ಹೈದರಾಬಾದ್: ತೆಲುಗು ಸಿನಿಮಾ ನೋಡುವವರಿಗೆ ರಾಮ್ ಚರಣ್ ಹೆಸರು ಚಿರಪರಿಚಿತ. ಅಪ್ಪ ಚಿರಂಜೀವಿ ಅವರಂತೆ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿ ರಾಮ್ ಚರಣ್ (Ram Charan) ಇದ್ದಾರೆ. ಆರ್ಆರ್ಆರ್ ಸಿನಿಮಾ ಮೂಲಕ ಜೂನಿಯರ್ ಎನ್ಟಿಆರ್ ಜೊತೆ ರಾಮಚರಣ್ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅತಿಹೆಚ್ಚು ಸಂಭಾವಣೆ ಪಡೆಯುವ ನಟರಲ್ಲಿ ಅವರೂ ಒಬ್ಬರು. ಚಲನಚಿತ್ರಗಳ ಮೂಲಕವೇ ಸಾವಿರಕ್ಕೂ ಹೆಚ್ಚು ಕೋಟಿ ರೂಗಳ ಸಂಪಾದನೆ ಮಾಡಿದ್ದಾರೆ ರಾಮಚರಣ್. ಈಗ ಅವರ ಪತ್ನಿ ಕೂಡ ಆಸ್ತಿಸಂಪಾದನೆಯಲ್ಲಿ ರಾಮಚರಣ್ಗೆ ಸರಿಸಮಾನವಾಗಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ (Upasana Kamineni) ಹೊಂದಿರುವ ಆಸ್ತಿಮೌಲ್ಯ 1,370 ಕೋಟಿ ರೂ. ಈ ಜೋಡಿಗಳ ಆಸ್ತಿ ಸೇರಿಸಿದರೆ 2,500 ಕೋಟಿಗೂ ಹೆಚ್ಚಾಗುತ್ತದೆ.
ಉಪಾಸನಾ ಕಾಮಿನೇನಿ ಉದ್ಯಮ ಕುಟುಂಬದ ಹಿನ್ನೆಲೆಯವರು ಎಂಬುದು ಇಲ್ಲಿ ಗಮನಾರ್ಹ. ಇವರ ತಾತ ಪ್ರತಾಪ್ ಸಿ ರೆಡ್ಡಿ. ಇವರ ಸಾಧನೆ ಬಗ್ಗೆ ಟಿವಿ9 ಕನ್ನಡ ಜಾಲತಾಣದಲ್ಲಿ ಹಿಂದೊಮ್ಮೆ ವರದಿ ಪ್ರಕಟಿಸಿದ್ದೆವು. ಇವರು ಅಪೋಲೋ ಆಸ್ಪತ್ರೆ ಸಮೂಹದ ಸಂಸ್ಥಾಪಕರು. ಪ್ರತಾಪ್ ರೆಡ್ಡಿಯ ಮಗಳ ಮಗಳು ಉಪಾಸನಾ ಕಾಮಿನೇನಿ. ಅಪೋಲೋ ಆಸ್ಪತ್ರೆಯ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಆಗಿರುವ ಶೋಭನಾ ಈಕೆಯ ತಾಯಿ. ಉಪಾಸನಾ ಕೂಡ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆಯಾಗಿದ್ದಾರೆ. ಅಷ್ಟೇ ಅಲ್ಲ ಹಲವು ಕಂಪನಿಗಳಲ್ಲಿ ಅವರು ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿದ್ದಾರೆ.
ಪ್ರತಾಪ್ ಸಿ ರೆಡ್ಡಿ ಅವರು ದೇಶದ ಟಾಪ್ 100 ಶ್ರೀಮಂತರಲ್ಲಿ ಒಬ್ಬರು. ಅವರ ಅಪೋಲೋ ಆಸ್ಪತ್ರೆ ಭಾರತದ ಮೊದಲ ಹಾಸ್ಟಿಟಲ್ ಚೈನ್ ಎನಿಸಿದೆ. ಅದರ ಒಟ್ಟು ಆಸ್ತಿ ಮೌಲ್ಯ 21,000 ಕೋಟಿ ರೂ ಇದೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಗೆ ಉಪಾಧ್ಯಕ್ಷೆ ಮಾತ್ರವಲ್ಲದೇ, ಬಿ ಪಾಸಿಟಿವ್ ಎಂಬ ಹೆಲ್ತ್ ಮ್ಯಾಗಝಿನ್ನ ಎಡಿಟರ್–ಇನ್–ಚೀಫ್ ಆಗಿದ್ದಾರೆ. ಹಾಗೆಯೇ, ಅವರು ಟಿಪಿಎ ಎಂಬ ಫ್ಯಾಮಿಲಿ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಆಗಿದ್ದಾರೆ.
ಇಷ್ಟು ಮಾತ್ರವಲ್ಲದೇ, ಉಪಾಸನಾ ಅವರ ತಂದೆ ಅನಿಲ್ ಕಾಮಿನೇನಿ ಸಂಸ್ಥಾಪಿಸಿದ ಕೆಇಐ ಗ್ರೂಪ್ ಎಂಬ ಕಂಪನಿಯಲ್ಲಿ ಉಪಾಸನಾ ಕೂಡ ಒಬ್ಬ ಬೋರ್ಡ್ ಸದಸ್ಯೆಯಾಗಿದ್ದಾರೆ.
ಇದನ್ನೂ ಓದಿ: Apollo Hospital Bengaluru: ಅಪೊಲೊ ಆಸ್ಪತ್ರೆಯಲ್ಲಿ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ಸು
ಪ್ರಮುಖ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದ ಉಪಾಸನಾ ಅವರು ಮೊದಮೊದಲು ಫ್ಯಾಷನ್ ಡಿಸೈನರ್ ಆಗಬೇಕೆಂದು ಆಸೆ ಪಟ್ಟಿದ್ದರು. ಆದರೆ, ತಮ್ಮ ಕುಟುಂಬದ ಉದ್ಯಮದಲ್ಲಿ ತೊಡಗಿಸಿಕೊಂಡಾಗ ಮನಸು ಬದಲಾಯಿಸಿಕೊಂಡು ಬ್ಯುಸಿನೆಸ್ ಓದಿದರು. ಇಂಟರ್ನ್ಯಾಷನಲ್ ಬ್ಯುಸಿನೆಸ್ ಮಾರ್ಕೆಟಿಂಗ್ ಅಂಡ್ ಮ್ಯಾನೇಜ್ಮೆಂಟ್ನಲ್ಲಿ ಪದವರಿ ಪಡೆದರು. ಹೀಗಾಗಿ, ತಮ್ಮ ಕುಟುಂಬದ ವಿವಿಧ ಉದ್ಯಮಗಳಲ್ಲಿ ಅವರು ಸಮರ್ಥವಾಗಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2012 ಜೂನ್ 14ರಂದು ರಾಮಚರಣ್ ಅವರನ್ನು ವಿವಾಹವಾದ ಉಪಾಸನಾಗೆ ಒಬ್ಬ ಹೆಣ್ಮಗಳಿದ್ದಾಳೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Thu, 22 June 23