AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಸಿಎಸ್​ನಲ್ಲಿ ಭರ್ಜರಿ ನೇಮಕಾತಿ; ಮೊದಲ ತ್ರೈಮಾಸಿಕದಲ್ಲಿ 9,200 ಉದ್ಯೋಗಿಗಳ ಸೇರ್ಪಡೆ; ಕಂಪನಿಯ ಆದಾಯವೂ ನಿರೀಕ್ಷೆಗಿಂತ ಹೆಚ್ಚು

Tata Consultancy Services huge recruitment in June Quarter: ಭಾರತದ ಅತಿದೊಡ್ಡ ಐಟಿ ಸರ್ವಿಸ್ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಳೆದ ಬಾರಿಯ ಕ್ವಾರ್ಟರ್​ನಲ್ಲಿ ಭರ್ಜರಿ ನೇಮಕಾತಿ ಮಾಡಿದೆ. ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ 9,200 ನಿವ್ವಳ ನೇಮಕಾತಿಯಾಗಿದೆ. ಇದೇ ಅವಧಿಯಲ್ಲಿ ಕಂಪನಿಯ ಆದಾಯವೂ ಕೂಡ ನಿರೀಕ್ಷೆಮೀರಿ ಹೆಚ್ಚಳ ಆಗಿದೆ.

ಟಿಸಿಎಸ್​ನಲ್ಲಿ ಭರ್ಜರಿ ನೇಮಕಾತಿ; ಮೊದಲ ತ್ರೈಮಾಸಿಕದಲ್ಲಿ 9,200 ಉದ್ಯೋಗಿಗಳ ಸೇರ್ಪಡೆ; ಕಂಪನಿಯ ಆದಾಯವೂ ನಿರೀಕ್ಷೆಗಿಂತ ಹೆಚ್ಚು
ಟಿಸಿಎಸ್‌Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2026 | 7:24 PM

Share

ಮುಖ್ಯಾಂಶಗಳು

  • ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಳೆದ ಕ್ವಾರ್ಟರ್​ನಲ್ಲಿ ಭರ್ಜರಿ ನೇಮಕಾತಿ ಮಾಡಿದೆ.
  • ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ 9,200 ನಿವ್ವಳ ನೇಮಕಾತಿಯಾಗಿದೆ.
  • ಇದೇ ಅವಧಿಯಲ್ಲಿ ಕಂಪನಿಯ ಆದಾಯವೂ ಕೂಡ ನಿರೀಕ್ಷೆಮೀರಿ ಹೆಚ್ಚಳ ಆಗಿದೆ.

ನವದೆಹಲಿ, ಜುಲೈ 9: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಸವಾಲುಗಳಿದ್ದಾಗ್ಯೂ, ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಟಿಸಿಎಸ್ (TCS), ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ ಅವಧಿ) ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಕಳೆದೆರಡು ವರ್ಷಗಳಿಂದ ಐಟಿ ವಲಯದಲ್ಲಿ ಕಂಡುಬಂದಿದ್ದ ಉದ್ಯೋಗ ಕಡಿತದ ಆತಂಕದ ನಡುವೆ, ಕಂಪನಿಯು ಈ ಬಾರಿ ಭರ್ಜರಿ ಚೇತರಿಕೆ ದಾಖಲಿಸಿದೆ. ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚು ಎನ್ನುವಂತೆ, ಟಿಸಿಎಸ್ ಈ ತ್ರೈಮಾಸಿಕದಲ್ಲಿ ಒಟ್ಟು 9,279 ಉದ್ಯೋಗಿಗಳನ್ನು (Net addition) ಹೊಸದಾಗಿ ಸೇರ್ಪಡೆಗೊಳಿಸಿಕೊಂಡಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಬಲ 5,93,798 ಕ್ಕೆ ತಲುಪಿದೆ.

ಕಂಪನಿಯನ್ನು ಸ್ವಇಚ್ಛೆಯಿಂದ ಬಿಟ್ಟು ಹೋಗುವ ಟಿಸಿಎಸ್ ಉದ್ಯೋಗಿಗಳ ಪ್ರಮಾಣ (Attrition Rate) ಕಳೆದ 12 ತಿಂಗಳುಗಳಲ್ಲಿ ಶೇ. 13.6 ಕ್ಕೆ ಇಳಿಕೆಯಾಗಿದೆ. ಇದು ಕಳೆದ ತ್ರೈಮಾಸಿಕದಲ್ಲಿ ಶೇ. 13.7 ರಷ್ಟಿತ್ತು. ಸವಾಲಿನ ಸಂದರ್ಭದಲ್ಲೂ ಕಂಪನಿಯು ತನ್ನ ಎಲ್ಲಾ ಹಂತದ ಜಾಗತಿಕ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು (Salary Hike) ಯಶಸ್ವಿಯಾಗಿ ಜಾರಿಗೊಳಿಸಿದೆ.

