ನವದೆಹಲಿ, ಮಾರ್ಚ್ 20: ಜಾಗತಿಕವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಹಿಡಿತಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಓಪನ್ಎಐನಿಂದ (OpenAI) ಆರಂಭವಾದ ಎಐ ಟೆಕ್ನಾಲಜಿ ಪೈಪೋಟಿಯಲ್ಲಿ ಮೈಕ್ರೋಸಾಫ್ಟ್, ಗೂಗಲ್ ಇತ್ಯಾದಿ ಹಲವು ದಿಗ್ಗಜ ಸಂಸ್ಥೆಗಳಿವೆ. ಈ ಕಠಿಣ ಸ್ಪರ್ಧೆಯಲ್ಲಿ ಉಳಿಯಲು ಮೈಕ್ರೋಸಾಫ್ಟ್ ಮಹತ್ವದ ಹೆಜ್ಜೆ ಇರಿಸಿದೆ. ಗೂಗಲ್ನ ಮಾಜಿ ಎಐ ತಂತ್ರಜ್ಞಾನ ನಿಪುಣ ಎನಿಸಿರುವ ಮುಸ್ತಫಾ ಸುಲೇಮಾನ್ (Mustafa Suleyman) ಅವರನ್ನು ಮೈಕ್ರೋಸಾಫ್ಟ್ ನೇಮಕ ಮಾಡಿಕೊಂಡಿದೆ. ಮೈಕ್ರೋಸಾಫ್ಟ್ನ ಎಐ ಕನ್ಸೂಮರ್ ಬಿಸಿನೆಸ್ ತಂಡವನ್ನು ಸುಲೇಮಾನ್ ಮುನ್ನಡೆಸಲಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರಿಗೆ ರಿಪೋರ್ಟ್ ಮಾಡಲಿರುವ ಮುಸ್ತಫಾ ಅವರು ಮೈಕ್ರೋಸಾಫ್ಟ್ ಎಐಗೆ ಸಿಇಒ ಆಗಿ ಪದವಿ ಪಡೆಯಲಿದ್ದಾರೆ.
‘ಮೈಕ್ರೋಸಾಫ್ಟ್ ಎಐಗೆ ಸಿಇಒ ಆಗಿ ನಾನು ಸೇರುತ್ತಿದ್ದೇನೆ. ಕೋಪೈಲಟ್, ಬಿಂಗ್, ಎಡ್ಜ್ ಇತ್ಯಾದಿ ಸೇರಿದಂತೆ ಎಲ್ಲಾ ಕನ್ಸೂಮರ್ ಎಐ ಉತ್ಪನ್ನಗಳು ಮತ್ತು ಸಂಶೋಧನೆಗಳನ್ನು ನಾನು ಮುನ್ನಡೆಸುತ್ತೇನೆ. ನನ್ನ ಸ್ನೇಹಿತ ಹಾಗೂ ದೀರ್ಘ ಕಾಲದ ಸಹವರ್ತಿ ಕರೆನ್ ಸಿಮೋನ್ಯಾನ್ ಅವರು ಚೀಫ್ ಸೈಂಟಿಸ್ಟ್ ಆಗಿರಲಿದ್ದಾರೆ. ನಮ್ಮ ತಂಡದ ಹಲವು ಪ್ರತಿಭಾನ್ವಿತರು ನಮ್ಮ ಜೊತೆ ಬರಲು ಆಯ್ದುಕೊಂಡಿದ್ದಾರೆ,’ ಎಂದು ಮುಸ್ತಫಾ ಸುಲೇಮಾನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕೇವಲ ಒಂದು ಲಕ್ಷ ಇನ್ವೆಸ್ಟ್ಮೆಂಟ್ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್ವಿಡಿಯಾ ಮ್ಯಾಜಿಕ್
ಮುಸ್ತಫಾ ಸುಲೇಮಾನ್ ಅವರ ಕುಟುಂಬ ಸಿರಿಯಾ ಮೂಲದವರು. ಅವರ ತಂದೆ ಸಿರಿಯಾದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದರೆ, ತಾಯಿ ಬ್ರಿಟನ್ ದೇಶದ ನರ್ಸ್. ಬ್ರಿಟನ್ನಲ್ಲಿ ಬೆಳೆದ ಮುಸ್ತಫಾ ಸುಲೇಮಾನ್ 19ರ ವಯಸ್ಸಿನಲ್ಲಿ ಕಾಲೇಜಿನಿಂದ ಹೊರಬಂದರು. ಆಗಲೇ ಅವರು ಬ್ರಿಟನ್ನಲ್ಲಿ ವಲಸೆ ಬಂದಿದ್ದ ಮುಸ್ಲಿಮರಿಗಾಗಿ ಮಾನಸಿಕ ಆರೋಗ್ಯ ನೆರವಿನ ಸೇವೆ ಒದಗಿಸುವ ಸಂಘಟನೆ ಕಟ್ಟಿದರು.
