಸಿದೆ. ಬಿಎಸ್ಇ ವಾಹನ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್, ಎಪ್ಎಂಸಿಜಿ, ಹೆಲ್ತ್ಕೇರ್, ಐಟಿ, ತೈಲ ಹಾಗೂ ಅನಿಲ, ಪವರ್, ರಿಯಾಲ್ಟಿ, ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಏರಿಕೆ ಕಂಡಿದ್ದರೆ, ಲೋಹ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕ ಇಳಿಕೆ ಕಂಡಿವೆ. ನಿಫ್ಟಿ ಲೋಹ ಹಾಗೂ ನಿಫ್ಟಿ ಮಿಡ್ 100 ಫ್ರೀ ಎರಡು ಹೊರತುಪಡಿಸಿ ಉಳಿದೆಲ್ಲ ಸೂಚ್ಯಂಕವು ನಿಫ್ಟಿಯಲ್ಲಿ ಏರಿಕೆ ಕಂಡಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಕಂಪೆನಿ ಷೇರುಗಳು ಮತ್ತು ಪರ್ಸೆಂಟ್ ಟೈಟನ್ ಕಂಪೆನಿ ಶೇ 3.84 ಎಚ್ಡಿಎಫ್ಸಿ ಶೇ 3.34 ಸನ್ ಫಾರ್ಮಾ ಶೇ 3.10 ಭಾರ್ತಿ ಏರ್ಟೆಲ್ ಶೇ 2.34 ಇಂಡಸ್ಇಂಡ್ ಬ್ಯಾಂಕ್ ಶೇ 2.14
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಕಂಪೆನಿ ಷೇರುಗಳು ಮತ್ತು ಪರ್ಸೆಂಟ್ ಗ್ರಾಸಿಮ್ ಶೇ -1.73 ಜೆಎಸ್ಡಬ್ಲ್ಯು ಸ್ಟೀಲ್ ಶೇ -1.31 ಶ್ರೀ ಸಿಮೆಂಟ್ಸ್ ಶೇ -1.02 ಬಜಾಜ್ ಆಟೋ ಶೇ -0.82 ಯುಪಿಎಲ್ ಶೇ -0.69
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
ಇದನ್ನೂ ಓದಿ: ಅಮೆರಿಕದ ಗೂಗಲ್, ಆಪಲ್ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?
(Stock Market LIVE Nifty Crosses 16000 Points Mark Sensex Hits All Time High)