ಜಗತ್ತಿನ ಅತಿ ಶ್ರೀಮಂತರೊಬ್ಬರ ಆಸ್ತಿ ಬಗ್ಗೆ ಮುಂದೆ ಇಷ್ಟಾಗಬಹುದು ಎಂದು ಊಹಿಸಿರುವ ಒಂದು ಅಂದಾಜಿನ ವರದಿ ಇದು. ಆದರೆ ಬಹಳ ಆಸಕ್ತಿಕರವಾಗಿದೆ. ಅದು ಏನು ಗೊತ್ತಾ? ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ (Elon Musk) 1 ಟ್ರಿಲಿಯನ್ ಯುಎಸ್ಡಿ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ ಮೊದಲ ವ್ಯಕ್ತಿ ಆಗಬಹುದು ಮತ್ತು ಇದು 2024ನೇ ಇಸವಿಯಲ್ಲೇ ಸಂಭವಿಸಿ ಬಿಡಬಹುದು ಎಂದು ಹೊಸ ವರದಿ ಹೇಳುತ್ತದೆ. 1 ಲಕ್ಷ ಕೋಟಿ ಯುಎಸ್ಡಿ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 76.27 ಲಕ್ಷ ಕೋಟಿ ಆಗುತ್ತದೆ. ಎಲಾನ್ ಮಸ್ಕ್ ಸದ್ಯಕ್ಕೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳಲಾಗುತ್ತದೆ. ಕಳೆದ ವರ್ಷ ಅಮೆಜಾನ್ ಮಾಜಿ ಸಿಇಒ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ, ವಿಶ್ವದ ಅತ್ಯಂತ ಶ್ರೀಮಂತ ಎಂಬ ಕಿರೀಟ ತೊಟ್ಟುಕೊಂಡರು ಮಸ್ಕ್. ವಸ್ತು ಆಸ್ತಿಗಳ ಬಗ್ಗೆ ತಮಗೆ ಆಸಕ್ತಿಯಿಲ್ಲ ಎಂದು ಮಸ್ಕ್ ಹಲವು ಬಾರಿ ಹೇಳಿದ್ದರೂ ಅಂತಿಮವಾಗಿ ಅವರ ಎಲ್ಲಾ ವೈಯಕ್ತಿಕ ಆಸ್ತಿಗಳನ್ನು ಪುರಾವೆಯಾಗಿ ಮಾರಾಟ ಮಾಡುತ್ತಾರೆ. ಟಿಪಾಲ್ಟಿ ಅಪ್ರೂವ್‌ನ ಹೊಸ ಅಧ್ಯಯನವು ಮಸ್ಕ್ ಅವರು 1 ಟ್ರಿಲಿಯನ್ ಯುಎಸ್ಡಿ ನಿವ್ವಳ ಮೌಲ್ಯವನ್ನು ಸಂಗ್ರಹಿಸುವ ಮೊದಲ ವ್ಯಕ್ತಿ ಆಗಬಹುದು ಎಂದು ಸೂಚಿಸಿದೆ.
ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಮಸ್ಕ್‌ನ ನಿವ್ವಳ ಮೌಲ್ಯವು 260 ಶತಕೋಟಿ ಯುಎಸ್ಡಿಗಿಂತ ಹೆಚ್ಚಿದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 19.83 ಲಕ್ಷ ಕೋಟಿ ಆಗುತ್ತದೆ. ಇದು ಬೆಜೋಸ್ ಅವರ ಪ್ರಸ್ತುತ ಅಂದಾಜು 190 ಶತಕೋಟಿ ಡಾಲರ್ಗಿಂತ ಸುಮಾರು 70 ಶತಕೋಟಿ ಡಾಲರ್ಗಿಂತ ಹೆಚ್ಚು. 2020ರಿಂದ ಮಸ್ಕ್ ಆಸ್ತಿಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ಟೆಸ್ಲಾ ಷೇರಿನ ಬೆಲೆ. ಆ ಕಂಪೆನಿಯಲ್ಲಿ ಮಸ್ಕ್ ಹೊಂದಿರುವ ಪಾಲಿಗೆ ಕಳೆದ ಕೆಲವು ವರ್ಷಗಳಿಂದ ಅವರ ಸಂಪತ್ತು ಗಗನಕ್ಕೇರಿದೆ. ಸ್ಪೇಸ್‌ಎಕ್ಸ್ ಸಹ ಮಸ್ಕ್‌ನ ನಿವ್ವಳ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಬೆಳವಣಿಗೆಯನ್ನು ವೇಗಗೊಳಿಸಬಹುದು.