ಟಾಟಾ ಕನ್ಸಲ್ಟೆನ್ಸಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಭವಿಷ್ಯದ ತಂತ್ರಜ್ಞಾನಗಳ ತರಬೇತಿ ನೀಡಲು ಆದ್ಯತೆ ನೀಡಿದ್ದು, ಸದ್ಯ 3,12,000ಕ್ಕೂ ಹೆಚ್ಚು ಉದ್ಯೋಗಿಗಳು ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ (ML) ತಂತ್ರಜ್ಞಾನದಲ್ಲಿ ಉನ್ನತ ಪ್ರಾವೀಣ್ಯತೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ಫೀನಿಕ್ಸ್​ನಂತೆ ಎದ್ದು ಸಂಜೆ ಠುಸ್ ಎಂದು ಕುಸಿದ ಷೇರುಬಜಾರು; ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

ಟಿಸಿಎಸ್ ಆರ್ಥಿಕ ವರದಿಯಲ್ಲಿ ನಿರೀಕ್ಷೆಮೀರಿಸಿದ ಆದಾಯ

ಉದ್ಯೋಗಿಗಳ ನೇಮಕಾತಿಯ ಜೊತೆಗೆ ಟಿಸಿಎಸ್ ಆರ್ಥಿಕವಾಗಿಯೂ ಬಲವಾದ ಸಾಧನೆ ಮಾಡಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು ಶೇ. 14 ರಷ್ಟು ಏರಿಕೆಯಾಗಿ ₹72,275 ಕೋಟಿಗೆ ತಲುಪಿದೆ. ಹಾಗೆಯೇ ಕಂಪನಿಯ ನಿವ್ವಳ ಲಾಭವು ಶೇ. 4.61 ರಷ್ಟು ಜಿಗಿತ ಕಂಡು ₹13,349 ಕೋಟಿ ದಾಖಲಿಸಿದೆ. ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹12 ರಷ್ಟು ಮಧ್ಯಂತರ ಲಾಭಾಂಶವನ್ನು (Interim Dividend) ಸಹ ಟಿಸಿಎಸ್ ಪ್ರಕಟಿಸಿದೆ.

“ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸವಾಲುಗಳ ನಡುವೆಯೂ ನಮ್ಮ ಕಂಪನಿಯು ಉತ್ತಮ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂಬುದನ್ನು ಈ ತ್ರೈಮಾಸಿಕದ ಫಲಿತಾಂಶಗಳು ಸಾಬೀತುಪಡಿಸಿವೆ,” ಎಂದು ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಕೃತಿವಾಸನ್ ತಿಳಿಸಿದ್ದಾರೆ.

ಟಿಸಿಎಸ್ (TCS) ಕಂಪನಿಯು ಜುಲೈ 9 ರಂದು ಪ್ರಕಟಿಸಿದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (Q1 FY27) ಸಂಪೂರ್ಣ ಆರ್ಥಿಕ ವಿವರಗಳು ಮತ್ತು ಲಾಭಾಂಶದ (Dividend) ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:

  • ಒಟ್ಟು ಆದಾಯ (Revenue): ₹72,275 ಕೋಟಿ (ಶೇ. 13.9 ರಷ್ಟು ಏರಿಕೆ)
  • ನಿವ್ವಳ ಲಾಭ (Net Profit): ₹13,349 ಕೋಟಿ (ಶೇ. 5 ರಷ್ಟು ಏರಿಕೆ)
  • ಕಾರ್ಯಾಚರಣೆಯ ಮಾರ್ಜಿನ್ (Operating Margin): ಶೇ. 24
  • ಒಟ್ಟು ಹೊಸ ಒಪ್ಪಂದಗಳು (TCV): $9.5 ಬಿಲಿಯನ್
  • ಕೃತಕ ಬುದ್ಧಿಮತ್ತೆ (AI) ಪ್ರಗತಿ: ಕಂಪನಿಯ ಒಟ್ಟಾರೆ AI ವ್ಯವಹಾರದ ವಾರ್ಷಿಕ ಆದಾಯದ ಪ್ರಮಾಣವು $2.6 ಬಿಲಿಯನ್ ತಲುಪಿದೆ. ಇವುಗಳಲ್ಲಿ ಸ್ವೀಡನ್‌ನ ‘SKF’ ಕಂಪನಿಯೊಂದಿಗಿನ $800 ಮಿಲಿಯನ್ ಮೌಲ್ಯದ ಬೃಹತ್ AI ಒಪ್ಪಂದವೂ ಸೇರಿದೆ.

ಇದನ್ನೂ ಓದಿ: ವಿಕಿಪೀಡಿಯಾ ಸಹ-ಸ್ಥಾಪಕನಿಗೇ ನಿಷೇಧ: ‘ಅನಾಮಧೇಯ ಗುಂಪುಗಳ’ ಕೈಯಲ್ಲಿದೆ ಜಗತ್ತಿನ ಅತಿ ದೊಡ್ಡ ಜ್ಞಾನಕೋಶ

ಟಿಸಿಎಸ್​ನ ಮಧ್ಯಂತರ ಲಾಭಾಂಶ, ರೆಕಾರ್ಡ್ ಡೇಟ್ ವಿವರ

ಟಿಸಿಎಸ್ ಮಂಡಳಿಯು ತನ್ನ ಅರ್ಹ ಷೇರುದಾರರಿಗೆ ಭರ್ಜರಿ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ.

  • ಲಾಭಾಂಶದ ಮೊತ್ತ (Dividend Amount): ಪ್ರತಿ ಈಕ್ವಿಟಿ ಷೇರಿಗೆ ₹12
  • ರೆಕಾರ್ಡ್ ಡೇಟ್ (Record Date): ಜುಲೈ 15 (ಈ ದಿನದೊಳಗೆ ಕಂಪನಿಯ ದಾಖಲಾತಿಯಲ್ಲಿ ಹೆಸರಿರುವ ಷೇರುದಾರರು ಲಾಭಾಂಶಕ್ಕೆ ಅರ್ಹರು)
  • ಹಣ ಪಾವತಿಯ ದಿನಾಂಕ (Payment Date): ಜುಲೈ 31 ರಂದು ಅಥವಾ ಅದಕ್ಕೂ ಮುಂಚಿತವಾಗಿ ಅರ್ಹರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us