ಇದಾದ ಬಳಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಮುಸ್ತಫಾ ಅಡಿ ಇಟ್ಟರು. ಕಾಲೇಜಿನಲ್ಲಿ ಓದುವಾಗ ಸಹಪಾಠಿಯಾಗಿದ್ದ ಡೆಮಿಸ್ ಹಸ್ಸಾಬಿಸ್ (Demis Hassabiss) ಅವರ ಜೊತೆ ಸೇರಿ ಡೀಪ್ಮೈಂಡ್ ಟೆಕ್ನಾಲಜೀಸ್ (deepmind technologies) ಎಂಬ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆಯ (machine learning) ಕಂಪನಿಯನ್ನು ಸ್ಥಾಪಿಸಿದರು. ಎಐ ವಲಯದಲ್ಲಿ ಡೀಪ್ಮೈಂಡ್ ಬಹಳ ಹೆಸರುವಾಸಿಯಾಯಿತು. 2014ರಲ್ಲಿ ಗೂಗಲ್ ಸಂಸ್ಥೆ ಡೀಪ್ಮೈಂಡ್ ಅನ್ನು ಖರೀದಿಸಿತು.
ಇದನ್ನೂ ಓದಿ: ತಪ್ಪು ಮಾಡೋದು ತಪ್ಪಲ್ಲ, ತಿದ್ದಿಕೊಳ್ಳಕೊಳ್ಳದೇ ಇರುವುದು ತಪ್ಪು: ಯುವಕರಿಗೆ ಓಯೋ ಸಿಇಒ ಕಿವಿಮಾತು
ಬಳಿಕ ಗೂಗಲ್ನ ಡೀಪ್ಮೈಂಡ್ ವಿಭಾಗದ ಮುಖ್ಯಸ್ಥರಾಗಿ ಮುಂದುವರಿದರು. 2022ರಲ್ಲಿ ಗೂಗಲ್ ಬಿಟ್ಟು ಇನ್ಫ್ಲೆಕ್ಷನ್ ಎಐ (Inflection AI) ಎಂಬ ಹೊಸ ಎಐ ಲ್ಯಾಬ್ ಸ್ಥಾಪಿಸಿದರು. ಕಂಪ್ಯೂಟರ್ಗಳೊಂದಿಗೆ ಮಾನವರು ಸಂಭಾಷಣೆ ನಡೆಸಲು ನೆರವಾಗುವಂತಹ ಎಐ ತಂತ್ರಜ್ಞಾನದ ಮೇಲೆ ಈ ಕಂಪನಿ ಗಮನ ಹರಿಸಿದೆ. ಕಳೆದ ವರ್ಷ ಈ ಸಂಸ್ಥೆ ಪೈ (ಪರ್ಸನಲ್ ಇಂಟೆಲಿಜೆನ್ಸ್) ಎಂಬ ಚಾಟ್ಬೋಟ್ ಅನ್ನು ಬಿಡುಗಡೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