ಹಾಜರಾತಿ ಇದ್ದರೆ ಬೋನಸ್; ವರ್ಕೌಟ್ ಆಯ್ತು ಟಿಸಿಎಸ್ ಹೊಸ ನಿಯಮ; ಶೇ. 70 ಉದ್ಯೋಗಿಗಳು ಕಚೇರಿಗೆ ಹಾಜರ್

|

Updated on: Jul 12, 2024 | 11:23 AM

Tata consultancy services quarterly variable pay: ಟಿಸಿಎಸ್​ನ ಈ ಒಂದು ನಿಯಮ ಬದಲಾವಣೆ ಬಳಿಕ ವರ್ಕ್ ಫ್ರಂ ಹೋಮ್​ನಲ್ಲಿದ್ದ ಹೆಚ್ಚಿನ ಉದ್ಯೋಗಿಗಳು ಕಚೇರಿಗೆ ಬರತೊಡಗಿದ್ದಾರೆ. ಪ್ರತೀ ಕ್ವಾರ್ಟರ್​ಗೆ ನೀಡಲಾಗುವ ವೇರಿಯಬಲ್ ಪೇ ಅಥವಾ ಬೋನಸ್ ಅನ್ನು ಹಾಜರಾತಿ ಜೊತೆ ಲಿಂಕ್ ಮಾಡಲಾಗಿತ್ತು. ಶೇ. 60ಕ್ಕಿಂತ ಕಡಿಮೆ ಹಾಜರಾತಿ ಇದ್ದವರಿಗೆ ಈ ಬೋನಸ್ ಸಿಗುವುದಿಲ್ಲ.

ಹಾಜರಾತಿ ಇದ್ದರೆ ಬೋನಸ್; ವರ್ಕೌಟ್ ಆಯ್ತು ಟಿಸಿಎಸ್ ಹೊಸ ನಿಯಮ; ಶೇ. 70 ಉದ್ಯೋಗಿಗಳು ಕಚೇರಿಗೆ ಹಾಜರ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
Follow us on

ಮುಂಬೈ, ಜುಲೈ 12: ದೇಶಲ್ಲಿ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಉದ್ಯೋಗಿಗಳನ್ನು ಕಚೇರಿಗೆ ಕರೆಸಲು ಮಾಡಿದ ಒಂದು ಉಪಾಯ ವರ್ಕೌಟ್ ಆದಂತಿದೆ. ತ್ರೈಮಾಸಿಕವಾಗಿ ಉದ್ಯೋಗಿಗಳಿಗೆ ನೀಡುವ ಬೋನಸ್ ಅಥವಾ ವೇರಿಯಬಲ್ ಪೇ ನೀತಿಯಲ್ಲಿ ಟಿಸಿಎಸ್ ಮ್ಯಾನೇಜ್ಮೆಂಟ್ ತುಸು ಬದಲಾವಣೆ ಮಾಡಿತು. ಹಾಜರಾತಿ ಆಧಾರದ ಮೇಲೆ ಈ ಕ್ವಾರ್ಟರ್ ಬೋನಸ್ ಕೊಡುವ ಹೊಸ ನೀತಿಯನ್ನು ಕಂಪನಿ ನೀಡಿತು. ಇದಾದ ಬಳಿಕ ವರ್ಕ್ ಫ್ರಂ ಹೋಮ್​ನಲ್ಲಿದ್ದ ಉದ್ಯೋಗಿಗಳಲ್ಲಿ ಶೇ. 70 ಮಂದಿ ಕಚೇರಿಗೆ ಹಾಜರಾದರು ಎಂದು ಹೇಳಲಾಗುತ್ತಿದೆ. ಟಿಸಿಎಸ್​ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಅವರು ಈ ಮಾಹಿತಿ ನೀಡಿದರು ಎಂದು ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

2023ರ ಏಪ್ರಿಲ್ ತಿಂಗಳಲ್ಲಿ ಟಿಸಿಎಸ್ ಈ ನಿಯಮ ಜಾರಿಗೆ ತಂದಿತು. ಕಚೇರಿಯಲ್ಲಿ ಶೇ. 60ಕ್ಕಿಂತ ಕಡಿಮೆ ಹಾಜರಾತಿ ಇರುವ ಉದ್ಯೋಗಿಗಳಿಗೆ ಕ್ವಾರ್ಟರ್ ಬೋನಸ್ ಸಿಗುವುದಿಲ್ಲ ಎಂದು ತಿಳಿಸಲಾಗಿತ್ತು. ಜೊತೆಗೆ, ಎಷ್ಟು ಹಾಜರಾತಿ ಆಧಾರದ ಮೇಲೆ ಬೋನಸ್ ಕೊಡಲು ಸ್ಲ್ಯಾಬ್​ಗಳನ್ನು ನಿಗದಿ ಮಾಡಲಾಯಿತು. ಶೇ. 85ಕ್ಕಿಂತ ಹೆಚ್ಚಿನ ಹಾಜರಾತಿ ಇದ್ದವರಿಗೆ ಪೂರ್ಣ ಬೋನಸ್; ಶೇ. 75ರಿಂದ 85ರಷ್ಟು ಹಾಜರಾತಿ ಇದ್ದವರಿಗೆ ಶೇ. 75ರಷ್ಟು ಬೋನಸ್; ಮತ್ತು ಶೇ. 60ರಿಂದ 75ರಷ್ಟು ಹಾಜರಾತಿ ಇರುವವರಿಗೆ ಶೇ. 50ರಷ್ಟು ಬೋನಸ್ ಕೊಡುವುದೆಂದು ಹೇಳಲಾಯಿತು.

