Air India: ಏರ್​ ಇಂಡಿಯಾ ಎಂಡಿ, ಸಿಇಒ ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ಘೋಷಿಸಿದ ಟಾಟಾ ಸನ್ಸ್

ಕ್ಯಾಂಪ್​ಬೆಲ್ ವಿಲ್ಸನ್ ಅವರನ್ನು ಏರ್​ ಇಂಡಿಯಾದ ಎಂಡಿ ಹಾಗೂ ಸಿಇಒ ಆಗಿ ಟಾಟಾ ಸನ್ಸ್ ನೇಮಕ ಮಾಡಿರುವುದಾಗಿ ಘೋಷಣೆ ಮಾಡಲಾಗಿದೆ. ​

Air India: ಏರ್​ ಇಂಡಿಯಾ ಎಂಡಿ, ಸಿಇಒ ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ಘೋಷಿಸಿದ ಟಾಟಾ ಸನ್ಸ್
ಸಾಂದರ್ಭಿಕ ಚಿತ್ರ
Updated By: Srinivas Mata

Updated on: May 12, 2022 | 6:17 PM

ಕಡಿಮೆ ಪ್ರಯಾಣ ದರದ ಏರ್‌ಲೈನ್ “ಸ್ಕೂಟ್‌”ನ ಸಂಸ್ಥಾಪಕ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಟಾಟಾ ಸನ್ಸ್​ನಿಂದ ಮೇ 12ನೇ ತಾರೀಕಿನಂದು ಏರ್ ಇಂಡಿಯಾದ (Air India) ಮ್ಯಾನೇಜಿಂಗ್ ಡೈರೆಕ್ಟರ್ (ಎಂ.ಡಿ.) ಮತ್ತು ಸಿಇಒ ಆಗಿ ನೇಮಿಸಲಾಗಿದೆ ಎಂದು ಘೋಷಿಸಲಾಗಿದೆ. 50 ವರ್ಷ ವಯಸ್ಸಿನ ವಿಲ್ಸನ್ ಅವರು ಪೂರ್ಣ ಸೇವೆ ಮತ್ತು ಕಡಿಮೆ ಪ್ರಯಾಣ ದರದ ಏರ್‌ಲೈನ್‌ಗಳಲ್ಲಿ 26 ವರ್ಷಗಳ ಉದ್ಯಮ ಪರಿಣತಿಯನ್ನು ಹೊಂದಿದ್ದಾರೆ. ಜಪಾನ್, ಕೆನಡಾ ಮತ್ತು ಹಾಂಕಾಂಗ್‌ನಂತಹ ದೇಶಗಳಲ್ಲಿ ಸಿಂಗಾಪೂರ್ ಏರ್‌ಲೈನ್ಸ್ ಗುಂಪಿನಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಅವರು ಕೆಲಸ ಮಾಡಿದ್ದಾರೆ. 1996ರಲ್ಲಿ ನ್ಯೂಜಿಲೆಂಡ್‌ನಲ್ಲಿ SIA ಜತೆಗೆ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದರು. ಇಲ್ಲಿ ಉಲ್ಲೇಖ ಮಾಡಬೇಕಾದ ಸಂಗತಿಯೆಂದರೆ, ಟಾಟಾ ಒಡೆತನದ ವಿಮಾನಯಾನ ಸಂಸ್ಥೆಯಾದ ವಿಸ್ತಾರಾದಲ್ಲಿ SIA ಪಾಲುದಾರ ಆಗಿದೆ.

ಆ ನಂತರ ಅವರು ಕೆನಡಾ, ಹಾಂಕಾಂಗ್ ಮತ್ತು ಜಪಾನ್‌ನಲ್ಲಿ SIAಗಾಗಿ ಕೆಲಸ ಮಾಡಿದರು. 2011ರಲ್ಲಿ ಸಿಂಗಾಪೂರಕ್ಕೆ ಹಿಂದಿರುಗುವ ಮೊದಲು ಸಿಂಗಾಪೂರ್ ಏರ್‌ಲೈನ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಸ್ಕೂಟ್‌ನ ಸಂಸ್ಥಾಪಕ ಸಿಇಒ ಆಗಿ 2016ರವರೆಗೆ ಮುನ್ನಡೆಸಿದರು. ಆ ನಂತರ ಅವರು SIAಗೆ (ಮಾರಾಟ ಮತ್ತು ಮಾರ್ಕೆಟಿಂಗ್) ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್ 2020ರಲ್ಲಿ ಅವರು ಸ್ಕೂಟ್‌ನ ಸಿಇಒ ಆಗಿ ಎರಡನೇ ಅವಧಿಗೆ ಹಿಂತಿರುಗುವ ಮೊದಲು ಎಸ್​ಐಎಯಲ್ಲಿ ಬೆಲೆ, ವಿತರಣೆ, ಇ-ಕಾಮರ್ಸ್, ವ್ಯಾಪಾರ, ಬ್ರ್ಯಾಂಡ್ ಮತ್ತು ಮಾರ್ಕೆಟಿಂಗ್, ಜಾಗತಿಕ ಮಾರಾಟ ಮತ್ತು ಏರ್‌ಲೈನ್‌ನ ವಿದೇಶೀ ಕಚೇರಿಗಳನ್ನು ಮೇಲ್ವಿಚಾರಣೆ ಮಾಡಿದರು.

