ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಷೇರುಗಳು ಸೋಮವಾರ (ಅಕ್ಟೋಬರ್ 11, 2021) ಬೆಳಗ್ಗೆ ವಹಿವಾಟಿನಲ್ಲಿ ಶೇ 6ರಷ್ಟು ಕುಸಿತ ಕಂಡಿತ್ತು. ಮಾಹಿತಿ ತಂತ್ರಜ್ಞಾನ ವಲಯ ಕ್ಷೇತ್ರದ ಪ್ರಮುಖ ಕಂಪೆನಿಯಾದ ಟಿಸಿಎಸ್ ಈಚೆಗೆ ಜುಲೈನಿಂದ ಸೆಪ್ಟೆಂಬರ್ ತನಕದ ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಆದಾಯ ಮತ್ತು ಮಾರ್ಜಿನ್ ವಿಶ್ಲೇಷಕರ ಅಂದಾಜಿಗಿಂತ ಕಡಿಮೆ ಆಗಿದೆ. ಶುಕ್ರವಾರದ ದಿನದ ಕೊನೆಗೆ ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ ಬಿಎಸ್ಇಯಲ್ಲಿ 14,55,687 ಕೋಟಿ ರೂಪಾಯಿ ಇತ್ತು. ಸೋಮವಾರದ ಆರಂಭದ ಸೆಷನ್ನಲ್ಲೇ 13,62,564 ಕೋಟಿಗೆ ಬಂದು ನಿಂತಿದೆ. 2021ರ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಟಿಸಿಎಸ್ನ ಕನ್ಸಾಲಿಡೇಟೆಡ್ ಲಾಭ 9624 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಕಳೆದ ವರ್ಷ ಇದೇ ಅವಧಿಗೆ 8433 ಕೋಟಿ ರೂಪಾಯಿ ಲಾಭ ದಾಖಲಿಸಿತ್ತು. ಎಲ್ಲ ಭೂಪ್ರದೇಶ ಹಾಗೂ ವರ್ಟಿಕಲ್ಗಳಲ್ಲೂ ಬೆಳವಣಿಗೆ ದಾಖಲಿಸಿರುವುದರಿಂದ ಇಂಥದ್ದೊಂದ ಬದಲಾವಣೆ ಆಗಿದೆ. ಕಂಪೆನಿಯ EBIT ಮಾರ್ಜಿನ್ 10 ಬೇಸಿಸ್ ಪಾಯಿಂಟ್ ಸುಧಾರಣೆ ಕಂಡಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 25.6ರಷ್ಟಾಗಿದೆ. ಅದೇ ರೀತಿ ಆದಾಯವು ಸ್ಥಿರವಾದ ಕರೆನ್ಸಿ (CC) ಪರಿಭಾಷೆಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 4ರಷ್ಟು ಬೆಳವಣಿಗೆ ಕಂಡಿದೆ.
ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ ಅಂದುಕೊಂಡಂತೆಯೇ ಆದಾಯದ ಬೆಳವಣಿಗೆ ವರದಿ ಮಾಡಿದೆ. ಆದರೆ ಡಾಲರ್ ಆದಾಯದ ಬೆಳವಣಿಗೆಯು ನಮ್ಮ ಅಂದಾಜನ್ನು ತಲುಪಿಲ್ಲ. ಪೂರೈಕೆ ಕಡೆಯ ಸವಾಲುಗಳ ಕಾರಣಕ್ಕೆ EBIT ಮಾರ್ಜಿನ್ ಕೂಡ ನಮ್ಮ ಅಂದಾಜಿಗಿಂತ ಕಡಿಮೆ ಆಗಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೇಳಿದೆ. ಹಣಕಾಸು ವರ್ಷ 2022ರ ದ್ವಿತೀಯಾರ್ಧವು ಮಾರ್ಜಿನ್ಗಾಗಿ ಬಹಳ ಪ್ರಬಲವಾದ ಸೀಸನ್ ಆಗಿದೆ. ವೇತನ ಹೆಚ್ಚಳ ಮತ್ತು