“2017ರಿಂದ ಮಸ್ಕ್ ಅವರ ಸಂಪತ್ತು ವಾರ್ಷಿಕ ಸರಾಸರಿ ಶೇಕಡಾ 129ರಷ್ಟು ಹೆಚ್ಚಳವನ್ನು ತೋರಿಸಿದ್ದು, ಇದರಿಂದಾಗಿ ಅವರು ಕೇವಲ ಎರಡಕ್ಕಿಂತ ಕಡಿಮೆ ವರ್ಷಗಳಲ್ಲಿ ಟ್ರಿಲಿಯನ್ ಡಾಲರ್ ಕ್ಲಬ್‌ಗೆ ಪ್ರವೇಶಿಸುವುದನ್ನು ಸಂಭಾವ್ಯವಾಗಿ ನೋಡಬಹುದು. 2024ರ ವೇಳೆಗೆ 52ನೇ ವಯಸ್ಸಿನಲ್ಲಿ 1.38 ಟ್ರಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯವನ್ನು ಸಾಧಿಸಬಹುದು,” ಎಂದು ಟಿಪಾಲ್ಟಿ ಅಧ್ಯಯನ ನಡೆಸಿದವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. “ಸ್ಪೇಸ್‌ಎಕ್ಸ್ ಉಪಗ್ರಹಗಳು, ಐಎಸ್ಎಸ್ ಸರಬರಾಜು ಮತ್ತು ಜನರು ಸೇರಿದಂತೆ ಬಾಹ್ಯಾಕಾಶಕ್ಕೆ ವಿವಿಧ ವಸ್ತುಗಳನ್ನು ಕಳುಹಿಸಲು ಸರ್ಕಾರಿ ಮತ್ತು ವಾಣಿಜ್ಯ ಗ್ರಾಹಕರಿಗೆ ಶುಲ್ಕ ವಿಧಿಸುವ ಮೂಲಕ ಬೃಹತ್ ಆದಾಯವನ್ನು ಉತ್ಪಾದಿಸುತ್ತದೆ,” ಎಂದು ಅದು ಸೇರಿಸಿದೆ.
ಇತರ ಬಿಲಿಯನೇರ್‌ಗಳು ಸಹ ಟ್ರಿಲಿಯನ್ ಡಾಲರ್ ಶ್ರೇಣಿಯನ್ನು ತಲುಪುವ ನಿರೀಕ್ಷೆಯಿದ್ದು, ಆದರೆ ಮಸ್ಕ್ಗಿಂತ ಮೊದಲು ಅಲ್ಲ ಎಂದು ವರದಿ ಹೇಳಿದೆ. ಟಿಕ್‌ಟಾಕ್‌ನ ಸಂಸ್ಥಾಪಕರಾದ ಜಾಂಗ್ ಯಿಮಿಂಗ್ ಅವರು 2026ರ ವೇಳೆಗೆ 42ನೇ ವಯಸ್ಸಿನಲ್ಲಿ 1 ಟ್ರಿಲಿಯನ್ ಯುಎಸ್ಡಿ ನಿವ್ವಳ ಮೌಲ್ಯವನ್ನು ತಲುಪುತ್ತಾರೆ ಎಂದು ಅಂದಾಜಿಸಲಾಗಿದೆ. ಬೆಜೋಸ್ 2030ರ ವರೆಗೆ ಟ್ರಿಲಿಯನ್ ಡಾಲರ್ ಮಿತಿಯನ್ನು ಮುಟ್ಟದಿರಬಹುದು. ಬೆಜೋಸ್ ವಿಶ್ವದ ಯಾವುದೇ ಇತರ ವಾಣಿಜ್ಯೋದ್ಯಮಿಗಿಂತ ಮೊದಲು 100 ಬಿಲಿಯನ್ ಯುಎಸ್ಡಿ ತಲುಪುವ ಮೂಲಕ ಅಷ್ಟು ಸಂಪತ್ತು ಸಂಪಾದಿಸಿದ ಮೊದಲಿಗರು ಎಂಬ ಶ್ರೇಯಕ್ಕೆ ಪಾತ್ರರಾದರು.
ಈ ವರದಿಯಲ್ಲಿ ತಿಳಿಸಿದಂತೆ 1.38 ಲಕ್ಷ ಕೋಟಿ ಡಾಲರ್ ಅನ್ನು ಮಸ್ಕ್ ಸಂಪಾದಿಸಿದ್ದೇ ಆದಲ್ಲಿ ಭಾರತದ ಕರೆನ್ಸಿ ಲೆಕ್ಕದಲ್ಲಿ 105,25,411.80 ಕೋಟಿ ರೂಪಾಯಿ (105.25 ಲಕ್ಷ ಕೋಟಿ ರೂ.) ಆಗುತ್ತದೆ. 2022-23ನೇ ಸಾಲಿಗೆ ಭಾರತದ ಬಜೆಟ್ 39.45 ಲಕ್ಷ ಕೋಟಿ ರೂಪಾಯಿ. ಅಂದರೆ ಎಲಾನ್ ಮಸ್ಕ್ ತನ್ನ ಆಸ್ತಿಯಲ್ಲಿ ಮೂರು ವರ್ಷ ಇಡೀ ಭಾರತದ ವೆಚ್ಚವನ್ನು ಭರಿಸಬಹುದಾಗಿರುತ್ತದೆ. ಇನ್ನು 2022-23ನೇ ಸಾಲಿನ ಕರ್ನಾಟಕದ ಬಜೆಟ್ ನೋಡುವುದಾದರೆ 40ರಿಂದ 45 ವರ್ಷಕ್ಕೆ ಸಾಲುತ್ತದೆ.
ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಯಾವಾಗ ಬಿಡುಗಡೆ ಎಂದಿದ್ದಕ್ಕೆ ಎಲಾನ್ ಮಸ್ಕ್ ನೀಡಿದ ಉತ್ತರ ಏನು ಗೊತ್ತಾ?