ವಿಲ್ಸನ್ ಅವರು ನ್ಯೂಜಿಲೆಂಡ್‌ನ ಕ್ಯಾಂಟರ್​ಬರಿ ವಿಶ್ವವಿದ್ಯಾಲಯದಿಂದ ಬಿಜಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಾಸ್ಟರ್ ಆಫ್ ಕಾಮರ್ಸ್ (ಪ್ರಥಮ ದರ್ಜೆ ಆನರ್ಸ್) ಪಡೆದಿದ್ದಾರೆ. ಟರ್ಕಿಶ್ ಏರ್‌ಲೈನ್ಸ್ ಮುಖ್ಯಸ್ಥ ಇಲ್ಕರ್ ಅಯ್ಸಿ ಅವರನ್ನು ಟಾಟಾದಿಂದ ಮೊದಲಿಗೆ ಏರ್ ಇಂಡಿಯಾ ಸಿಇಒ ಆಗಿ ನೇಮಿಸಲಾಯಿತು. ಆದರೆ ಅವರು ಮಾರ್ಚ್ 1ರಂದು ಈ ಪ್ರಸ್ತಾಪವನ್ನು ನಿರಾಕರಿಸಿದರು.

ನೇಮಕಾತಿ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾದ ಅಧ್ಯಕ್ಷ ಎನ್ ಚಂದ್ರಶೇಖರನ್, “ಕ್ಯಾಂಪ್​ಬೆಲ್ ಅನ್ನು ಏರ್ ಇಂಡಿಯಾಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಅವರು ಉದ್ಯಮದ ಅನುಭವಿಯಾಗಿದ್ದು, ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಅನೇಕ ಕಾರ್ಯಗಳಲ್ಲಿ ಭಾಗಿ ಆಗಿದ್ದಾರೆ. ಅಲ್ಲದೆ, ಏಷ್ಯಾದಲ್ಲಿ ಏರ್‌ಲೈನ್ ಬ್ರ್ಯಾಂಡ್ ಅನ್ನು ರೂಪಿಸಿದ ಅವರ ಹೆಚ್ಚುವರಿ ಅನುಭವದಿಂದ ಏರ್ ಇಂಡಿಯಾ ಪ್ರಯೋಜನ ಪಡೆಯುತ್ತದೆ. ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯನ್ನು ನಿರ್ಮಿಸುವಲ್ಲಿ ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ,” ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಂಪ್‌ಬೆಲ್ ವಿಲ್ಸನ್, “ಏರ್ ಇಂಡಿಯಾವನ್ನು ಮುನ್ನಡೆಸಲು ಮತ್ತು ಗೌರವಾನ್ವಿತ ಟಾಟಾ ಗ್ರೂಪ್‌ನ ಭಾಗವಾಗಲು ಆಯ್ಕೆ ಆಗಿರುವುದು ಗೌರವವಾಗಿದೆ. ಏರ್ ಇಂಡಿಯಾ ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಲು ಬೇಕಾದ ಪ್ರೋತ್ಸಾಹ ಪಡೆಯುವ ಮಾರ್ಗದಲ್ಲಿದೆ. ಭಾರತೀಯರ ಬೆಚ್ಚನೆಯ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸುವ ವಿಶಿಷ್ಟ ಗ್ರಾಹಕ ಅನುಭವದೊಂದಿಗೆ ವಿಶ್ವ ದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತದೆ. ಆ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ಉದ್ದೇಶದಲ್ಲಿ ಏರ್ ಇಂಡಿಯಾ ಮತ್ತು ಟಾಟಾ ಸಹೋದ್ಯೋಗಿಗಳೊಂದಿಗೆ ಸೇರಲು ನಾನು ಉತ್ಸುಕನಾಗಿದ್ದೇನೆ,” ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: N Chandrasekharan: ಏರ್​ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ಎನ್​ ಚಂದ್ರಶೇಖರನ್ ನೇಮಕ​