Tech Layoffs: ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮೆಟಾ ಚಿಂತನೆ; ವರದಿ
ಟೆಕ್ ದೈತ್ಯ ಮೆಟಾ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಕಂಪನಿಯು ಅನೇಕ ತಂಡಗಳ ಬಜೆಟ್ ಅನ್ನು ಅಂತಿಮಗೊಳಿಸಿಲ್ಲ. ಬಜೆಟ್ ಅನ್ನು ಮುಂದೂಡಿಕೆ ಮಾಡಿದ್ದು, ಮತ್ತೊಂದು ಸುತ್ತಿನ ಉದ್ಯೋಗ ಕಡಿತದ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬ್ರಿಟನ್ನ ಮಾಧ್ಯಮವೊಂದು ವರದಿ ಮಾಡಿದೆ.
ನವದೆಹಲಿ: ಕಳೆದ ವರ್ಷ ಜಾಗತಿಕವಾಗಿ 11,000 ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಾಗಿದ್ದ ಟೆಕ್ ದೈತ್ಯ ಮೆಟಾ (Meta) ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಫೇಸ್ಬುಕ್ (Facebook) ಮಾಲೀಕತ್ವ ಹೊಂದಿರುವ ಕಂಪನಿಯು ಅನೇಕ ತಂಡಗಳ ಬಜೆಟ್ ಅನ್ನು ಅಂತಿಮಗೊಳಿಸಿಲ್ಲ. ಬಜೆಟ್ ಅನ್ನು ಮುಂದೂಡಿಕೆ ಮಾಡಿದ್ದು, ಮತ್ತೊಂದು ಸುತ್ತಿನ ಉದ್ಯೋಗ ಕಡಿತದ (Layoffs) ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬ್ರಿಟನ್ನ ಮಾಧ್ಯಮವೊಂದು ವರದಿ ಮಾಡಿದೆ. ಮುಂದಿನ ಕೆಲವೇ ವಾರಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಬಹುದು. ಬಜೆಟ್ ವಿಳಂಬಕ್ಕೆ ಇದುವೇ ಕಾರಣ ಎಂದು ಇಬ್ಬರು ಅಧಿಕೃತ ಮೂಲಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
2023ರಲ್ಲಿ ಕಂಪನಿಯ ವೆಚ್ಚಗಳು 89 ಶತಕೋಟಿ ಡಾಲರ್ಗಳಿಂದ 95 ಶತಕೋಟಿ ಡಾಲರ್ ಮಧ್ಯೆ ಇರಲಿದೆ ಎಂದು ಕೆಲವು ದಿನಗಳ ಹಿಂದೆ ಮೆಟಾ ಮಾಹಿತಿ ನೀಡಿತ್ತು. 2023 ದಕ್ಷತೆಯ ವರ್ಷವಾಗಿರಲಿದೆ ಎಂದು ಸಿಇಒ ಮಾರ್ಕ್ ಝುಕರ್ಬರ್ಗ್ ಘೋಷಿಸಿದ್ದರು. ಉದ್ಯೋಗ ಕಡಿತದ ವರದಿ ನಿಜವಾದಲ್ಲಿ ಮೆಟಾ ಮತ್ತೆ ಸಾವಿರಾರು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟೆಕ್ ಕಂಪನಿಗಳಾದ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆರ್ಥಿಕ ಅನಿಶ್ಚಿತತೆಯ ಕಾರಣ ನೀಡಿ ವೆಚ್ಚ ಉಳಿಸುವುದಕ್ಕಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಈ ಕಂಪನಿಗಳು ಹೇಳಿವೆ. ಅಮೆಜಾನ್ ಕಳೆದ ವರ್ಷ 10,000 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ನಂತರ ಉದ್ಯೋಗ ಕಡಿತವನ್ನು 18,000ಕ್ಕೆ ಹೆಚ್ಚಿಸಿತ್ತು. ಗೂಗಲ್ 2023ರ ಜನವರಿಯಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಇದನ್ನೂ ಓದಿ: Tech Layoffs: ಟೆಕ್ ಕಂಪನಿಗಳಿಂದ ಈ ವರ್ಷ 1 ಲಕ್ಷ ಉದ್ಯೋಗಿಗಳ ವಜಾ; ಯಾವ ಕಂಪನಿಯಿಂದ ಎಷ್ಟು ಮಂದಿ? ಇಲ್ಲಿದೆ ವಿವರ
ಆರ್ಥಿಕ ಪರಿಸ್ಥಿತಿಯ ಒತ್ತಡಗಳು, ಆರ್ಥಿಕ ಹಿಂಜರಿತದ ಭೀತಿಯಿಂದ ವಿಶ್ವದಾದ್ಯಂತ ತಂತ್ರಜ್ಞಾನ ಕಂಪನಿಗಳು 2023ರಲ್ಲಿ ಈವರೆಗೆ ಸುಮಾರು 1 ಲಕ್ಷ ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಲೇಆಫ್ಸ್ ಡಾಟ್ ಫೈ ದತ್ತಾಂಶಗಳಿಂದ ಕಳೆದ ವಾರ ತಿಳಿದುಬಂದಿತ್ತು.
ಕಳೆದ ವಾರವಷ್ಟೇ ಯಾಹೂ ಶೇ 20ರಷ್ಟು, ಅಂದರೆ 1,600 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಚೀನಾದ ಟಿಕ್ಟಾಕ್ ಕೂಡ ಭಾರತದ ಎಲ್ಲ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿರುವ ಬಗ್ಗೆ ವರದಿಯಾಗಿತ್ತು. ಮೈಕ್ರೋಸಾಫ್ಟ್ ಒಡೆತನದ ಗಿಟ್ಹಬ್ ಶೇ 10ರಷ್ಟು, ಅಂದರೆ 300 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಣೆ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Mon, 13 February 23