ಕಾರ್ಯನಿರ್ವಹಣೆ ವೆಚ್ಚದ ಹೊರತಾಗಿಯೂ ಇಂಥದ್ದೊಂದು ಬೆಳವಣಿಗೆ ನಿರೀಕ್ಷಿಸಬಹುದು. ಈಗಿನ ಪೂರೈಕೆ ಕಡೆಯ ಸವಾಲುಗಳ ಕಾರಣಕ್ಕೆ ಮುಂಬರುವ ಕೆಲ ಸಮಯ ಮಾರ್ಜಿನ್ ಕಡಿಮೆ ಆಗಬಹುದು ಎಂದು ಟಿಸಿಎಸ್ ಆಡಳಿತವೇ ಸೂಚನೆ ನೀಡಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
ಈ ಬ್ರೋಕರೇಜ್ ಸಂಸ್ಥೆಯು ಟಿಸಿಎಸ್ ಸ್ಟಾಕ್ಗೆ (ಬೆಲೆಯ ಗುರಿ 3770 ರೂಪಾಯಿ) ನ್ಯೂಟ್ರಲ್ ರೇಟಿಂಗ್ ನೀಡಿದೆ. ಕಂಪೆನಿಯ ಬಗ್ಗೆ ಸಕಾರಾತ್ಮಕ ಆಗಿದ್ದರೂ ಪ್ರಬಲ ಬೆಳವಣಿಗೆಯ ಬಾಹ್ಯ ನೋಟ ನೀಡಿದ್ದರೂ ಹೆಚ್ಚಿನ ಮೌಲ್ಯಮಾಪನದ ಕಾರಣಕ್ಕೆ ಇಲ್ಲಿಂದ ಬೆಲೆ ಹೆಚ್ಚು ಮೇಲೆ ಹೋಗುವ ಅವಕಾಶಗಳಿಲ್ಲ ಎನ್ನಲಾಗಿದೆ. ಟಿಸಿಎಸ್ನಲ್ಲಿ ಕೆಲಸ ಬಿಡುವವರ ಪ್ರಮಾಣ ಜೂನ್ ತ್ರೈಮಾಸಿಕದಲ್ಲಿ ಶೇ 8.6ರಷ್ಟು ಇದ್ದದ್ದು ಶೇ 11.9ಕ್ಕೆ ಹೆಚ್ಚಳವಾಗಿದೆ. ಮುಂದಿನ ಎರಡರಿಂದ ಮೂರು ತ್ರೈಮಾಸಿಕಗಳಲ್ಲಿ ಈ ಪ್ರಮಾಣ ಹೆಚ್ಚಿರುವ ಸಾಧ್ಯತೆಗಳಿರುತ್ತವೆ ಎಂದು ಕಂಪೆನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ತಿಳಿಸಿದ್ದಾರೆ. ಶುಕ್ರವಾರದ ದಿನಾಂತ್ಯದ ವಹಿವಾಟು ವೇಳೆ ಟಿಸಿಎಸ್ ಷೇರು ಒಂದಕ್ಕೆ 3,935.30 ರೂಪಾಯಿ ಇತ್ತು. ಇಂದಿನ (ಸೋಮವಾರ) ವ್ಯವಹಾರ ಶುರು ಮಾಡಿದ್ದು ರೂ. 3797ಕ್ಕೆ. ದಿನದ ಕನಿಷ್ಠ ಮಟ್ಟ ಎಂದು 3660 ರೂಪಾಯಿ ಮುಟ್ಟಿತು. ಈ ವರದಿ ಪ್ರಕಟ ಮಾಡುವ ಹೊತ್ತಿಗೆ ಬಿಎಸ್ಇಯಲ್ಲಿ ಪ್ರತಿ ಷೇರಿಗೆ ಶೇ 5.47ರಷ್ಟು 3,720 ರೂಪಾಯಿಯಂತೆ ವಹಿವಾಟು ನಡೆಸುತ್ತಿತ್ತು.
(ಈ ಲೇಖನದಲ್ಲಿ ಪ್ರಕಟವಾಗಿರುವ ಅಭಿಪ್ರಾಯ ಆಯಾ ಬ್ರೋಕರೇಜ್ ಸಂಸ್ಥೆಗಳದೇ ವಿನಾ ಟಿವಿ9 ನೆಟ್ವರ್ಕ್ಗೆ ಸಂಬಂಧವಿಲ್ಲ. ಇದರ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಆಗುವ ನಷ್ಟಕ್ಕೆ ಆಯಾ ಹೂಡಿಕೆದಾರರೇ ಹೊಣೆ. ಹೂಡಿಕೆ ನಿರ್ಧಾರಗಳು ಹಣಕಾಸಿನ ಅಪಾಯವನ್ನು ಒಳಗೊಂಡಿರುತ್ತವೆ. ಆದ್ದರಿಂದ ತಜ್ಞರ ಸಲಹೆ ಪಡೆದು, ವಯಕ್ತಿಕವಾಗಿ ನಿರ್ಧಾರ ಕೈಗೊಳ್ಳಿ.)
ಇದನ್ನೂ ಓದಿ: Tata Consultancy Services: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಒಪ್ಪಂದ ವಿಸ್ತರಣೆ ಮಾಡಿಕೊಂಡ ಟಿಸಿಎಸ್