ಇದನ್ನೂ ಓದಿ: ಮಿಲಿಟರಿ ಸೇವೆಯ ಅಗ್ನಿಪಥ್ ಸ್ಕೀಮ್ ನಿಲ್ಲಿಸುವ ಯೋಚನೆ ಸರ್ಕಾರಕ್ಕಿಲ್ಲ; ಬಜೆಟ್​ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ

ಇದಾದ ಬಳಿಕ ಕಚೇರಿಗೆ ಬಂದು ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ‘ಇವತ್ತು ಶೇ. 70ರಷ್ಟು ಉದ್ಯೋಗಿಗಳು ಕಚೇರಿಗೆ ಮರಳಿದ್ದಾರೆ. ಕಚೇರಿಗೆ ಎಷ್ಟು ಮಂದಿ ಬರುತ್ತಿದ್ದಾರೆ ಎನ್ನುವ ಚಿಂತೆ ಈಗ ಉಳಿದಿಲ್ಲ. ಕಚೇರಿಗೆ ಬಂದು ಕೆಲಸ ಮಾಡುವುದರ ಮಹತ್ವ ಜನರಿಗೆ ಅರಿವಾಗತೊಡಗಿದೆ,’ ಎಂದು ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

ಕೋವಿಡ್ ವೇಳೆ ಟಿಸಿಎಸ್ ಸೇರಿದವರು ಕಚೇರಿಗೆ ಬಂದೇ ಇಲ್ಲವಾ?

ಅಚ್ಚರಿಯ ಸಂಗತಿ ಎಂದರೆ ಟಿಸಿಎಸ್​ನಲ್ಲಿರುವ ಉದ್ಯೋಗಿಗಳ ಪೈಕಿ ಶೇ. 40ರಷ್ಟು ಜನರು ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ನೇಮಕವಾಗಿರುವವರು. ಇವರು ಇಲ್ಲಿಯವರೆಗೆ ಕಚೇರಿಗೆ ಬಂದು ಕೆಲವನ್ನೇ ಮಾಡಿಲ್ಲವಂತೆ. ಮೂರ್ನಾಲ್ಕು ವರ್ಷದಿಂದಲೂ ವರ್ಕ್ ಫ್ರಂ ಹೋಮ್​ನಲ್ಲೇ ಇದ್ದಾರೆ.

ಇದನ್ನೂ ಓದಿ: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ

ಟಿಸಿಎಸ್ ಆದಾಯ ಏರಿಕೆ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ತ್ರೈಮಾಸಿಕ ವರದಿ ನಿನ್ನೆ ಗುರುವಾರ (ಜುಲೈ 11) ಬಿಡುಗಡೆ ಆಗಿದೆ. ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ 12,040 ಕೋಟಿ ರೂ ನಿವ್ವಳ ಲಾಭ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 11,074 ಕೋಟಿ ರೂ ಇತ್ತು. ಲಾಭದಲ್ಲಿ ಶೇ. 9ರಷ್ಟು ಏರಿಕೆ ಆಗಿದೆ.

ಈ ಮಧ್ಯೆ ಪ್ರತೀ ಈಕ್ವಿಟಿ ಷೇರಿಗೆ ಟಿಸಿಎಸ್ ಮಂಡಳಿ 10 ರೂ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ. ಈ ಹಣವನ್ನು ಷೇರುದಾರರ ಖಾತೆಗೆ ಆಗಸ್ಟ್ 5ರಂದು ಜಮೆ ಮಾಡಲಾಗುತ್ತದೆ. ಟಿಸಿಎಸ್​ನ ಉತ್ತಮ ತ್ರೈಮಾಸಿಕ ಆದಾಯ ವರದಿ ಬಳಿಕ ಇಂದು ಅದರ ಷೇರುಬೆಲೆ ಹೆಚ್ಚಾಗುತ್ತಿದೆ. ಇಂದು ಬೆಳಗಿನ ವಹಿವಾಟಿನಲ್ಲಿ 166 ರೂನಷ್ಟು ಏರಿ ಈಗ 4,088 ರೂ ತಲುಪಿದೆ ಅದರ ಷೇರುಬೆಲೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